ಚಾಮರಾಜನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಬಾಲಸುಬ್ರಹ್ಮಣ್ಯಂ ಮಾತನಾಡಿದರು. ಪದಾಧಿಕಾರಿಗಳು ಹಾಜರಿದ್ದರು.
- ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯ
- ಖಾಸಗಿ ಶಾಲಾ ಮಾನ್ಯತೆ ನವೀಕರಣಕ್ಕೆ ಆಗ್ರಹ
- ಭೂ ಪರಿವರ್ತನೆ ನಿಯಮ ಕೈಬಿಡುವಂತೆ ಮನವಿ
ಚಾಮರಾಜನಗರ: ಖಾಸಗಿ ಶಾಲಾ ಮಾನ್ಯತೆ ನವೀಕರಣ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ವತಿಯಿಂದ ಜ.20 ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಗೌರವಾಧ್ಯಕ್ಷ ಬಾಲಸುಬ್ರಹ್ಮಣ್ಯಂ ಹೇಳಿದರು.
ನಗರದ ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗದಿಂದ ಬೆಳಗ್ಗೆ 10 ಗಂಟೆಗೆ ಮೆರವಣಿಗೆ ಹೊರಟು ಬಿ.ರಾಚಯ್ಯಜೋಡಿ ರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುತ್ತದೆ. ಈ ಪ್ರತಿಭಟನೆಯಲ್ಲಿ ಜಿಲ್ಲೆಯ ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿಕೊಡಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಖಾಸಗಿ ಶಾಲೆಗಳ ಭೂ ಪರಿವರ್ತನೆ ನಿಯಮವನ್ನು ಸಂಪೂರ್ಣವಾಗಿ ಕೈಬಿಡಬೇಕು. ಶಾಲೆಗಳಿಂದ ತೆರಿಗೆ ಸೆಸ್ ಮಾತ್ರ ಪಡೆಯಬೇಕು. ಭೂ ಪರಿವರ್ತನೆ ಶುಲ್ಕ ವಿಧಿಸಬಾರದು. ಕೋರ್ಟ್‌ನ ಇತ್ತೀಚಿನ ಆದೇಶದಂತೆ 15 ಮೀಟರ್‌ಗಿಂತ ಕಡಿಮೆ ಎತ್ತರದ ಕಟ್ಟಡಗಳಿಗೆ ಸರಳ ಆಗ್ನಿ ಸುರಕ್ಷತಾ ನಿಯಮಗಳನ್ನು ಅನ್ವಯಿಸಬೇಕು. ಮಾನ್ಯತೆ ನವೀಕರಣ ಪ್ರಕ್ರಿಯೆಯನ್ನು ಏಕಗವಾಕ್ಷಿ ಯೋಜನೆಯಡಿ ಜಾರಿಗೆ ತರಬೇಕು. ಎಲ್ಲಾ ಶಾಲೆಗಳಿಗೂ ಮಾನ್ಯತೆ ನವೀಕರಣವನ್ನು ಕನಿಷ್ಠ 10 ವರ್ಷಗಳ ಅವಧಿಗೆ ನೀಡಬೇಕು. ಆರ್‌ಟಿಇ ಯೋಜನೆಯಡಿ ಬಾಕಿ ಇರುವ ಸಂಪೂರ್ಣ ಹಣವನ್ನು ತಕ್ಷಣ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಒಕ್ಕೂಟದ ಅಧ್ಯಕ್ಷ ಎಲ್.ಲಿಂಗರಾಜು, ಗೌರವಾಧ್ಯಕ್ಷ ರಾಜೇಂದ್ರ, ಖಜಾಂಚಿ ಮೋಹನ್‌ಕುಮಾರ್, ನಿಕಟಪೂರ್ವ ಅಧ್ಯಕ್ಷ ನಂಜುಂಡಸ್ವಾಮಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಕಾರ್ಯದರ್ಶಿ ಮಹೇಶ್, ಜ್ಞಾನದೀಪ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಆರ್.ಪಿ.ನಂಜುಂಡಸ್ವಾಮಿ, ವಿವೇಕಾನಂದ ಸಂಸ್ಥೆಯ ಕಾರ್ಯದರ್ಶಿ ಸುರೇಶ್‌ನಾಯ್ಡು ಹಾಜರಿದ್ದರು.