ಗುಂಡ್ಲುಪೇಟೆಯಲ್ಲಿ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ಪೊಲೀಸರ ವಿರುದ್ಧ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ವತಿಯಿಂದ ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಯಿತು. ಸೂರ್ಯಕುಮಾರ್, ಕುಲಗಾಣ ಶಾಂತಮೂರ್ತಿ, ಆನಂದ ಭಗೀರಥ, ಶಿವರಾಜ್, ನಟರಾಜು, ಕೂಸಣ್ಣ, ಹೊಂಗನೂರು ಮಹದೇವಸ್ವಾಮಿ, ಮೂಡಹಳ್ಳಿ ಮೂರ್ತಿ ಇತರರು ಇದ್ದರು. 
ಚಾಮರಾಜನಗರ

ಬಿಜೆಪಿ ಯುವ ಮೋರ್ಚಾದಿಂದ ಪ್ರತಿಭಟನೆ

ಕಿರಣ್ ಮಾದರಹಳ್ಳಿ

ಪ್ರಮುಖ ಮುಖ್ಯಾಂಶಗಳು

  • ಕಾರ್ಯಕರ್ತರ ಮೇಲೆ ಪೊಲೀಸರು ದೂರು ದಾಖಲಿಸಿರುವುದಕ್ಕೆ ಖಂಡನೆ
  • ಜಿಲ್ಲಾ ಬಿಜೆಪಿ ಯುವ ಮೋರ್ಚಾದ ವತಿಯಿಂದ ನಗರದಲ್ಲಿ ಪ್ರತಿಭಟನೆ
ಚಾಮರಾಜನಗರ: ಗುಂಡ್ಲುಪೇಟೆಯಲ್ಲಿ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ಸೂಚನೆಯಂತೆ ಪೊಲೀಸ್ ಅಧಿಕಾರಿಗಳು, ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರ ಮೇಲೆ ವಿನಾಕಾರಣ ಪ್ರಕರಣ ದಾಖಲು ಮಾಡುತ್ತಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಶ್ರೀಚಾಮರಾಜೇಶ್ವರ ಉದ್ಯಾನದ ಮುಂಭಾಗದಲ್ಲಿ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಸೂರ್ಯಕುಮಾರ್ ನೇತೃತ್ವದಲ್ಲಿ ಸಮಾವೇಶಗೊಂಡ ಪ್ರತಿಭಟನಾನಿರತರು ಇಲ್ಲಿಂದ ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತದಲ್ಲಿ ಕೆಲ ಕಾಲ ರಸ್ತೆ ನಡೆಸಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್, ಸಚಿವ ಕೆ.ವೆಂಕಟೇಶ್, ಕ್ಷೇತ್ರದ ಶಾಸಕ ಗಣೇಶ್ ಪ್ರಸಾದ್ ಹಾಗೂ ಗುಂಡ್ಲುಪೇಟೆ ಪೋಲಿಸರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಸೂರ್ಯಕುಮಾರ್ ಮಾತನಾಡಿ, ಶಾಸಕ ಗಣೇಶ್‌ಪ್ರಸಾದ್ ಅವರು ಪೊಲೀಸರ ಮೂಲಕ ಬಿಜೆಪಿ ಕಾರ್ಯಕರ್ತರ ಮೇಲೆ ಇಲ್ಲಸಲ್ಲದ ಕೇಸ್‌ಗಳನ್ನು ಹಾಕಿಸುತ್ತಿದ್ದಾರೆ. ಈಗಾಗಲೇ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿರುವ ಶಾಸಕ ಗಣೇಶ್ ಪ್ರಸಾದ್ ಇದನ್ನು ಪ್ರಶ್ನೆ ಮಾಡಲು ಮುಂದಾದಾಗ ಯುವ ಮೋರ್ಚಾ ಕಾರ್ಯಕರ್ತರ ಮೇಲೆ ಗೂಂಡಾಗಿರಿ ಪ್ರದರ್ಶನ ಮಾಡಿದ್ದಾರೆ ಎಂದು ದೂರಿದರು.
