ಗುಂಡ್ಲುಪೇಟೆಯಿಂದ ಮಸಣಿಗುಡಿಗೆ ಹೋಗುವ ತೆಪ್ಪಕ್ಕಾಡ್‌ನಲ್ಲಿ ರಸ್ತೆಗೆ ಬ್ಯಾರಿಕೇಡ್ ಅಳವಡಿಸಿ ಊಟಿ ನಾಮಫಲಕವನ್ನು ಮುಚ್ಚಿರುವುದು.
- ಮಸಣಿಗುಡಿ ನಿವಾಸಿಗಳ ಎಚ್ಚರಿಕೆ
- ಕಲ್ಲಟ್ಟಿ ರಸ್ತೆಯಲ್ಲಿ ಪ್ರವಾಸಿ ವಾಹನಗಳ ಸಂಚಾರ ನಿರ್ಬಂಧ ಹಿನ್ನೆಲೆ
ಗುಂಡ್ಲುಪೇಟೆ: ಊಟಿಗೆ ಹೋಗುವ ಕಲ್ಲಟ್ಟಿ ರಸ್ತೆಯಲ್ಲಿ ಪ್ರವಾಸಿಗರ ವಾಹನ ಸಂಚಾರವನ್ನು ನಿರ್ಬಂಧಿಸಿರುವುದು ತಮ್ಮ ಜೀವನೋಪಾಯಕ್ಕೆ ತೊಂದರೆಯುಂಟು ಮಾಡಿದೆ. ಹಾಗಾಗಿ ಕೂಡಲೇ ಈ ಹಿಂದಿನಂತೆ ಸಂಚಾರಕ್ಕೆ ಅವಕಾಶ ಮಾಡಿಕೊಡದಿದ್ದರೆ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಬೇಕಾಗುತ್ತದೆ ಮಸಣಿಗುಡಿ ನಿವಾಸಿಗಳು ಎಚ್ಚರಿಸಿದ್ದಾರೆ.
ಮಧುಮಲೈ ಹುಲಿ ಸಂರಕ್ಷಿತ ಪ್ರದೇಶದ ಕಾಡಂಚಿನಲ್ಲಿರುವ ಮಸಣಿಗುಡಿ ನಿವಾಸಿಗಳು ಪ್ರವಾಸೋದ್ಯಮವನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಘಾಟಿ ರಸ್ತೆಯಲ್ಲಿ ಅಪಘಾತಗಳು ಸಂಭವಿಸುತ್ತಿವೆ ಎಂಬ ಕಾರಣಕ್ಕೆ ಊಟಿ ಮೂಲದ ಸ್ವಯಂಸೇವಾ ಸಂಸ್ಥೆಯೊಂದು ಮದ್ರಾಸ್ ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ತಂದಿದೆ. 2024ರಲ್ಲಿಯೇ ಕೋರ್ಟ್ ಆದೇಶ ನೀಡಿದ್ದರೂ ಸರ್ಕಾರ ಅದರ ಜಾರಿಗೆ ಮುಂದಾಗಿರಲಿಲ್ಲ. ಆದರೆ ತಮಿಳುನಾಡಿನ ಚುನಾವಣೆ ಮುಗಿಯುತ್ತಿದ್ದಂತೆ ಹೊಸ ಸರ್ಕಾರ ಅಧಿಕಾರಕ್ಕೆ ಬರುವ ಮೊದಲೇ ಜಿಲ್ಲಾಡಳಿತ ಕಲ್ಲಟ್ಟಿ ರಸ್ತೆಯಲ್ಲಿ ಪ್ರವಾಸಿ ವಾಹನಗಳ ಸಂಚಾರ ನಿರ್ಬಂಧಿಸಿರುವುದು ಸ್ಥಳೀಯರನ್ನು ರೊಚ್ಚಿಗೆಬ್ಬಿಸಿದೆ.
