ಗುಂಡ್ಲುಪೇಟೆ ಪಟ್ಟಣದ ತಾಲೂಕು ಕಚೇರಿ ಎದುರು ಧರಣಿ ಆರಂಭಿಸಿರುವ ರೈತರು. 
ಚಾಮರಾಜನಗರ

12ನೇ ದಿನಕ್ಕೆ ಕಾಲಿಟ್ಟ ಧರಣಿ

ಲಲಾಟಾಕ್ಷ ಎಸ್
ಗುಂಡ್ಲುಪೇಟೆ: ಕಾಡಂಚಿನಲ್ಲಿ ಉಳುಮೆ ಮಾಡುತ್ತಿರುವ ರೈತರಿಗೆ ಸಾಗುವಳಿ ಪತ್ರ ನೀಡುವುದು ಸೇರಿದಂತೆ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತ ಸಂಘದ ತಾಲೂಕು ಘಟಕದಿಂದ ತಾಲೂಕು ಕಚೇರಿ ಆವರಣದಲ್ಲಿ ಕೈಗೊಂಡಿರುವ ಅನಿರ್ದಿಷ್ಟಾವಧಿ ಧರಣಿ ಗುರುವಾರವೂ ಮುಂದುವರಿದಿತ್ತು.
ಪ್ರತಿಭಟನಾ ಸ್ಥಳಕ್ಕೆ ಸ್ಥಳೀಯ ಶಾಸಕರನ್ನು ಹೊರತುಪಡಿಸಿ ಜಿಲ್ಲಾ ಉಸ್ತುವಾರಿ ಸಚಿವರು, ತಾಲೂಕು, ಜಿಲ್ಲಾಧಿಕಾರಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿ ಸಮಸ್ಯೆ ಆಲಿಸಿಲ್ಲ ಎಂದು ದೂರಿದರು. ತಾಲೂಕಿನ ಡೀಮ್ಡ್ ಫಾರೆಸ್ಟ್ ಪ್ರದೇಶ ವ್ಯಾಪ್ತಿಯ ಜಮೀನು ಉಳುಮೆ ಮಾಡುತ್ತಿರುವ ಎಲ್ಲ ರೈತರಿಗೆ ಸಾಗುವಳಿ ಪತ್ರ ನೀಡಬೇಕು. 1935ರಿಂದ 1992ರವರೆಗೆ ಸಾಗುವಳಿ ವಿತರಣೆ ಮಾಡಿರುವ 2,570 ಜನರಿಗೆ ಹಕ್ಕುಪತ್ರ ವಿತರಿಸುವವರೆಗೆ ಹೋರಾಟ ಮುಂದುವರಿಸಲಾಗುವುದು ಎಂದು ಎಚ್ಚರಿಸಿದರು.
ಅಧಿಕಾರಿಗಳ ನಿರ್ಲಕ್ಷ್ಯ ವಿರುದ್ಧ ಹೋರಾಟ ತೀವ್ರಗೊಳಿಸಲಾಗುವುದು. ನಮ್ಮ ಬೇಡಿಕೆ ಈಡೇರದಿದ್ದರೆ ಮುಂದಿನ ಹಂತದಲ್ಲಿ ಕಾನೂನು ಭಂಗ ಚಳವಳಿ ಮಾಡುತ್ತೇವೆ ಎಂದರು.
ರೈತ ಸಂಘದ ಜಿಲ್ಲಾಧ್ಯಕ್ಷ ಮಹದೇವಪ್ಪ, ಕಾರ್ಯಾಧ್ಯಕ್ಷ ಕುಮಾರ್, ತಾಲೂಕು ಅಧ್ಯಕ್ಷ ಶಿವಣ್ಣ, ಸೋಮಶೇಖರ್, ತಾಲೂಕು ಗೌರವಾಧ್ಯಕ್ಷ ನಾಗರಾಜಪ್ಪ, ಪ್ರಧಾನ ಕಾರ್ಯದರ್ಶಿ ಪ್ರಸಾದ್, ಮಹಿಳಾ ಘಟಕದ ಅಧ್ಯಕ್ಷೆ ಬಸಮ್ಮ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಹದೇವಸ್ವಾಮಿ, ತಾಲೂಕು ಉಪಾಧ್ಯಕ್ಷ ಪುಟ್ಟೇಗೌಡ, ಸಂಘಟನಾ ಕಾರ್ಯದರ್ಶಿ ರವಿ ಇದ್ದರು.