ಮೆದಗನಾಣೆ ಗಿರಿಜನರು ಪಡಿತರ ಆಹಾರ ಪದಾರ್ಥವನ್ನು ಅರಣ್ಯ ಪ್ರದೇಶದ ದಾರಿಯಲ್ಲಿ ಹೊತ್ತು ತರುತ್ತಿರುವುದು.  
ಚಾಮರಾಜನಗರ

ಮೆದಗನಾಣೆಗೆ ವಾಹನ ಸೌಕರ್ಯ ಕಲ್ಪಿಸಿ

ಹನೂರು: ಪಡಿತರ ಆಹಾರ ಪಡೆಯಲು ಗ್ರಾಮಕ್ಕೆ ವಾಹನ ಸೌಕರ್ಯ ಕಲ್ಪಿಸುವಂತೆ ತಾಲೂಕಿನ ಮಲೆಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಂಚಿನ ತಪ್ಪಲಿನ ಮೆದಗನಾಣೆ ಹಾಡಿಯ ಗಿರಿಜನರು ಒತ್ತಾಯಿಸಿದ್ದಾರೆ.
ಅರಣ್ಯ ಪ್ರದೇಶದೊಳಗಿರುವ ಈ ಗ್ರಾಮದಲ್ಲಿ 45ಕ್ಕೂ ಹೆಚ್ಚು ಕುಟುಂಬಗಳಿದ್ದು, ಹಲವು ದಶಕಗಳಿಂದಲೂ ವಾಸವಾಗಿದೆ. ಆದರೆ ಸಮರ್ಪಕ ರಸ್ತೆಯಿಲ್ಲ. ಕುಡಿಯುವ ನೀರಿಗಾಗಿ ತೊಂದರೆ ಅನುಭವಿಸುವಂತಾಗಿದೆ.
ಸ್ವಾತಂತ್ರ್ಯ ಬಂದು 79 ಕಳೆದರೂ ವಿದ್ಯುತ್ ಸಂಪರ್ಕವಿರಲಿಲ್ಲ. ನಮ್ಮ ಪ್ರತಿಭಟನೆ ಫಲವಾಗಿ ಇದೀಗ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ನೀಡಲಾಗಿದೆ. ಆದರೆ ಪಡಿತರ ಆಹಾವನ್ನು ಪಡೆಯಲು ಮ.ಬೆಟ್ಟ ಹಾಗೂ ಹಳೆಯೂರು ಗ್ರಾಮಕ್ಕೆ ಆಗಮಿಸಬೇಕಿದ್ದು, ಅರಣ್ಯ ಪ್ರದೇಶದ ಹಾದಿಯಲ್ಲಿ ಕಾಡು ಪ್ರಾಣಿಗಳ ಹಾವಳಿ ನಡುವೆ ಕಾಲ್ನಡಿಗೆಯಲ್ಲಿ ತೆರಳಿ ಹೊತ್ತು ತರಬೇಕಿದೆ. ಕೆಲಸ ಕಾರ್ಯಗಳಿಗಾಗಿ ಮ.ಬೆಟ್ಟಕ್ಕೆ ಇದೇ ಹಾದಿಯಲ್ಲಿ ತೆರಳಬೇಕಿದೆ. ಇದರಿಂದ ಪಡುಬಾರದ ಕಷ್ಟ ಪಡುತ್ತಿದ್ದೇವೆ. ಗ್ರಾಮಕ್ಕೆ ಸಾರಿಗೆ ಸೌಕರ್ಯವನ್ನು ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಹಲವು ವರ್ಷಗಳಿಂದ ಮನವಿ ಮಾಡುತ್ತಲೇ ಬಂದಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ.
ಆದ್ದರಿಂದ ಸಂಬಂಧ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇನ್ನಾದರೂ ಇತ್ತ ಗಮನಹರಿಸಿ ಪಡಿತರ ಆಹಾರ ಪಡೆಯುವ ಸಮಯದಲ್ಲಾದರೂ ಗ್ರಾಮಕ್ಕೆ ಸಾರಿಗೆ ಸೌಕರ್ಯ ಕಲ್ಪಿಸುವ ಮೂಲಕ ಅನುಕೂಲ ಕಲ್ಪಿಸುವಂತೆ ಮೆದಗನಾಣೆಯ ರಾಮು ಒತ್ತಾಯಿಸಿದ್ದಾರೆ.