ಜಿಲ್ಲಾಧಿಕಾರಿ ನಿರ್ದೇಶನದ ಮೇರೆಗೆ ಮೇ ಮೊದಲ ವಾರ ತೆಪ್ಪಕ್ಕಾಡಿನಿಂದ ಮಸಣಿಗುಡಿ ಮಾರ್ಗವಾಗಿ ಊಟಿಗೆ ಹೋಗುವ ಪ್ರವಾಸಿ ವಾಹನಗಳನ್ನು ತಡೆಗಟ್ಟಿ ಗೂಡಲೂರಿನತ್ತ ಕಳಿಸಲಗುತ್ತಿತ್ತು. ಅಲ್ಲಲ್ಲಿ ತಮಿಳು ಮತ್ತು ಇಂಗ್ಲಿಷ್‌ನಲ್ಲಿ ಈ ಬಗ್ಗೆ ಸೂಚನಾ ಫಲಕಗಳನ್ನೂ ಅಳವಡಿಸಲಾಗಿತ್ತು. ಕಲ್ಲಟ್ಟಿ ಘಾಟ್ ಸಮೀಪವಿರುವ ಸೀಗೂರು ಬ್ರಿಡ್ಜ್ ಸಮೀಪ ಚೆಕ್‌ಪೋಸ್ಟ್ ತೆರೆದು ಊಟಿ ನೋಂದಣಿಯಿರುವ ಟಿಎನ್ 43 ಸಂಖ್ಯೆಯ ವಾಹನಗಳನ್ನು ಹೊರತುಪಡಿಸಿ ತಮಿಳುನಾಡು ಸೇರಿದಂತೆ ಉಳಿದ ಎಲ್ಲ ರಾಜ್ಯಗಳ ನೋಂದಣಿ ವಾಹನಗಳನ್ನು ವಾಪಸ್ ಕಳುಹಿಸಲಾಗುತ್ತಿದೆ. ಆದರೆ ಕಿರಿದಾದ ರಸ್ತೆಯಲ್ಲಿ ಪ್ರಯಾಣಿಸುವ ಪ್ರಯಾಣಿಕರು ರಸ್ತೆ ಬದಿಗಳಲ್ಲಿ ಅಳವಡಿಸಿರುವ ಸೂಚನಾ ಫಲಕಗಳನ್ನು ಗಮನಿಸದೆ 17 ಕಿಲೋಮೀಟರ್ ಕ್ರಮಿಸಿದ ನಂತರ ಚೆಕ್‌ಪೋಸ್ಟ್‌ನಿಂದ ಮತ್ತೆ 17 ಕಿಲೋಮೀಟರ್ ಕ್ರಮಿಸಿ ತೆಪ್ಪಕ್ಕಾಡ್‌ಗೆ ಹಿಂದುರುಗಿ ಗೂಡಲೂರು ಮೂಲಕ ಊಟಿಗೆ ಪ್ರಯಾಣಿಸುವಂತಾಗಿದೆ. ಇದರಿಂದ ಊಟಿಗೆ ಹೋಗುವ ಪ್ರವಾಸಿಗರಿಗೆ ಹೆಚ್ಚುವರಿಯಾಗಿ ಅರ್ಧ ದಿನ ಮತ್ತು 70 ಕಿಲೋಮೀಟರ್ ಕ್ರಮಿಸುವಂತಾಗಿದ್ದು ಸಮಯ, ಇಂಧನ ವ್ಯರ್ಥವಾಗುತ್ತಿದೆ.
