ಕೊಳ್ಳೇಗಾಲದ ಲೋಕೋಪಯೋಗಿ ಇಲಾಖೆ ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದ ರೈತ ಸಂಘದ ಪದಾಧಿ ಕಾರಿಗಳಿಂದ ಮನವಿ ಪತ್ರವನ್ನು ಲೋಕೋಪಯೋಗಿ ಇಲಾಖೆ ಎಇಇ ಪುರುಷೋತ್ತಮ್ ಸ್ವೀಕರಿಸಿದರು.
- ದೊಡ್ಡಿಂದುವಾಡಿ ಕನಕಗಿರಿ ದೇವಾಲಯ ಮುಂಭಾಗದ ರಸ್ತೆ ಅಭಿವೃದ್ಧಿಯಲ್ಲಿ ನಿರ್ಲಕ್ಷೃ
ಕೊಳ್ಳೇಗಾಲ: ಲೋಕೋಪಯೋಗಿ ಅಧಿಕಾರಿಗಳ ಬೇಜವಾಬ್ದಾರಿಯಿಂದ ದೊಡ್ಡಿಂದುವಾಡಿ ಕನಕಗಿರಿ ದೇವಾಲಯ ಮುಂಭಾಗದ ರಸ್ತೆ ಅಭಿವೃದ್ಧಿ ಮಂದಗತಿಯಲ್ಲಿ ಸಾಗಿದೆ ಎಂದು ಆರೋಪಿಸಿ ರೈತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಮಂದಗತಿಯಲ್ಲಿ ಸಾಗುತ್ತಿರುವ ದೊಡ್ಡಿಂದುವಾಡಿ ಕನಕಗಿರಿ ದೇವಾಲಯ ಮುಂಭಾಗದ ರಸ್ತೆಯಲ್ಲಿದ್ದ ಕಲ್ಲು ಕಾರಿನ ಟಯರ್‌ಗೆ ಸಿಲುಕಿ ಬೈಕ್ ಸವಾರಿ ಮಾಡುತ್ತಿದ್ದ ರೈತನಿಗೆ ತಗುಲಿ ಗಾಯಗೊಂಡಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ನಿರ್ಲಕ್ಷ್ಯ ವಹಿಸಿರುವ ಲೋಕೋಪಯೋಗಿ ಇಲಾಖೆ ಎಇಇ, ಜೆಇಯನ್ನು ಅಮಾನತುಪಡಿಸಬೇಕು. ಗುತ್ತಿಗೆದಾರನನ್ನು ಬ್ಲಾಕ್‌ಲಿಸ್ಟ್‌ಗೆ ಸೇರಿಸಬೇಕೆಂದು ಆಗ್ರಹಿಸಿದರು.
ಪಟ್ಟಣದ ಲೋಕೋಪಯೋಗಿ ಇಲಾಖೆ ಮುಂಭಾಗದಲ್ಲಿ ಜಮಾಯಿಸಿದ್ದ ರೈತರು ಅಧಿಕಾರಿಗಳ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದರು.
ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶೈಲೇಂದ್ರ ಮಾತನಾಡಿ, ಚಿಕ್ಕಲ್ಲೂರು ಒಳಗೊಂಡಂತೆ ಕನಕಗಿರಿ ದೇವಾಲಯ ಮುಂಭಾಗದ ರಸ್ತೆ ಅಭಿವೃದ್ಧಿ ಕಾಮಗಾರಿ ನಿಧಾನವಾಗಿ ಸಾಗುತ್ತಿರುವುದನ್ನು ಖಂಡಿಸಿ ರೈತ ಸಂಘ ಭಿಕ್ಷೆ ಎತ್ತುವ ಚಳವಳಿ ನಡೆಸಲಾಗಿತ್ತು. ಈ ವೇಳೆ ಬಂದ ಪಿಡಬ್ಲುೃಡಿ ಎಇಇ ಪುರುಷೋತ್ತಮ್, ಚಿಕ್ಕಲ್ಲೂರು ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ಅಂತೆಯೇ, ಕನಕಗಿರಿ ರಸ್ತೆಯಲ್ಲೂ ಕೆಲವೇ ದಿನಗಳಲ್ಲಿ ಕಾಮಗಾರಿ ಆರಂಭಿಸುತ್ತೇವೆ ಎಂದು ಭರವಸೆ ನೀಡಿದ್ದರು. ನಂತರ ಕೆಲಸ ಕಾಮಗಾರಿ ಆರಂಭಿಸಿ ಅರ್ಧಂಬರ್ಧ ಮಾಡಿದ್ದು ನಿತ್ಯ ಸಮಸ್ಯೆಯಾಗಿದೆ. ಅದೇ ರೀತಿ ರಸ್ತೆಯಲ್ಲಿ ಬಿದ್ದಿದ್ದ ಕಲ್ಲು ಕಾರಿನ ಟಯರ್‌ಗೆ ಸಿಲುಕಿ ಬೈಕ್ ಸವಾರ, ರೈತ ಮುಖಂಡ ರಾಜಣ್ಣ ಅವರ ಮಂಡಿಗೆ ಬಿದ್ದು ಗಾಯವಾಗಿದೆ. ಹಾಗಾಗಿ, ರಸ್ತೆಯನ್ನು ಅಭಿವೃದ್ಧಿಪಡಿಸುವಲ್ಲಿ ವಿಫಲವಾಗಿರುವ ಲೋಕೋಪಯೋಗಿ ಇಲಾಖೆ ಎಇಇ ಪುರುಷೋತ್ತಮ್, ಜೆಇಯನ್ನು ಅಮಾನತುಪಡಿಸಬೇಕು. ಜತೆಗೆ ಸಂಬಂಧಪಟ್ಟ ಗುತ್ತಿಗೆದಾರರನ್ನು ಬ್ಲಾಕ್ ಲಿಸ್ಟ್‌ಗೆ ಸೇರಿಸಬೇಕು ಎಂದು ಆಗ್ರಹಿಸಿದರು.
ಬಳಿಕ ಮನವಿ ಪತ್ರವನ್ನು ಲೋಕೋಪಯೋಗಿ ಇಲಾಖೆ ಎಇಇ ಪುರುಷೋತ್ತಮ್ ಅವರಿಗೆ ಸಲ್ಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಎಇಇ ಪುರುಷೋತ್ತಮ್, ಕನಕಗಿರಿ ರಸ್ತೆಯ ಕಾಮಗಾರಿಯನ್ನು ಸೋಮವಾರದಿಂದ ನಡೆಸುವಂತೆ ಗುತ್ತಿಗೆದಾರರಿಗೆ ತಾಕೀತು ಮಾಡಿದ್ದೇನೆ. ಹಾಗಾಗಿ ಪ್ರತಿಭಟನೆಯನ್ನು ಕೈ ಬಿಡುವಂತೆ ಮನವಿ ಮಾಡಿದರು. ಭರವಸೆಯಂತೆ ಕಾಮಗಾರಿ ಆರಂಭ ಮಾಡದಿದ್ದರೆ ಪ್ರತಿಭಟನೆ ನಡೆಸುವುದಾಗಿ ರೈತರು ಎಚ್ಚರಿಕೆ ನೀಡಿ ಪ್ರತಿಭಟನೆ ಅಂತ್ಯಗೊಳಿಸಿದರು.
ರೈತ ಸಂಘದ ಪೆರಿಯಾನಾಯಗಂ, ವಸಂತಕುಮಾರ್, ಬೆಟ್ಟೇಗೌಡ, ಬಸವಲಿಂಗಶೆಟ್ಟಿ, ರಂಗಸ್ವಾಮಿ, ಮೋಳೆ ರಾಜು, ಗೋವಿಂದರಾಜು, ನಾಗೇಂದ್ರ, ವೆಂಕಟೇಶ್, ಕೃಷ್ಣಶೆಟ್ಟಿ, ರವಿ, ಕೀರ್ತಿ, ನಾಗೇಂದ್ರ, ಕೀರ್ತಿರಾಜ್ ಇತರರು ಇದ್ದರು.