ಪ್ರತಿಭಟನೆ ವ್ಯಕ್ತಪಡಿಸುವುದು ನಮ್ಮ ಹಕ್ಕು. ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿರುವ ಭಾರತದಲ್ಲಿ ಹೋರಾಟ ನಮ್ಮ ರಕ್ತಗತವಾಗಿ ಬಂದಿದೆ. ನಾವು ದೇಶಕ್ಕೆ ಸ್ವಾತಂತ್ರ್ಯ ಪಡೆದಿದ್ದು ಹೋರಾಟದಿಂದಲೇ. ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರುವುದು ಇಂತಹ ಅನೇಕ ಹೋರಾಟಗಳಿಂದಲೇ. ಆದರೆ ಇಂದು ಹೋರಾಟ ಮಾಡುವವರ ಮೇಲೆ ಕೇಸ್ ಹಾಕುವುದು ಪ್ರತಿಭಟನೆಗಳನ್ನು ಹತ್ತಿಕ್ಕುವುದು ನಮ್ಮ ಸರ್ಕಾರದ ವಿರುದ್ಧ ಯಾರೂ ಮಾತನಾಡಬಾರೆಂಬ ಮನೋಭಾವದಿಂದ ಈ ರೀತಿ ಮಾಡಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಗಣೇಶ್ ಪ್ರಸಾದ್ ಅವರೇ ನೀವೇ ಟಿಪ್ಪರ್‌ಗಳಿಗೆ ಕಲ್ಲು ಹೊಡೆಯಿರಿ, ಪಂಚರ್ ಮಾಡಿ ಎಂದು ಹೇಳಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ನಿಮ್ಮ ಮೇಲೆ ಏಕೆ ಯಾವುದೇ ಪ್ರಕರಣ ದಾಖಲು ಮಾಡಲಿಲ್ಲ ಎಂದು ಪ್ರಶ್ನಿಸಿದರು.
ಚುಡಾ ಮಾಜಿ ಅಧ್ಯಕ್ಷ ಕುಲಗಾಣ ಶಾಂತಮೂರ್ತಿ ಮಾತನಾಡಿ, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಟಿಪ್ಪರ್ ಹಾವಳಿ ಹೆಚ್ಚಾಗಿದ್ದು, ಅದರಿಂದ ಸಾರ್ವಜನಿಕರಿಗೆ ತುಂಬ ಅನನುಕೂಲವಾಗುತ್ತಿದೆ. ಅನೇಕ ಅಪಘಾತಗಳು ಸಂಭವಿಸಿ ಅಮೂಲ್ಯ ಜೀವ ಕಳೆದುಹೋಗಿವೆ. ಅಪಘಾತಕ್ಕೆ ಸಂಬಂಧಿಸಿದಂತೆ ಹೋರಾಟ ಮಾಡಿದ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರನ್ನು ಅನವಶ್ಯಕ ಶಾಸಕರ ಅಣತಿಯಂತೆ ಪೊಲೀಸರು ಪ್ರಕರಣ ದಾಖಲು ಮಾಡಿ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿರುವುದು ಅತ್ಯಂತ ಖಂಡನೀಯ ಎಂದರು.
ಪ್ರತಿಭಟನೆಯಲ್ಲಿ ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆನಂದ ಭಗೀರಥ, ಶಿವರಾಜ್, ನಟರಾಜು, ಕೂಸಣ್ಣ, ಹೊಂಗನೂರು ಮಹದೇವಸ್ವಾಮಿ, ಮೂಡಹಳ್ಳಿ ಮೂರ್ತಿ, ಮನೋಜ್ ಪಟೇಲ್, ಮರಿಯಾಲ ಮಹೇಶ್, ಕಿಲಗೆರೆ ಶಶಿಕುಮಾರ್, ಪ್ರವೀಣ್ ನಾಯಕ, ಕುಮಾರ್, ಮಧು, ಸೋಮುವಾರಪೇಟೆ ಗುರುಪ್ರಸಾದ್, ವೀರೇಂದ್ರ, ವೇಣುಗೋಪಾಲ, ಕಾಡಹಳ್ಲಿ ಕುಮಾರ್, ಭೋಗಾಪುರ ಕುಮಾರ್, ಮಣಿನಾಯಕ, ಅಶ್ವಿನ್, ಮಂಜು, ಇತರರು ಭಾಗವಹಿಸಿದ್ದರು.