ಜಿಲ್ಲಾಡಳಿತದ ವಿರುದ್ಧ ಮಸಣಿಗುಡಿ ನಿವಾಸಿಗಳು ವ್ಯಾಪಾರಿಗಳು ಹಾಗೂ ವಾಹನಗಳ ಚಾಲಕರು ಶುಕ್ರವಾರ ಬೆಳಗ್ಗೆಯಿಂದ ಶನಿವಾರ ಸಂಜೆವರೆಗೆ 36 ಗಂಟೆಗಳ ಬಂದ್ ಆಚರಿಸಿದ ಪರಿಣಾಮ ಅಧಿಕಾರಿಗಳು ಪ್ರವಾಸಿಗರನ್ನು ತೆಕ್ಕಕ್ಕಾಡ್‌ನಿಂದ ಮಸಣಿಗುಡಿಗೆ ಬಿಡುತ್ತಿದ್ದಾರೆ. ಆದರೆ ಸೀಗೂರು ಗೇಟ್‌ನಿಂದ ವಾಪಸ್ ಕಳಿಸುತ್ತಿರುವುದು ಪ್ರವಾಸಿಗರ ಪ್ರಯಾಣವನ್ನು ದುಬಾರಿಯಾಗಿಸ್ಸುತ್ತಿದೆ. ಎರಡು ಮೂರು ತಲೆಮಾರುಗಳಿಂದ ತಾಲೂಕು ಹಾಗೂ ರಾಜ್ಯದ ನಾನಾ ಭಾಗಗಳಿಂದ ವಲಸೆ ಬಂದ ಕನ್ನಡಿಗರು ಮಸಣಿಗುಡಿಯಲ್ಲಿ ನೆಲೆಸಿದ್ದಾರೆ. 40 ವರ್ಷಗಳ ಹಿಂದೆ ರಾಗಿ, ಜೋಳ ಬೆಳೆದು 10 ಸಾವಿರದಷ್ಟು ಹಸುಗಳನ್ನು ಸಾಕುವ ಮೂಲಕ ಹೈನುಗಾರಿಕೆಯಲ್ಲಿ ತೊಡಗಿದ್ದರು. ಆದರೆ ಅರಣ್ಯ ಇಲಾಖೆ ರೈತರ ರಾಸುಗಳನ್ನು ಕಾಡಿನೊಳಗೆ ಬಿಡದಂತೆ ನಿರ್ಬಂಧಿಸಿತು. ಅಲ್ಲದೆ ವನ್ಯಜೀವಿಗಳ ದಾಳಿಯಿಂದ ಯಾವುದೇ ಬೆಳೆಗಳನ್ನು ಬೆಳೆಯಲಾಗದಂತಾಗಿದೆ. ಈ ಹಿನ್ನೆಲೆಯಲ್ಲಿ ಸದ್ಯ ಎಸ್‌ಎಸ್‌ಎಲ್‌ಸಿ ನಂತರ ಇಲ್ಲಿನ ಯುವಕರು, ಬುಡಕಟ್ಟುಜನರು ಸಾಲಸೋಲಮಾಡಿ ಜೀಪುಗಳನ್ನು ಖರೀದಿಸಿದ್ದಾರೆ. ಸುಮಾರು 300 ಜೀಪುಗಳು, ಚಾಲಕರು, 200 ಗೈಡುಗಳು ಸೇರಿದಂತೆ ಒಂದು ಸಾವಿರ ಕುಟುಂಬಗಳು ಪ್ರವಾಸೋದ್ಯಮದ ಲಾಭ ಪಡೆಯುತ್ತಿದೆ.
ಘಟ್ಟದ ರಸ್ತೆಯಲ್ಲಿ ಅಪಘಾತಗಳು ಹೆಚ್ಚಾಗುತ್ತಿವೆ ಎಂಬ ನೆಪದಿಂದ ಇತ್ತೀಚೆಗೆ ಸರ್ಕಾರ ಊಟಿಯತ್ತ ಹೋಗುವ ಎಲ್ಲ ವಾಹನಗಳನ್ನು ಕಲ್ಲಟ್ಟಿ ಘಾಟ್‌ಗೆ ಹೋಗದಂತೆ ನಿರ್ಬಂಧಿಸಿದೆ. ಇದರಿಂದ ಕಳೆದ ಒಂದು ವಾರದಿಂದ ಪ್ರವಾಸಿಗಳು ಬರದೆ ಮಸಣಿಗುಡಿಯಲ್ಲಿ ಹೋಟೆಲ್, ವಾಹನಗಳು ಸೇರಿದಂತೆ ಪ್ರವಾಸೋದ್ಯಮವೇ ಬಂದ್ ಆಗಿದ್ದರಿಂದ ಇದನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದವರಿಗೆ ತೀವ್ರ ತೊಂದರೆಯಾಗಿದೆ. ಆದ್ದರಿಂದ ನೂತನ ಸರ್ಕಾರ ಹಾಗೂ ನ್ಯಾಯಾಲಯಗಳು ಹಿಂದಿನಂತೆ ವಾಹನಗಳ ಸಂಚಾರಕ್ಕೆ ಅವಕಾಶಮಾಡಿಕೊಡಬೇಕು.
