ಕೊಳ್ಳೇಗಾಲ ಪಟ್ಟಣದ ತಾಪಂ ಸಭಾಂಗಣದಲ್ಲಿ ಪ್ರಜಾಸೇವಾ ಆಂದೋಲನದಲ್ಲಿ ಸಾರ್ವಜನಿಕರು ನೀಡಿದ ದೂರು ಸ್ವೀಕರಿಸಿ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿದರು. ಬಸವರಾಜು, ರಾಜೇಂದ್ರ, ಕುಮಾರ್, ಮಂಜುಳಾ, ರವೀಂದ್ರ ಇದ್ದಾರೆ.
ಕೊಳ್ಳೇಗಾಲ: ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಪ್ರಜಾಸೇವಾ ಆಂದೋಲನದಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ಜನರ ಸಮಸ್ಯೆಗಳನ್ನು ಆಲಿಸಿದರು.
ಒಕ್ಕಲಿಗರ ತಾಲೂಕು ಸಂಘದ ಅಧ್ಯಕ್ಷ ಶೇಖರ್ ಮನವಿ ಸಲ್ಲಿಸಿ, ಪಟ್ಟಣದಲ್ಲಿ ಒಕ್ಕಲಿಗ ಸಮಾಜದ 200 ಕುಟುಂಬ ವಾಸವಿದ್ದು, ಅಂತ್ಯ ಸಂಸ್ಕಾರಕ್ಕೆ ಸ್ಥಳವಿಲ್ಲದೆ ತಹಸೀಲ್ದಾರ್‌ಗೆ ಅರ್ಜಿ ಸಲ್ಲಿಸಿದ್ದರಿಂದ ಬಸ್ತೀಪುರ- ಕುಣಗಳ್ಳಿ ಮಾರ್ಗದಲ್ಲಿ ಕಂದಾಯ ಅಧಿಕಾರಿಗಳು ಸ್ಥಳ ಗುರುತು ಮಾಡಿಕೊಟ್ಟಿದ್ದರು. ಈಗಾಗಲೇ ಇಬ್ಬರ ಅಂತ್ಯ ಸಂಸ್ಕಾರ ಆಗಿದ್ದು, ಇದೀಗ ಅಕ್ಕ-ಪಕ್ಕದವರು ಅಂತ್ಯಸಂಸ್ಕಾರ ಮಾಡಲು ಆಕ್ಷೇಪಿಸುತ್ತಿದ್ದಾರೆ. ಹಾಗಾಗಿ ನಮಗೆ ಆದೇಶ ಪ್ರತಿ ನೀಡಬೇಕು ಎಂದು ಮನವಿ ಮಾಡಿದರು.
ಈ ಬಗ್ಗೆ ತಹಸೀಲ್ದಾರ್ ಬಸವರಾಜು ಪ್ರತಿಕ್ರಿಯಿಸಿ, ಪಟ್ಟಣ ವ್ಯಾಪ್ತಿಯಲ್ಲಿ ಕೆರೆ, ಬಂಡಿದಾರಿ ಹೊರತುಪಡಿಸಿ ಸ್ಮಶಾನಕ್ಕೆ ಜಾಗ ನೀಡಲು ಸ್ಥಳವಿಲ್ಲ. ಪ್ರತ್ಯೇಕವಾಗಿ ಯಾವುದೇ ಸಮುದಾಯಕ್ಕೆ ಸ್ಮಶಾನ ನೀಡಲು ಸಾಧ್ಯವಿಲ್ಲ. 4 ಕಡೆ ಸಾರ್ವಜನಿಕ ಸ್ಥಳವಿದೆ. ಎಲ್ಲಿ ಬೇಕಾದರೂ ಅಂತ್ಯಸಂಸ್ಕಾರ ಮಾಡಬಹುದು. ಆಕ್ಷೇಪಣೆಗಳು ಕೇಳಿ ಬಂದರೆ ನಮಗೆ ದೂರು ನೀಡಿದರೆ ಬಗೆಹರಿಸುತ್ತೇವೆ. ಕುಣಗಳ್ಳಿ ರಸ್ತೆಯಲ್ಲಿ ವಿದ್ಯುತ್ ಚಿತಾಗಾರ ನಿರ್ಮಿಸಲಾಗುತ್ತದೆ ಎಂದರು.
ಪಾಳ್ಯ ಗ್ರಾಮದ ಮಹಿಳೆ ವೀಣಾ ಮನವಿ ಸಲ್ಲಿಸಿ, ಗ್ರಾಮದಿಂದ ನಮ್ಮನ್ನು ಬಹಿಷ್ಕಾರ ಹಾಕಿ, ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಜಿಲ್ಲಾಧಿಕಾರಿ, ಎಸ್ಪಿಗೂ ದೂರು ನೀಡಿದ್ದೇವೆ. ಮೂರು ಬಾರಿ ಪೊಲೀಸರಿಗೆ ದೂರು ನೀಡಿದ್ದೇನೆ. ಅಧಿಕಾರಿಗಳಿಗೆ ದೂರಿದರೆ, ಯಜಮಾನರ ಕಾಲಿಗೆ ಅಡ್ಡಬಿದ್ದು ಬೇಡಿಕೋ ಎನ್ನುತ್ತಾರೆ. ನ್ಯಾಯ ಕೊಡಬೇಕಾದ ಅಧಿಕಾರಿಗಳು ಹೀಗೆ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದರು. ಶಾಸಕರು ಮಾತನಾಡಿ, ಬಹಿಷ್ಕರಿಸುವುದು ಕಾನೂನು ಬಾಹಿರ. ಮಹಿಳೆ ದೂರಿನ ಆಧಾರದ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ನಗರಸಭೆ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಬಹುತೇಕ ಕಡೆಗಳಲ್ಲಿ ಕೆಟ್ಟು ನಿಂತಿವೆ. ನೀರಿನ ಸಮಸ್ಯೆಯಾಗಿದೆ ಎಂದು ಪಟ್ಟಣ ನಿವಾಸಿ ಶಂಕರ್‌ನಾಗ್ ದೂರಿದರು. ಪರಿಶೀಲಿಸಿ ದುರಸ್ತಿಪಡಿಸಲು ಶಾಸಕರು ಸೂಚಿಸಿದರು.
ಸಭೆಯಲ್ಲಿ ತಾಪಂ ಇಒ ಕುಮಾರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಾಜೇಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಮಂಜುಳಾ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.