ಟಗರಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳ ಆಸ್ತಿಗಳಿಗೆ ಇ-ಸ್ವತ್ತು ನೀಡದಿರುವುದನ್ನು ವಿರೋಧಿಸಿ ಗುಂಡಾಲ್ ಜಲಾಶಯ ಸ್ಥಿರ ಅಚ್ಚುಕಟ್ಟು ಪ್ರದೇಶ ಸಮಿತಿ ಪದಾಧಿಕಾರಿಗಳು ಧರಣಿ ನಡೆಸಿದರು.
ಕೊಳ್ಳೇಗಾಲ: ಟಗರಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಆಸ್ತಿಗಳಿಗೆ ಇ-ಸ್ವತ್ತು ನೀಡದಿರುವುದನ್ನು ಖಂಡಿಸಿ ಗುಂಡಾಲ್ ಜಲಾಶಯ ಸ್ಥಿರ ಅಚ್ಚುಕಟ್ಟು ಪ್ರದೇಶ ಸಮಿತಿ ಪದಾಧಿಕಾರಿಗಳು ಬುಧವಾರ ಟಗರಪುರ ಪಂಚಾಯಿತಿ ಎದುರು ಧರಣಿ ನಡೆಸಿದರು.
ಸಮಿತಿ ಅಧ್ಯಕ್ಷ ದಶರಥ್ ಮಾತನಾಡಿ, ಟಗರಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 7 ಗ್ರಾಮಗಳಿದ್ದು ಕಸಬಾ ಹೋಬಳಿ ಗ್ರಾಮ ಠಾಣಾ ವ್ಯಾಪ್ತಿಯ ನಿವಾಸಿಗಳ ಶೇ.25 ಜನರ ಅಸ್ತಿಗಳಿಗೆ ಮಾತ್ರ ಇ-ಸ್ವತ್ತು ನೀಡಲಾಗಿದೆ. ಇನ್ನುಳಿದ ಆಸ್ತಿಗಳಿಗೆ ಇ-ಸ್ವತ್ತು ಖಾತೆ ನೀಡದೆ ಪಿಡಿಒ ನಿರ್ಲಕ್ಷ್ಯವಹಿಸಿದ್ದಾರೆ. ಪಿಡಿಒ ಮತ್ತು ಸಂಬಂಧಪಟ್ಟ ಕಂದಾಯ ಇಲಾಖೆ ಅಧಿಕಾರಿಗಳು ಕೂಡಲೇ ಪರಿಶೀಲನೆ ನಡೆಸಿ ಇ-ಸ್ವತ್ತು ನೀಡಬೇಕು ಎಂದು ಅಗ್ರಹಿಸಿದರು.
ಪಿಡಿಒ ಮಲ್ಲೇಶ್ ಮಾತನಾಡಿ, ನಮ್ಮ ಪಂಚಾಯಿತಿ ಗ್ರಾಮಠಾಣಾ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ನಿವಾಸಿಗಳ ಆಸ್ತಿಗಳಿಗೆ ಸಂಬಂಧಿಸಿದಂತೆ ಸೂಕ್ತ ದಾಖಲೆಗಳನ್ನು ಪಡೆದು ಬಹುತೇಕ ಈ ಸ್ವತ್ತು ಖಾತೆಗಳನ್ನು ನೀಡಲಾಗಿದೆ. ಸಾರ್ವಜನಿಕರು ಸಮರ್ಪಕ ಮಾಹಿತಿ ಒದಗಿಸಿದರೆ ಇ-ಸ್ವತ್ತು ಮಾಡಿಕೊಡುತ್ತೇವೆ ಎಂದರು. ಈ ಬಗ್ಗೆ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿ ಜನರ ಸಮಸ್ಯೆ ತಿಳಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಬಳಿಕ ಧರಣಿ ಕೈಬಿಟ್ಟರು.
ರೈತ ಮುಖಂಡರಾದ ರಾಮಕೃಷ್ಣ, ಗೋಪಾಲಕೃಷ್ಣ, ಸ್ಥಳೀಯ ಗ್ರಾಮಸ್ಥರು ಇದ್ದರು.