ಚಾಮರಾಜನಗರ ತಾಲೂಕಿನ ಹರವೇ ಗ್ರಾಮದ ನಾಡಕಚೇರಿ ಮುಂಭಾಗ ಬಿಜೆಪಿ ಮಹಾಶಕ್ತಿ ಕೇಂದ್ರದಿಂದ ಪ್ರತಿಭಟನೆ ನಡೆಯಿತು
- ತಾಲೂಕಿನ ಹರವೆ ನಾಡ ಕಚೇರಿ ಮುಂಭಾಗ ಬಿಜೆಪಿ ಮಹಾಶಕ್ತಿ ಕೇಂದ್ರದ ವತಿಯಿಂದ ಧರಣಿ
- ತಹಸೀಲ್ದಾರ್ ಗಿರಿಜಾಗೆ ಮನವಿ ಸಲ್ಲಿಕೆ
ಚಾಮರಾಜನಗರ:ಗೋ ಶಾಲೆ ಮತ್ತು ಮೇವಿನ ಬ್ಯಾಂಕ್ ತೆರೆಯುವಂತೆ, ವಿವಿಧ ಪಿಂಚಣಿಗಳನ್ನು ನೀಡುವಂತೆ ಹಾಗೂ ಕೆರೆಗಳಿಗೆ ನೀರು ಬಿಡುವಂತೆ ಒತ್ತಾಯಿಸಿ ಹರವೆ ಬಿಜೆಪಿ ಮಹಾಶಕ್ತಿ ಕೇಂದ್ರದ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ತಾಲೂಕಿನ ಹರವೆ ಗ್ರಾಮದ ನಾಡ ಕಚೇರಿ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಕೆಲಕಾಲ ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆಯನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ತಹಸೀಲ್ದಾರ್ ಗಿರಿಜಾ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್ ಮಾತನಾಡಿ, ರಾಜ್ಯದಲ್ಲಿ ತೀವ್ರ ತರವಾದ ಭರ ಪರಿಸ್ಥಿತಿ ಎದುರಿಸುತ್ತಿರುವ ಹೋಬಳಿಗಳಲ್ಲಿ ಚಾಮರಾಜನಗರ ಜಿಲ್ಲೆಯ ಹರವೆ ಹೋಬಳಿ ಒಂದಾಗಿದೆ. ಈ ಭಾಗದ ರೈತರು ಕೊಳವೆ ಬಾವಿಗಳನ್ನೇ ನಂಬಿ ವ್ಯವಸಾಯ ಮತ್ತು ಹೈನುಗಾರಿಕೆಯನ್ನು ಮೂಲ ಕಸುಬನ್ನಾಗಿ ಆಶ್ರಯಿಸಿರುತ್ತಾರೆ. ಈ ಬಾರಿ ಪೂರ್ವ ಮುಂಗಾರು ಮತ್ತು ಮುಂಗಾರು ಮಳೆ ಕೈ ಕೊಟ್ಟಿದ್ದರಿಂದ ವ್ಯವಸಾಯ ಮತ್ತು ಹೈನುಗಾರಿಕೆಗೆ ತೀವ್ರ ತೊಂದರೆ ಉಂಟಾಗಿದೆ ಎಂದು ಹೇಳಿದರು.
ರೈತರು ಬಿತ್ತಿದ ಬಿತ್ತನೆ ನೂರಕ್ಕೆ ನೂರರಷ್ಟು ಪ್ರಮಾಣದಲ್ಲಿ ಹಾಳಾಗಿದ್ದು, ವಾಣಿಜ್ಯ ಬೆಳೆಗಳು ಮತ್ತು ಹೈನುಗಾರಿಕೆ ಮೇವಿನ ಬೆಳೆಗಳು ಸಂಪೂರ್ಣ ಮಳೆಯ ಅಭಾವದಿಂದ ಹಾಳಾಗಿದೆ. ಜಾನುವಾರುಗಳ ನಿರ್ವಹಣೆಗೆ ರೈತರು ಮಂಡ್ಯ, ಮೈಸೂರಿನಂತಹ ಹೊರ ಜಿಲ್ಲೆಗಳಿಂದ ಮುಸುಕಿನ ಜೋಳದ ಮೇವು ಮತ್ತು ಭತ್ತದ ಹುಲ್ಲು ಗಳನ್ನು ಟನ್ ಗೆ 5-6 ಸಾವಿರ ರೂ, ಜೊತೆಗೆ ವಾಹನದ ದುಬಾರಿ ಬಾಡಿಗೆ ಕೊಟ್ಟು ತರುವಂತಾಗಿದೆ. ರೈತರು ಜಾನುವಾರುಗಳನ್ನು ಸಾಕಲು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಸರ್ಕಾರ ಮತ್ತು ಜಿಲ್ಲಾಡಳಿತ ಇಂತಹ ರೈತರ ನೆರವಿಗೆ ಧಾವಿಸಲು ವಿಫಲವಾಗಿದೆ ಎಂದು ಆರೋಪಿಸಿದರು.