ಮಧುಮಲೈ ಕಾಡಂಚಿನಲ್ಲಿರುವ ಗ್ರಾಮದ ಯುವಕರು ಶನಿವಾರ ಭಾನುವಾರ ಹಾಗೂ ರಜಾ ದಿನಗಳಲ್ಲಿ ಊಟಿಗೆ ಹೋಗುವ ಪ್ರವಾಸಿಗರನ್ನು ಅವಲಂಬಿಸಿ ಜೀವನ ನಡೆಸುತ್ತಿದ್ದಾರೆ. ತಮ್ಮ ಕಾರುಗಳಲ್ಲಿ ಸಫಾರಿಗೆ ಹೋಗುವ ಹೆಚ್ಚಿನ ಪ್ರವಾಸಿಗರಿಗೆ ವನ್ಯಜೀವಿಗಳ ವರ್ತನೆ ಬಗ್ಗೆ ಅರಿವಿಲ್ಲದೆ ದಾಳಿಗೊಳಗಾಗುತ್ತಿದ್ದಾರೆ. ಆದರೆ ಜೀಪ್ ಚಾಲಕರು ಪ್ರವಾಸಿಗರನ್ನು ಸಫಾರಿಗೆ ಕರೆದೊಯ್ದು ಸುರಕ್ಷಿತವಾಗಿ ಕರೆತರುವುದರಿಂದ ಪ್ರವಾಸಿಗರು ಇದರ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. 2024ರಲ್ಲಿ ಹೈಕೋರ್ಟ್ ನೀಡಿದ ತೀರ್ಪನ್ನು ಕೂಡಲೇ ಅನುಷ್ಟಾನಗಳಿಸದ ಜಿಲ್ಲಾಡಳಿತ ಈಗ ಅದನ್ನು ಜಾರಿಗೆ ತರುವ ಮೂಲಕ ಮಸಣಿಗುಡಿಯ ವ್ಯಾಪಾರಿಗಳು ಹಾಗೂ ಪ್ರವಾಸೋದ್ಯಮ ವನ್ನು ನಂಬಿಕೊಂಡಿರುವ ಚಾಲಕರ ಜೀವನವನ್ನು ಬೀದಿಗೆತರಲು ಹೊರಟಿದೆ. ಇದರ ವಿರುದ್ದ ಮೇ 18ರಂದು ಮಸಣಿಯಮ್ಮ ದೇವಾಲಯದಲ್ಲಿ ಮಸಣಿಗುಡಿಯ ಚಾಲಕರು, ವರ್ತಕರು, ಸಂಘಸಂಸ್ಥೆಗಳು ಸೇರಿದಂತೆ ಎಲ್ಲ 18 ಸಂಘಟನೆಗಳ 300 ಸದಸ್ಯರು ಹಿರಿಯ ವಕೀಲರ ಸಮ್ಮುಖದಲ್ಲಿ ಸಭೆ ನಡೆಸಿ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಮೊರೆಹೋಗಲು ತೀರ್ಮಾನಿಸಿದ್ದೇವೆ.
ಸುದೇಶ್ ಅಧ್ಯಕ್ಷರು, ಡ್ರೈವರ್ ಹಾಗೂ ವ್ಯಾಪಾರಿಗಳ ಸಂಘ, ಮಸಣಿಗುಡಿ
ರಾಜ್ಯದಲ್ಲಿ ನೂತನ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಸದ್ಯದಲ್ಲಿಯೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು. ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಊಟಿ ರಸ್ತೆಯ ತೆಪ್ಪಕ್ಕಾಡ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ದೊಡ್ಡಮಟ್ಟದಲ್ಲಿ ಪ್ರತಿಭಟನೆ ಮಾಡಲಾಗುವುದು.
ನಿಸಾರ್ ಮಾಜಿ ಅಧ್ಯಕ್ಷರು, ಮಸಣಿಗುಡಿ ಗ್ರಾಮ ಪಂಚಾಯಿತಿ