ಶ್ರೀಮಲೆ ಮಹದೇಶ್ವರ ಬೆಟ್ಟದಲ್ಲಿ ಕುಂದು ಕೊರತೆ ಸಂಬಂಧ ಸೋಲಿಗ ಮುಖಂಡರ ಸಭೆ ನಡೆಯಿತು. ಮುತ್ತಯ್ಯ, ದೊಡ್ಡಸಿದ್ದಯ್ಯ, ಗಿರಿಯ, ಮಹದೇವಸ್ವಾಮಿ ಮತ್ತಿತರರಿದ್ದರು.  
ಚಾಮರಾಜನಗರ

ಮೆಂದಾರೆ ಗ್ರಾಮಕ್ಕೆ ಮೂಲಸೌಕರ್ಯ ಕಲ್ಪಿಸಿ

ಪ್ರಜ್ವಲ್.ಎನ್

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಕ್ಕೆ ರಾಜ್ಯ ಮೂಲ ಆದಿವಾಸಿ ಸಂಘಟನೆಯ ಒಕ್ಕೂಟದ ಸಂಯೋಜಕ ವಿ.ಮುತ್ತಯ್ಯ ಒತ್ತಾಯ
ಹನೂರು: ತಾಲೂಕಿನ ಶ್ರೀ ಮಲೆಮಹದೇಶ್ವರ ಬೆಟ್ಟ ತಪ್ಪಲಿನ ಮೆಂದಾರೆ ಗ್ರಾಮಕ್ಕೆ ಮರುವಸತಿ ಸೌಕರ್ಯ ಕಲ್ಪಿಸುವಂತೆ ರಾಜ್ಯ ಮೂಲ ಆದಿವಾಸಿ ಸಂಘಟನೆಯ ಒಕ್ಕೂಟದ ಸಂಯೋಜಕ ವಿ.ಮುತ್ತಯ್ಯ ಒತ್ತಾಯಿಸಿದರು.
ತಾಲೂಕಿನ ಶ್ರೀಮಲೆ ಮಹದೇಶ್ವರ ಬೆಟ್ಟದ ಬುಡಕಟ್ಟು ಆಶ್ರಮ ಶಾಲೆಯಲ್ಲಿ ಭಾನುವಾರ ಸರ್ಕಲ್ ಸೋಲಿಗ ಅಭಿವೃದ್ಧಿ ಸಂಘದಿಂದ ಆಯೋಜಿಸಿದ್ದ ಗಿರಿಜನರ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದರು.
ಅಗತ್ಯ ಮೂಲಸೌಕರ್ಯವಿಲ್ಲದ ಗಿರಿಜನರ ಮೆಂದಾರೆ ಗ್ರಾಮಕ್ಕೆ ಸರ್ಕಾರ ಪುನರ್ವಸತಿ ಕಲ್ಪಿಸುವುದಾಗಿ ಘೋಷಿಸಿ 2 ವರ್ಷ ಕಳೆದಿದೆ. ಸರ್ವೇ ಕಾರ್ಯವೂ ಆಗಿದೆ. ಆದರೆ ಈವರೆಗೂ ಯಾವುದೇ ಕ್ರಮವಾಗಿಲ್ಲ. ಆದ್ದರಿಂದ ಸರ್ಕಾರ ಹಾಗೂ ಜಿಲ್ಲಾಡಳಿತ ಈ ಬಗ್ಗೆ ಕ್ರಮವಹಿಸಿ ಅನುಕೂಲ ಕಲ್ಪಿಸಬೇಕು. ಇನ್ನು ಈ ಭಾಗದ ಗಿರಿಜನರ ಗ್ರಾಮಗಳಾದ ಮೆದಗನಾಣೆ, ಪಾಲಾರ್, ಗೊರಸಾಣೆ, ಕೀರನಹೊಲ, ಆನೆಹೊಲ, ಕೊಂಬುಡಿಕ್ಕಿ ಹಾಗೂ ಆಲಂಬಾಡಿಯಲ್ಲಿ ತಲೆದೂರಿರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದ ಗಿರಿಜನರು ಸಮಸ್ಯೆ ಎದುರಿಸುವಂತಾಗಿದೆ. ಬುಡಕಟ್ಟು ಆಶ್ರಮ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದು, ಮಕ್ಕಳ ಶಿಕ್ಷಣಿಕ ಪ್ರಗತಿಗೆ ತೊಡಕಾಗಿ ಪರಿಣಮಿಸಿದೆ. ಆದ್ದರಿಂದ ಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಮನದಟ್ಟು ಮಾಡಿಕೊಂಡು ಸೌಕರ್ಯ ಕಲ್ಪಿಸಿ ಕೊಡಬೇಕು ಎಂದು ತಿಳಿಸಿದರು.
ಇದೇ ವೇಳೆ ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.
ತಾಲೂಕು ಸೋಲಿಗ ಅಭಿವೃದ್ಧಿ ಸಂಘದ ಅಧ್ಯಕ್ಷ ದೊಡ್ಡಸಿದ್ದಯ್ಯ, ಕಾರ್ಯದರ್ಶಿ ರಂಗೇಗೌಡ, ಮ.ಬೆಟ್ಟ ಸರ್ಕಲ್ ಅಧ್ಯಕ್ಷ ಗಿರಿಯ, ಕಾರ್ಯದರ್ಶಿ ಮಾದೇಶ್, ಸಂಯೋಜಕರಾದ ಮಹದೇವಸ್ವಾಮಿ, ರಾಜಪ್ಪ, ಮುಖಂಡರಾದ ನಾಗ, ಮಾದಯ್ಯ,ಕುಮಾರ್, ಚಿಕ್ಕಮಾದ, ಸಣ್ಣಪ್ಪ, ಲಕ್ಷ್ಮಣ, ಬಸಮ್ಮ, ಮಾದೇವಿ, ರಾಜಮ್ಮ, ರತ್ನಮ್ಮ ಇತರರಿದ್ದರು.