ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿಯ ಇನ್ಫಿನಿಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಶಿಬಿರದಲ್ಲಿ ಕಣ್ಣಿನ ತಪಾಸಣೆ ಮಾಡಲಾಯಿತು.
- ಇನ್ಫಿನಿಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೆಎಸ್‌ಬಿ ಪ್ರತಿಷ್ಠಾನ ಮತ್ತು ಜಿಲ್ಲಾ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಸಹಯೋಗ
- ನೇತ್ರ ತಜ್ಞ ಡಾ.ಅನಂತಮೂರ್ತಿ ಅವರಿಂದ ತಪಾಸಣೆ
ಚಾಮರಾಜನಗರ: ತಾಲೂಕಿನ ಸಂತೇಮರಹಳ್ಳಿಯ ಇನ್ಫಿನಿಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೆಎಸ್‌ಬಿ ಪ್ರತಿಷ್ಠಾನ ಮತ್ತು ಜಿಲ್ಲಾ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಸಹಯೋಗದಲ್ಲಿ ಶನಿವಾರ ಕಣ್ಣಿನ ಉಚಿತ ತಪಾಸಣಾ ಶಿಬಿರ ನಡೆಯಿತು.
ಇದೇ ವೇಳೆ ನೇತ್ರ ತಜ್ಞ ಡಾ.ಅನಂತಮೂರ್ತಿ ಮಾತನಾಡಿ, ಹೆಚ್ಚಿನ ಜನರು ದೃಷ್ಟಿ ಮಸುಕಾಗಿದ್ದರೆ ಅಥವಾ ಹೊಸ ಕನ್ನಡಕ ಬೇಕಾದರೆ ಮಾತ್ರ ಕಣ್ಣಿನ ವೈದ್ಯರನ್ನು ಭೇಟಿ ಮಾಡುತ್ತಾರೆ. ಆದರೆ ಕಣ್ಣಿನ ಸಮಸ್ಯೆಯ ಕಾಣಿಸಿಕೊಳ್ಳುವ ಮೊದಲೇ ಗಂಭೀರ ವೈದ್ಯಕೀಯ ಪರಿಸ್ಥಿತಿಗಳು ಎದುರಾಗಬಹುದುದೆಂಬ ಚಿಹ್ನೆಗಳು ಇವೆ ಎಂದು ಜನರಿಗೆ ತಿಳಿದಿಲ್ಲ. ಅದಕ್ಕಾಗಿಯೇ ಅದಕ್ಕಾಗಿಯೇ ನಿಯಮಿತ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತ ಎಂದು ಹೇಳಿದರು.
ಕಣ್ಣಿನ ಆರೋಗ್ಯ ದೇಹದ ಸಂಪೂರ್ಣ ಆರೋಗ್ಯದ ಸಂಕೇತವಾಗಿದೆ. ಮಕ್ಕಳಿಂದ ಹಿಡಿದು ವೃದ್ಧವರೆಗೂ ಕಾಲಕಾಲಕ್ಕೆ ಕಣ್ಣಿನ ತಪಾಸಣೆ ಮಾಡಿಸಿಕೊಂಡರೆ ದೊಡ್ಡ ಸಮಸ್ಯೆ ಇದ್ದರೆ ಪ್ರಾರಂಭಿಕ ಹಂತದಲ್ಲೇ ಗೊತ್ತಾಗುತ್ತದೆ. ದೃಷ್ಟಿ ಉತ್ತಮಗೊಳ್ಳುತ್ತದೆ ಎಂದು ಸಲಹೆ ನೀಡಿದರು.
ಜೆಎಸ್‌ಬಿ ಪ್ರತಿಷ್ಠಾನದ ಎಸ್.ಶಶಿಕುಮಾರ್ ಮಾತನಾಡಿ, ನಮ್ಮ ಸಂಸ್ಥೆಯು ಹಲವಾರು ವರ್ಷಗಳಿಂದ ನಿರಂತರವಾಗಿ ಜಿಲ್ಲಾದ್ಯಂತ ವಿವಿಧ ಮಾದರಿಯ ಆರೋಗ್ಯ ಶಿಬಿರಗಳನ್ನು ಮಾಡುತ್ತಿದ್ದು, ನೂರಾರು ಜನರಿಗೆ ಚಿಕಿತ್ಸೆ ಹಾಗೂ ಔಷಧ ನೀಡಿ ಸಾಮಾಜಿಕವಾಗಿ ಸ್ಪಂದಿಸುವ ಕೆಲಸ ಮಾಡುತ್ತಿದೆ. ಜನರು ಇವುಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಶಿಬಿರದಲ್ಲಿ ಸುಮಾರು 50ಕ್ಕೂ ಹೆಚ್ಚಿನ ಜನರು ತಪಾಸಣೆ, ಔಷಧ ಮತ್ತು ಕನ್ನಡಕಗಳನ್ನು ಪಡೆದುಕೊಂಡರು. ಜತೆಗೆ ಶಸ್ತ್ರಚಿಕಿತ್ಸೆಗೆ ಆಯ್ಕೆಯಾದವರನ್ನು ನೊಂದಣಿ ಮಾಡಿಕೊಳ್ಳಲಾಯಿತು. ಚಾಮರಾಜನಗರ ವೈದ್ಯಕೀಯ ಸಂಸ್ಥೆಯ ವೈದ್ಯರಾದ ಡಾ.ಮಾನಿಯಾ, ಡಾ.ಆಲೀನ ರೋಸ್, ಡಾ.ಮಹಮ್ಮದ್ ಇರ್ಫಾನ್, ನೇತ್ರ ತಪಾಸಕರಾದ ಚೈತ್ರ, ಸಂಯುಕ್ತ, ಇನ್ಫಿನಿಟಿ ಆಂಗ್ಲ ಮಾಧ್ಯಮ ಶಾಲೆಯ ಸಿಬ್ಬಂದಿ ಬೆಳ್ಳಪ್ಪ, ಮಣಿಕಂಠ, ಮಹದೇವಸ್ವಾಮಿ, ಮಹದೇವಮ್ಮ, ವಸಂತ ಇತರರು ಇದ್ದರು.