ಪ್ರತಿ ಪಂಚಾಯಿತಿ ವ್ಯಾಪ್ತಿಗೆ ಒಂದು ಮೇವಿನ ಕೇಂದ್ರ ತೆರೆಯಬೇಕು. ಗೋಶಾಲೆಯನ್ನು ತೆರೆಯಲು ಕ್ರಮ ಕೈಗೊಳ್ಳಬೇಕು. ಅಂತರ್ಜಲ ಕುಸಿತದ ಪರಿಣಾಮ ನೂರಾರು ಕೊಳವೆ ಬಾವಿಗಳು ಬತ್ತಿಹೋಗಿದ್ದು, ಲಕ್ಷಾಂತರ ರೂಪಾಯಿ ಖರ್ಚು ಮಾಡಿದ ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕಾಲ ಕಾಲಕ್ಕೆ, ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆ ನಿರ್ವಹಣೆಯ ವಿಫಲತೆ ಅಂತರ್ಜಲ ಕುಸಿತಕ್ಕೂ, ಕಾರಣವಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯ ಸಂದರ್ಭದಲ್ಲಿ ರೈತರಿಗೆ ಸಣ್ಣ ಪುಟ್ಟ ಸಹಾಯಕ್ಕೆ ನೆರವಾಗುತ್ತಿದ್ದ ವಿವಿಧ ಪಿಂಚಣಿಯನ್ನು ಪರಿಷ್ಕರಣೆಯ ನೆಪದಲ್ಲಿ ನಿಲ್ಲಿಸಿರುವ ಪರಿಣಾಮ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಇವುಗಳನ್ನು ಗಂಭೀರವಾಗಿ ಪರಿಗಣಿಸಿ ರೈತರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಹರವೆ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಮಹದೇವಪ್ರಸಾದ್, ರಾಜ್ಯ ಕಾರ್ಯಕಾರಣಿ ಸದಸ್ಯರಾದ ಕೆರೆಹಳ್ಳಿ ಮಹದೇವಸ್ವಾಮಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷರಾದ ಕಮಲಮ್ಮ, ಎಸ್ ಟಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಗಿರೀಶ್, ಚಿಕ್ಕ ನಾಗಪ್ಪ, ಕೃಷ್ಣ ಶೆಟ್ಟಿ, ನಂಜುಂಡಸ್ವಾಮಿ, ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಮಹದೇವಸ್ವಾಮಿ, ಶಕ್ತಿಕೇಂದ್ರ ಅಧ್ಯಕ್ಷರಾದ ಕಲ್ಪುರ ವೃಷಬೆಂದ್ರಸ್ವಾಮಿ, ಬುಜಗನಪುರ ಮಹದೇವಸ್ವಾಮಿ, ಸೊಸೈಟಿ ಅಧ್ಯಕ್ಷರಾದ ಮಾದಪ್ಪ, ಡೈರಿ ಮಾಜಿ ಅಧ್ಯಕ್ಷರಾದ ಎಂ.ಸಿ.ಮಲ್ಲಣ್ಣ, ನಾಗಭೂಷಣ್, ಹರವೆ ಮಧು, ನಟರಾಜು, ಹಳೇಪುರ ಸುಂದರಪ್ಪ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಕುಮಚಹಳ್ಳಿ ಸ್ವಾಮಿ, ಶಿವಣ್ಣ ನಾಯಕ್, ಹೆಗಡೆ ಮಹದೇವಪ್ಪ, ಎಂ.ಸಿ.ಪ್ರಕಾಶ್,ಶಿವಕುಮಾರ್, ಮೂಡ್ನಾಕೂಡು ಮಂಜು, ಕುಮಾರ್, ಪರಶಿವಪ್ಪ, ಲಿಂಗಣ್ಣ, ಎಸ್.ಮಂಜು ಹಾಗೂ ಇತರರು ಭಾಗವಹಿಸಿದ್ದರು.