ಮಲೆಮಹದೇಶ್ವರ ಬೆಟ್ಟದಲ್ಲಿ ಭೀಮನ ಅಮಾವಾಸ್ಯೆ ಹಿನ್ನೆಲೆ ಪ್ರಾಧಿಕಾರದ ಕಾರ್ಯದರ್ಶಿ ಜಿ.ಪುರುಷೋತ್ತಮ ಅಧ್ಯಕ್ಷತೆಯಲ್ಲಿ ನೌಕರರ ಸಭೆ ನಡೆಯಿತು. ಚಂದ್ರಶೇಖರ್, ಮಹದೇವಸ್ವಾಮಿ, ಜನಾರ್ದನ್ ಇತರರಿದ್ದರು.  
ಚಾಮರಾಜನಗರ

ಮಾದಪ್ಪನ ಭಕ್ತರಿಗೆ ಮೂಲ ಸೌಕರ್ಯಕಲ್ಪಿಸಿ

ಕಿರಣ್ ಗೌಡ.ಜಿ

ಪ್ರಮುಖ ಮುಖ್ಯಾಂಶಗಳು

  • ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಿ.ಪುರುಷೋತ್ತಮ ಸೂಚನೆ
  • ಭೀಮನ ಅಮಾವಾಸ್ಯೆ ಪ್ರಯುಕ್ತ ಪೂರ್ವಭಾವಿ ಸಭೆ

ಹನೂರು :

ಭೀಮನ ಅಮಾವಾಸ್ಯೆ ಪ್ರಯುಕ್ತ ಶ್ರೀ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಅಗತ್ಯ ಮೂಲ ಸೌಕರ್ಯ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಿ.ಪುರುಷೋತ್ತಮ ಸೂಚನೆ ನೀಡಿದರು.

ತಾಲೂಕಿನ ಮಲೆಮಹದೇಶ್ವರ ಬೆಟ್ಟದ ನಾಗಮಲೆ ಭವನದಲ್ಲಿ ಭೀಮನ ಅಮಾವಾಸ್ಯೆ ಹಿನ್ನೆಲೆ ಕೈಗೊಳ್ಳಬೇಕಾದ ಅಗತ್ಯ ಸಿದ್ಧತೆ ಸಂಬಂಧ ಬುಧವಾರ ಸಂಜೆ ಆಯೋಜಿಸಿದ್ದ ಪ್ರಾಧಿಕಾರದ ನೌಕರರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಈ ಅಮಾವಾಸ್ಯೆಗೆ ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಶ್ರೀ ಕ್ಷೇತ್ರಕ್ಕೆ ಆಗಮಿಸುತ್ತಾರೆ. ಅಗತ್ಯ ಮೂಲ ಸೌಕರ್ಯ ಒದಗಿಸುವುದರ ಜತೆಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುವುದು ಪ್ರಾಧಿಕಾರದ ಕರ್ತವ್ಯ. ಆದ್ದರಿಂದ ದಾಸೋಹ, ಕುಡಿಯುವ ನೀರು, ದೇವರ ದರ್ಶನ, ಲಾಡು ಪ್ರಸಾದ, ಭದ್ರತೆ, ಸ್ವಚ್ಛತೆ, ವಿವಿಧ ಸೇವೆಗಳು ಸೇರಿದಂತೆ ಇನ್ನಿತರೆ ಆಯಾ ವಿಭಾಗಕ್ಕೆ ನಿಯೋಜಿಸಿರುವ ನೌಕರರು ನೀಡಿರುವ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಬೇಕು. ಭಕ್ತರಿಗೆ ಯಾವುದೇ ಸಮಸ್ಯೆಯಾಗದಂತೆ ಅಗತ್ಯ ಮುಂಜಾಗ್ರತೆ ವಹಿಸುವುದರ ಮೂಲಕ ಪ್ರತಿಯೊಬ್ಬರೂ ಕಾರ್ಯನಿರ್ವಹಿಸಬೇಕು. ಯಾವುದಾದರು ಸಮಸ್ಯೆಗಳಿದ್ದಲ್ಲಿ ಗಮನಕ್ಕೆ ತರುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರಶೇಖರ್, ಇಂಜಿನಿಯರ್ ಸೆಲ್ವ ಗಣಪತಿ, ನೌಕರರಾದ ಮಹದೇವಸ್ವಾಮಿ, ಜನಾರ್ದನ್, ಮಹೇಶ್, ಮಲ್ಲಿಕಾರ್ಜುನ ಇತರರಿದ್ದರು.