ತಿ.ನರಸೀಪುರ ಪಟ್ಟಣದಲ್ಲಿ ಸೋಮವಾರ ಪ.ಜಾತಿ ಒಳ ಮೀಸಲಾತಿಯಲ್ಲಿ ಬಲಗೈ ಸಮುದಾಯಕ್ಕೆ ಅನ್ಯಾಯ ಆಗಿರುವುದನ್ನು ಖಂಡಿಸಿ, ನ್ಯಾ. ನಾಗಮೋಹನ್ ದಾಸ್ ಆಯೋಗದ ವರದಿಯನ್ನು ತಿರಸ್ಕರಿಸುವಂತೆ ಆಗ್ರಹಿಸಿ ಪರಿಶಿಷ್ಟ ಮಹಾಸಭಾ ಪದಾಧಿಕಾರಿಗಳು ಮೈಸೂರು ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪಾದಯಾತ್ರೆ ಚಳುವಳಿಯನ್ನು ನಡೆಸಿದರು. ಕೆ.ಎನ್.ಪ್ರಭುಸ್ವಾಮಿ, ಎನ್.ಲಿಂಗಪ್ಪಾಜಿ, ಎ.ಶಿವಕುಮಾರ್, ಎಂ.ಕೆ.ಸಿದ್ದರಾಜು ಇತರರು ಇದ್ದರು. 
ಚಾಮರಾಜನಗರ

