ಕೊಳ್ಳೇಗಾಲ ಚಿಕ್ಕಲ್ಲೂರು ಸಿದ್ದಪ್ಪಾಜಿ ದೇವಸ್ಥಾನದ ಹುಂಡಿಗಳನ್ನು ಎಣಿಕೆ ಮಾಡಲು ವಾಹನದಲ್ಲಿ ರವಾನಿಸುವಾಗ ಶ್ರೀ ಚಿಕ್ಕಲ್ಲೂರು ಮಠದ ಭರತ್‌ರಾಜೇ ಅರಸ್ ಮತ್ತು ಭಕ್ತರು ಪ್ರತಿಭಟನೆ ನಡೆಸಿದರು.
ಚಿಕ್ಕಲ್ಲೂರು ಶ್ರೀ ಸಿದ್ದಪ್ಪಾಜಿ ದೇವಸ್ಥಾನಕ್ಕೆ ಸೇರಿದ ಗೋಲಕ
ಕೊಳ್ಳೇಗಾಲ: ಚಿಕ್ಕಲ್ಲೂರು ಶ್ರೀ ಸಿದ್ದಪ್ಪಾಜಿ ದೇವಸ್ಥಾನದ ಹುಂಡಿಗಳನ್ನು ತಾಲೂಕು ಆಡಳಿತ ದೇವಾಲಯದಿಂದ ಹಳೇ ಮಠದ ಆವರಣಕ್ಕೆ ಎಣಿಕೆ ಮಾಡಲು ವಾಹನದ ಮೂಲಕ ರವಾನಿಸುವಾಗ ಚಿಕ್ಕಲ್ಲೂರು ಮಠದ ಭರತರಾಜೇ ಅರಸ್ ಮತ್ತು ಭಕ್ತರು ಗುರುವಾರ ಪ್ರತಿಭಟಿಸಿದರು.
ತಾಲೂಕಿನ ಚಿಕ್ಕಲ್ಲೂರು ಶ್ರೀ ಸಿದ್ದಪ್ಪಾಜಿ ದೇವಸ್ಥಾನದ ಹುಂಡಿಗಳ ಎಣಿಕೆ ನಡೆಸಿ ಚಿಕ್ಕಲ್ಲೂರು ಜಾತ್ರೆಯಲ್ಲಿ ಖರ್ಚು ಮಾಡಿದ 40 ಲಕ್ಷ ರೂ.ಗಳನ್ನು ಮಠದ ಪೀಠಾಧಿಪತಿ ಬಿ.ಎಸ್.ಜ್ಞಾನಾನಂದರಾಜೇ ಅರಸ್ ಅವರ ಮನವಿಯಂತೆ ಅವರಿಗೆ ನೀಡಿ ಉಳಿಕೆ ಹಣವನ್ನು ಪರಿಶೀಲನೆ ನಡೆಸಿ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಶ್ರೀರೂಪಾ ಅವರು ತಹಸೀಲ್ದಾರ್ ಬಸವರಾಜು ಅವರಿಗೆ ಆದೇಶಿಸಿದ್ದರು.
ಅದರಂತೆ, ತಹಸೀಲ್ದಾರ್ ಅವರು ಕೊಳ್ಳೇಗಾಲ ಕಸಬಾ ಮತ್ತು ಪಾಳ್ಯ ಹೋಬಳಿಯ ರಾಜಸ್ವ ನಿರೀಕ್ಷಕರು ಮತ್ತು ಗ್ರಾಮ ಲೆಕ್ಕಿಗರು ಗ್ರಾಮ ಸಹಾಯಕರು ಪಾಳ್ಯ ಹೋಬಳಿಯ ಗ್ರಾಪಂ ಪಿಡಿಒಗಳು ನೌಕರರರ ತಂಡ ದೇವಾಲಯದ ಹುಂಡಿಗಳನ್ನು ಎಣಿಕೆ ಮಾಡಲು ವಾಹನದಲ್ಲಿ ಇರಿಸುವಾಗ ಚಿಕ್ಕಲ್ಲೂರು ಮಠದ ಭರತ್‌ರಾಜೇ ಅರಸ್ ಅವರು ಮತ್ತು ಅಕ್ಕಪಕ್ಕ ಗ್ರಾಮದ ಭಕ್ತರು, ರೈತ ಸಂಘದವರು ಹುಂಡಿಯನ್ನು ವಾಹನದಲ್ಲಿ ಇರಿಸಲು ತಡೆಯೊಡ್ಡಿದರು. ಈ ವೇಳೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಸುಪ್ರೀತ್ ಅವರು ವಾಹನದಲ್ಲಿ ಹುಂಡಿಗಳನ್ನು ತುಂಬಿಸಲು ಮುಂದಾದರು. ಈ ವೇಳೆ ವಾಹನ ಮುಂದೆ ಕುಳಿತ ಪ್ರತಿಭಟನಾಕಾರರು ಹುಂಡಿ ಎಣಿಕೆಗೆ ಅವಕಾಶ ನೀಡುವುದಿಲ್ಲ ಎಂದು ಪಟ್ಟುಹಿಡಿದರು.
ಈ ವೇಳೆ ತಹಸೀಲ್ದಾರ್ ಬಸವರಾಜು ಮಾತನಾಡಿ, ಜಿಲ್ಲಾಧಿಕಾರಿ ಆದೇಶದಂತೆ ಹುಂಡಿ ಎಣಿಕೆ ಕಾರ್ಯ ನಡೆಯುತ್ತಿದೆ. ಅವರ ಆದೇಶವನ್ನು ನಾವು ಪಾಲಿಸಬೇಕು. ಈ ಬಗ್ಗೆ ಜಿಲ್ಲಾಧಿಕಾರಿ ಅವರನ್ನು ಸಂಪರ್ಕಿಸಿ ಚರ್ಚಿಸಿ. ಹುಂಡಿ ಎಣಿಕೆ ಮಾಡಲು ಸಹಕರಿಸಿ ಎಂದರು.
