ಕೊಪ್ಪ ಭಾಗದಿಂದ ಮಿಣ್ಯಂ ಸರ್ಕಾರಿ ಪ್ರೌಢಶಾಲೆಗೆ ಕಾಲ್ನಡಿಗೆಯಲ್ಲಿ ತೆರಳುತ್ತಿರುವ ವಿದ್ಯಾರ್ಥಿಗಳು.
ಹನೂರು: ತಾಲೂಕಿನ ಮಿಣ್ಯಂ ಸರ್ಕಾರಿ ಪ್ರೌಢಶಾಲೆಗೆ ತೆರಳುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ನಿಗದಿತ ಸಮಯದಲ್ಲಿ ಬಸ್ ಸೌಕರ್ಯ ಕಲ್ಪಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕಾಡಂಚಿನ ಪ್ರದೇಶದಲ್ಲಿರುವ ಪ್ರೌಢಶಾಲೆಗೆ 4 ಕಿ.ಮೀ. ದೂರವಿರುವ ಕೊಪ್ಪ, ಕಳಗಬ್ಬೆದೊಡ್ಡಿ, ಗಾಜನೂರು ಹಾಗೂ ಕರಿಬೇವಿನ ದೊಡ್ಡಿಯಿಂದ ಸುಮಾರು 35ಕ್ಕೂ ಹೆಚ್ಚು ವಿದ್ಯಾರ್ಥಿಗಳು ತೆರಳುತ್ತಿದ್ದಾರೆ. ಬೆಳಗ್ಗೆ ಹನೂರಿನಿಂದ ಈ ಭಾಗಕ್ಕೆ ತೆರಳುವ ಕೆಎಸ್‌ಆರ್‌ಟಿಸಿ ಬಸ್ ಮಿಣ್ಯಂಗೆ 10.15 ಕ್ಕೆ ತಲುಪುತ್ತದೆ. ಹಾಗೆಯೇ ಇಲ್ಲಿಂದ ಸಂಜೆ 4ಕ್ಕೆ ಹೊರಡುತ್ತದೆ. ಹಾಗಾಗಿ ಶಾಲೆ ಆರಂಭ ಹಾಗೂ ಬಿಡುವ ಅವಧಿಯಲ್ಲಿ ಬಸ್ ಸೌಕರ್ಯವಿಲ್ಲದೆ ವಿದ್ಯಾರ್ಥಿಗಳು ನಿತ್ಯ ನಡೆದುಕೊಂಡೇ ಹೋಗಬೇಕಿದೆ. ಶಾಲಾ ಅವಧಿಗೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ ಬಸ್ ಸೌಕರ್ಯ ಕಲ್ಪಿಸುವಂತೆ ಸಂಬಂಧಪಟ್ಟ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಜನಪ್ರತಿನಿಧಿಗಳು, ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಗಮನಹರಿಸಿ ಶಾಲಾ ಅವಧಿಗೆ ಅನುಗುಣವಾಗಿ ಬಸ್ ಸೌಕರ್ಯ ಕಲ್ಪಿಸುವಂತೆ ಕೊಪ್ಪ ಗ್ರಾಮದ ನಾಗರಾಜು ಸೇರಿದಂತೆ ಹಲವರು ಒತ್ತಾಯಿಸಿದ್ದಾರೆ.