ಹನೂರು ಪಟ್ಟಣದ ವಿವಿಧೆಡೆ ಇನ್‌ಸ್ಪೆಕ್ಟರ್ ಆನಂದಮೂರ್ತಿ ತೆರಳಿ ಬಾಲ ಕಾರ್ಮಿಕರ ಸಂಬಂಧ ಪರಿಶೀಲಿಸಿದರು. ಶಂಕರ್, ಸಖ್ರುನಾಯ್ಕ, ಚಂದ್ರಶೇಖರ್, ನಂಜುಂಡಸ್ವಾಮಿ ಇತರರಿದ್ದರು. 
ಚಾಮರಾಜನಗರ

ಬಾಲಕರನ್ನು ದುಡಿಮೆಗೆ ಬಳಸಿಕೊಂಡರೆ ಶಿಕ್ಷೆ

ನಾಗೇಶ ಎಸ್
ಹನೂರು: ಬಾಲಕರನ್ನು ದುಡಿಮೆಗೆ ಬಳಸಿಕೊಳ್ಳುವುದು ಕಾನೂನು ರೀತಿ ಅಪರಾಧ. ಈ ಬಗ್ಗೆ ಪ್ರತಿಯೊಬ್ಬರೂ ಮನದಟ್ಟು ಮಾಡಿಕೊಂಡು ಕೆಲಸ ನಿರ್ವಹಿಸಬೇಕು ಎಂದು ಇನ್‌ಸ್ಪೆಕ್ಟರ್ ಸಿ.ಆನಂದಮೂರ್ತಿ ಸೂಚಿಸಿದರು.
ಪಟ್ಟಣದ ಅಂಗಡಿ, ಹೊಟೇಲ್, ಬೇಕರಿ, ಟೈಲರ್ ಷಾಪ್, ಕಟ್ಟಡ ನಿರ್ಮಾಣ ಸ್ಥಳ, ವರ್ಕ್‌ಷಾಪ್ ಇತರೆಡೆ ಶನಿವಾರ ದಿಢೀರ್ ಭೇಟಿ ಪರಿಶೀಲಿಸಿ ಮಾತನಾಡಿದ ಅವರು, ಮಕ್ಕಳು ದೇಶದ ಭವಿಷ್ಯವನ್ನು ರೂಪಿಸುವ ರೂವಾರಿಗಳು. ಪ್ರತಿ ಮಗು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಸರ್ಕಾರ ಹೆಚ್ಚಿನ ಒತ್ತು ನೀಡಿ, ಹಲವು ಸವಲತ್ತುಗಳನ್ನು ನೀಡುತ್ತಿದೆ ಎಂದು ತಿಳಿಸಿದರು.
ಮಕ್ಕಳು ಶಾಲೆಯಲ್ಲಿ ಇರಬೇಕು. ಆದರೆ ಪಟ್ಟಣದಲ್ಲಿ ಕೆಲವರು ದುಡಿಮೆಗೆ ಬಳಸಿಕೊಳ್ಳುತ್ತಿದ್ದಾರೆ ಎಂಬುದು ಗಮನಕ್ಕೆ ಬಂದಿದೆ. ಹಾಗಾಗಿ ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ. ಬಾಲ ಕಾರ್ಮಿಕ ಪದ್ಧತಿ ಕಾನೂನಿನ ಅಪರಾಧ. ಸಂಬಂಧಪಟ್ಟವರು ಶಿಕ್ಷೆಗೆ ಒಳಗಾಗಬೇಕಾಗುತ್ತದೆ. ಆದ್ದರಿಂದ ಈ ಬಗ್ಗೆ ಪ್ರತಿಯೊಬ್ಬರೂ ಎಚ್ಚರ ವಹಿಸಬೇಕು. ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಸಹಕಾರ ನೀಡಬೇಕು. ಯಾವುದೇ ಕಾರಣಕ್ಕೂ ಬಾಲಕರನ್ನು ಕೆಲಸಕ್ಕೆ ಇಟ್ಟುಕೊಳ್ಳಬಾರದು. ತಪ್ಪಿದ್ದಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ. ಇನ್ನು ಬಾಲ ಕಾರ್ಮಿಕರು ಕಂಡು ಬಂದಲ್ಲಿ ಕೂಡಲೇ ಮಾಹಿತಿ ನೀಡಬೇಕು. ಈ ಬಗ್ಗೆ ಅಗತ್ಯ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಎಸೈ ಶಂಕರ್, ಸಿಬ್ಬಂದಿ ಸಕ್ರುನಾಯ್ಕ, ಪ್ರಕಾಶ್, ನಂಜುಂಡಸ್ವಾಮಿ, ಚಂದ್ರಶೇಖರ್ ಹಾಗೂ ಆನಂದನಾಯ್ಕ ಇದ್ದರು.