ಚಿಕ್ಕಲ್ಲೂರು ಮಠದ ಭರತ್‌ರಾಜೇ ಅರಸ್ ಮಾತನಾಡಿ, ದೇವಾಲಯದ ಟ್ರಸ್ಟ್‌ನಲ್ಲಿ ಐವರು ಸದಸ್ಯರಿದ್ದೇವೆ. ಜ್ಞಾನಾನಂದ ಚನ್ನರಾಜೇ ಅರಸ್ ಅವರ ಒಬ್ಬರ ಪತ್ರಕ್ಕೆ ಮತ್ತು ಎಣಿಕೆ ಹಣದಲ್ಲಿ 40 ಲಕ್ಷ ರೂ. ನೀಡುವಂತೆ ಆದೇಶ ನೀಡಲಾಗಿದೆ. ಇನ್ನುಳಿದ 4 ಸದಸ್ಯರ ಗಮನಕ್ಕೆ ತಂದಿಲ್ಲ. ಇದು ಏಕಪಕ್ಷೀಯ ನಿರ್ಧಾರವಾಗಿದೆ. ನಾನು ಸಹ ಜಾತ್ರಾ ಮಹೋತ್ಸವದಲ್ಲಿ ಭಕ್ತರ ಮೂಲಸೌಕರ್ಯಕ್ಕೆ ಮತ್ತು ಇನ್ನಿತರ ಭಕ್ತರ ಅನುಕೂಲಕ್ಕಾಗಿ ಲಕ್ಷಾಂತರ ಹಣವನ್ನು ಖರ್ಚು ಮಾಡಿದ್ದೇನೆ. ಸಾಲದವರಿಗೆ ನಾನು ಹಣ ನೀಡಬೇಕಾಗಿದೆ ಎಂದು ಪ್ರತಿಭಟನೆಯನ್ನು ಮುಂದುವರಿಸಿದರು.
ಪ್ರತಿಭಟನೆಯಲ್ಲಿದ್ದ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಗೌಡೇಗೌಡ ದೂರವಾಣಿ ಮೂಲಕ ಹನೂರು ಕ್ಷೇತ್ರದ ಶಾಸಕ ಎಂ.ಆರ್.ಮಂಜುನಾಥ್ ಅವರಿಗೆ ಮಾಹಿತಿ ನೀಡಿದಾಗ ಶಾಸಕರು ಹುಂಡಿ ಎಣಿಕೆಯಲ್ಲಿ 40 ಲಕ್ಷ ರೂ.ಗಳನ್ನು ಈಗಿನ ಪರಿಸ್ಥಿತಿಯಲ್ಲಿ ಯಾರಿಗೂ ಕೊಡುವುದು ಬೇಡ. ಎಣಿಕೆ ಹಣವನ್ನು ತಹಸೀಲ್ದಾರ್ ವಶಕ್ಕೆ ನೀಡಿ. ಮತ್ತೊಮ್ಮೆ ಇದರ ಬಗ್ಗೆ ಚರ್ಚೆ ನಡೆಸಿ, ಸಮಸ್ಯೆಯನ್ನು ಬಗೆಹರಿಸೊಣ ಎಂದು ತಹಸೀಲ್ದಾರ್ ಅವರಿಗೆ ಹೇಳಿದ ನಂತರ ಹಳೇ ಮಠದ ಆವರಣದಲ್ಲಿ ಹುಂಡಿಗಳಿಗೆ ಜ್ಞಾನಾನಂದ ಚನ್ನರಾಜೇ ಅರಸ್ ಪೂಜೆ ಸಲ್ಲಿಸಿದ ಬಳಿಕ ಎಣಿಕೆ ಪ್ರಾರಂಭವಾಯಿತು.
ನಂತರ ತಹಸೀಲ್ದಾರ್ ಬಸವರಾಜು ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲಾಧಿಕಾರಿ ಹುಂಡಿ ಎಣಿಕೆ ಮಾಡಿದ ಹಣದಲ್ಲಿ 40 ಲಕ್ಷ ರೂ.ಗಳನ್ನು ಜ್ಞಾನಾನಂದ ಚನ್ನರಾಜೇ ಅರಸ್‌ಗೆ ನೀಡಿ ಉಳಿದ ಹಣವನ್ನು ಟ್ರಸ್ಟ್ ಖಾತೆಗೆ ಹಾಕುವಂತೆ ಆದೇಶ ನೀಡಿದ್ದಾರೆ. ಹನೂರು ಕ್ಷೇತ್ರದ ಶಾಸಕರು ಯಾರಿಗೂ ಹುಂಡಿಯ ಹಣವನ್ನು ನೀಡಬೇಡಿ ಎಂದು ಹೇಳಿದ್ದಾರೆ. ಹುಂಡಿ ಹಣ ಎಣಿಕೆ ನಂತರ ಜಿಲ್ಲಾಧಿಕಾರಿ ಮತ್ತು ಶಾಸಕರ ಜತೆ ಚರ್ಚಿಸುತ್ತೇನೆ. ಡಿಸಿ ಅವರ ಆದೇಶವನ್ನು ಪಾಲಿಸುವುದು ನನ್ನ ಕರ್ತವ್ಯವಾಗಿದೆ ಎಂದು ಹೇಳಿದರು.