ಪ.ಜಾತಿ ಬಲಗೈ ಸಮುದಾಯದಿಂದ ಪ್ರತಿಭಟನೆ

ಪ್ರಮುಖ ಮುಖ್ಯಾಂಶಗಳು

  • ಒಳಮೀಸಲಾತಿ ಹಂಚಿಕೆಯಲ್ಲಿನ ಅನ್ಯಾಯದ ವಿರುದ್ಧ
ತಿ.ನರಸೀಪುರ: ಪರಿಶಿಷ್ಟ ಜಾತಿ ಒಳ ಮೀಸಲಾತಿ ಹಂಚಿಕೆಯಲ್ಲಿನ ಅನ್ಯಾಯದ ವಿರುದ್ಧ ಬಲಗೈ(ಹೊಲಯ) ಸಮುದಾಯದ ಹೋರಾಟ ಸಿಎಂ ಸಿದ್ದರಾಮಯ್ಯ ಹಾಗೂ ಸಮಾಜ ಕಲ್ಯಾಣ ಸಚಿವ ಮಹದೇವಪ್ಪ ತವರು ಕ್ಷೇತ್ರ ತಿ.ನರಸೀಪುರದಲ್ಲಿ ತೀವ್ರಗೊಳ್ಳುತ್ತಿದ್ದು, ಪಟ್ಟಣದಲ್ಲಿ ಸೋಮವಾರ ಪ.ಜಾತಿ ಬಲಗೈ ಮಹಾಸಭಾದ ಪದಾಧಿಕಾರಿಗಳು ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪಾದಯಾತ್ರೆ ಚಳವಳಿ ನಡೆಸಿದರು.
ಒಳ ಮೀಸಲಾತಿ ಅನ್ಯಾಯವನ್ನು ಖಂಡಿಸಿ, ಸರಿಪಡಿಸುವಂತೆ ಹಾಗೂ ನ್ಯಾ.ನಾಗಮೋಹನ್ ದಾಸ್ ವರದಿಯನ್ನು ತಿರಸ್ಕರಿಸುವಂತೆ ಸರ್ಕಾರವನ್ನು ಆಗ್ರಹಿಸಿದ ಪ್ರತಿಭಟನಾಕಾರರು ಅಡಳಿತರೂಢ ಸರ್ಕಾರದ ದ್ರೋಹವನ್ನು ತೀವ್ರವಾಗಿ ಖಂಡಿಸಿ, ನೆತ್ತಿ ಸುಡುವ ಬಿಸಿಲನ್ನೂ ಲೆಕ್ಕಿಸದೆ ಮೈಸೂರು ಜಿಲ್ಲಾಧಿಕಾರಿಗಳ ಕಚೇರಿವರೆಗೆ ಹೆಜ್ಜೆ ಹಾಕಿದರು.
ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಜಮಾವಣೆಗೊಂಡಿದ್ದ ದಲಿತ ಸಂಘಟನೆಗಳ ಮುಖಂಡರು, ಪ್ರಗತಿಪರರು ಹಾಗೂ ಸಮುದಾಯ ಪ್ರಮುಖರು ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗುತ್ತ ಪಾದಯಾತ್ರೆ ಪ್ರತಿಭಟನಾ ಮೆರವಣಿಗೆಯನ್ನು ವಿದ್ಯುಕ್ತವಾಗಿ ಆರಂಭಿಸಿದರು. ಕಾಲೇಜು ಹೊಸ ತಿರುಮಕೂಡಲು ರಸ್ತೆ, ಹಳೇ ತಿರುಮಕೂಡಲು ಹಾಗೂ ಗರ್ಗೇಶ್ವರಿ ಮಾರ್ಗವಾಗಿ ಮೈಸೂರಿನತ್ತ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದರು.
ವಿಚಾರವಾದಿ ಕೆ.ಎನ್.ಪ್ರಭುಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಸ್ವಾಭಿಮಾನದ ಬದುಕನ್ನು ನಡೆಸುತ್ತಿರುವ ಬಲಗೈ(ಹೊಲಯ) ಸಮುದಾಯ ಮೀಸಲಾತಿಯಲ್ಲಿ ಬೇರೆಯವರ ಪಾಲನ್ನು ಕಸಿದು ತಿಂದಿಲ್ಲ. ಶಿಕ್ಷಣ ಪಡೆದು, ಪ್ರತಿಭೆಯ ಮೂಲಕವೇ ವಿವಿಧ ರಂಗಗಳಲ್ಲಿ ತಕ್ಕಮಟ್ಟಿಗೆ ಮುಂದುವರೆದಿದ್ದಾರೆ. ಒಳಮೀಸಲಾತಿ ಜನಗಣತಿ ನಡೆಸಿದ ವೇಳೆ ಸಮುದಾಯದ ಬಗ್ಗೆ ತಪ್ಪಾಗಿ ಅರ್ಥೈಸಲಾಗಿದೆ. ಒಬ್ಬರ ಹಕ್ಕನ್ನು ಕಿತ್ತುಕೊಳ್ಳುವ ನಾಗಮೋಹನ ದಾಸ್ ಆಯೋಗದ ವರದಿಯನ್ನು ಸರ್ಕಾರ ತಿರಸ್ಕರಿಸಬೇಕು. ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು. ಅಲ್ಲಿಯವರೆಗೂ ಹೋರಾಟವನ್ನು ಮುಂದುವರೆಸುತ್ತೇವೆ ಎಂದು ತಿಳಿಸಿದರು.
ಯುವ ಮುಖಂಡ ಸೋಸಲೆ ಎ.ಶಿವಕುಮಾರ್(ಬಡ್ಡು) ಮಾತನಾಡಿ, ಸಾಮಾಜಿಕ ನ್ಯಾಯವನ್ನು ನಿರೀಕ್ಷಿಸಿದ್ದ ಸಮುದಾಯಕ್ಕೆ ಒಳಮೀಸಲಾತಿ ಅನ್ಯಾಯದ ಮೂಲಕ ರಾಜ್ಯ ಸರ್ಕಾರ ದ್ರೋಹ ಮಾಡಿದೆ. ಮಾ.27ರ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲು ರೋಸ್ಟರ್ ಲೋಪವನ್ನು ಸರ್ಕಾರ ಸರಿಪಡಿಸಬೇಕು. ಇಲ್ಲದಿದ್ದರೆ ನರಸೀಪುರದಿಂದ ಬೆಂಗಳೂರಿಗೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪಾದಯಾತ್ರೆಗೆ ಪೊಲೀಸ್ ಬಿಗಿ ಭದ್ರತೆಯನ್ನು ಕಲ್ಪಿಸಲಾಗಿತ್ತು. ದಸಂಸ ರಾಜ್ಯ ವಿಭಾಗೀಯ ಸಂಚಾಲಕ ಆಲಗೂಡು ಎಸ್. ಚಂದ್ರಶೇಖರ್, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಎನ್.ಲಿಂಗಪ್ಪಾಜಿ, ದಸಂಸ ಸಂಚಾಲಕ ಕುಕ್ಕುರು ರಾಜು, ನಿವೃತ್ತ ಅಧಿಕಾರಿ ನಿಲಸೋಗೆ ಸಿದ್ದರಾಜು, ನಿವೃತ್ತ ಪ್ರಾಂಶುಪಾಲೆ ಬಿ.ಸಿ.ಇಂದಿರಮ್ಮ, ಮಹದೇವಮ್ಮ, ವಕೀಲ ರಾಜಣ್ಣ, ಕೈಯಂಬಳ್ಳಿ ಸೋಮಣ್ಣ, ತಾ.ಪಂ ಮಾಜಿ ಸದಸ್ಯ ಬಸವರಾಜು, ಮಾಜಿ ಉಪಾಧ್ಯಕ್ಷ ಎನ್.ಎಸ್.ಬಸವರಾಜು, ಮುಖಂಡರಾದ ಎಂ.ಕೆ.ಸಿದ್ದರಾಜು, ಎನ್.ಮಹೇಶ, ನಿರಂಜನ್, ಎಸ್.ಕೆ.ಶಿವಕುಮಾರ್ ಎಸ್.ವಿ.ಮಹೇಶ್ ಕುಮಾರ್, ಆಲಗೂಡು ಮಂಜು, ನಂದನ್, ಮಾವಿನಹಳ್ಳಿ ರಾಜೇಶ್, ನಿಲಸೋಗೆ ಉಮೇಶ್, ಕೆಂಚಪ್ಪ, ಶ್ರೀಧರ, ಮರಿಸ್ವಾಮಿ, ಕೆಬ್ಬೆಹುಂಡಿ ನಿಂಗರಾಜು, ಎಂ. ಆರ್.ಸುಂದರ್, ಕನ್ನಹಳ್ಳಿ ಮಹದೇವ, ಎಲ್.ಉಮಾಪತಿ, ನಾಗರಾಜ್ ಮೂರ್ತಿ, ಸೋಸಲೆ ರಾಜಣ್ಣ(ಮಲ್ಲು ), ಚೌಹಳ್ಳಿ ಮಹೇಶ್, ಯಡದೊರೆ ನಿರಂಜನ್, ಶಿವನಂಜು, ಮಹದೇವಸ್ವಾಮಿ, ಸಿದ್ದರಾಜು, ಸೋಸಲೆ ಶಿವಣ್ಣ, ಧರ್ಮರತ್ನಕುಮಾರ, ಚಿದರವಳ್ಳಿ ಮಹೇಶ ಇತರರು ಇದ್ದರು.