ಒಳಮೀಸಲಾತಿಯಲ್ಲಿ ಆಗಿರುವ ಅನ್ಯಾಯ ಖಂಡಿಸಿ ಯಳಂದೂರು ಪಟ್ಟಣದಲ್ಲಿ ಬುಧವಾರ ಬಲಗೈ ಸಮುದಾಯದ ಜನರು ಪ್ರತಿಭಟನೆ ನಡೆಸಿದರು.  
ಚಾಮರಾಜನಗರ

ಒಳಮೀಸಲಾತಿ ಜಾರಿ ವಿರೋಧಿಸಿ ಪ್ರತಿಭಟನೆ

ಮಾದೇಶ್ ತಿ.ನರಸೀಪುರ

ಪ್ರಮುಖ ಮುಖ್ಯಾಂಶಗಳು

  • ಯಳಂದೂರಿನಲ್ಲಿ ಬಲಗೈ ಸಮುದಾಯಗಳ ಒಕ್ಕೂಟದಿಂದ ರಸ್ತೆ ಸಂಚಾರ ತಡೆ
ಯಳಂದೂರು: ಒಳ ಮೀಸಲಾತಿಯಲ್ಲಿ ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಅನ್ಯಾಯವಾಗಿದ್ದು ಇದನ್ನು ಜಾರಿಗೊಳಿಸಬಾರದೆಂದು ಆಗ್ರಹಿಸಿ ತಾಲೂಕು ಬಲಗೈ ಸಮುದಾಯಗಳ ಒಕ್ಕೂಟ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಸೇವಾ ಸಮಿತಿಯಿಂದ ಪಟ್ಟಣದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದ ಮುಂಭಾಗದಲ್ಲಿ ಜಮಾವಣೆಗೊಂಡ ಸಾವಿರಾರು ಜನರು ಇಲ್ಲಿಂದ ಮೆರವಣಿಗೆ ಮೂಲಕ ಪಟ್ಟಣದ ಎಸ್‌ಬಿಐ ವೃತ್ತಕ್ಕೆ ತೆರಳಿ ಕೆಲಕಾಲ ರಸ್ತೆ ಸಂಚಾರ ತಡೆ ನಡೆಸಿದರು. ರಾಜ್ಯ ಸರ್ಕಾರವನ್ನು ಸಮರ್ಥಿಸಿಕೊಳ್ಳುತ್ತಿರುವ ಸಚಿವರು, ಶಾಸಕರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಪಟ್ಟಣದ ತಹಸೀಲ್ದಾರ್ ಕಚೇರಿ ಮುಂಭಾಗ ಜಮಾವಣೆಗೊಂಡರು. ಈ ಸಂದರ್ಭದಲ್ಲಿ ನಾಗಮೋಹನ್ ದಾಸ್ ವರದಿ ಅವೈಜ್ಞಾನಿಕವಾಗಿದೆ. ಇದರಲ್ಲಿ ಅನೇಕ ತಾಂತ್ರಿಕ ತೊಂದರೆಗಳಿವೆ. ಇದು ಸಾಮಾಜಿಕ ಅಸಮಾಧಾನಕ್ಕೆ ಕಾರಣವಾಗಿದೆ. ಈ ನೀತಿಯನ್ನು ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಸಹಿ ಹಾಕದೆ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.
ಆದರೆ ಬಲಗೈ ಸಮುದಾಯದ ಸಚಿವರು ಹಾಗೂ ಶಾಸಕರು ಮೌನವಾಗಿದ್ದಾರೆ ಎಂದು ಆರೋಪಿಸಿದರು.
ಈ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಯುವ ತನಕ ಶಿಕ್ಷಣ ಮತ್ತು ಉದ್ಯೋಗಕ್ಕೆ ಅನ್ವಯಿಸುತ್ತಿರುವ ಒಳಮೀಸಲಾತಿಯ ಕಾರ್ಯ ಚಟುವಟಿಕೆಗಳಿಗೆ ಶೀಘ್ರ ತಡೆಯಾಜ್ಞೆ ನೀಡಬೇಕು, ಹೊಸ ಜಾತಿ ಪ್ರಮಾಣ ಪತ್ರ ವಿತರಣೆಯನ್ನು ತುರ್ತಾಗಿ ನಿಲ್ಲಿಸಬೇಕು, ಹಳೇ ಜಾತಿ ಪ್ರಮಾಣ ಪತ್ರವನ್ನು ಮುಂದುವರಿಸಬೇಕು. ಸರ್ಕಾರ ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಬೇಕು ಎಂದು ಶಿರಸ್ತೇದಾರ್ ಶಾಂತಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಅಂಬೇಡ್ಕರ್ ಸೇವಾ ಸಮಿತಿ ಅಧ್ಯಕ್ಷ ಕೆಸ್ತೂರು ಸಿದ್ದರಾಜು, ಪ್ರಧಾನ ಕಾರ್ಯದರ್ಶಿ ಯರಿಯೂರು ನಟರಾಜು, ದಸಂಸ ಜಿಲ್ಲಾ ಸಂಚಾಲಕ ಯರಿಯೂರು ಸಿ.ರಾಜಣ್ಣ, ಜಿಪಂ ಮಾಜಿ ಸದಸ್ಯ ವಡಗೆರೆದಾಸ್, ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಸಿ. ಕೃಷ್ಣಮೂರ್ತಿ, ದುಗ್ಗಹಟ್ಟಿ ಮಾದೇಶ್, ಮಾಂಬಳ್ಳಿ ರಾಮು, ವೆಂಕಟೇಶ್, ಮಲ್ಲು, ಮಂಜುನಾಥ್, ಹೊನ್ನೂರು ಚಿನ್ನಪ್ಪ, ಜೆ. ಶ್ರೀನಿವಾಸ್, ನಂಜುಂಡಸ್ವಾಮಿ, ಕೊಮಾರನಪುರ ಪುಟ್ಟರಾಜು, ಕೆಸ್ತೂರು ಮಧು, ಕಪಾಲಿ ಇತರರು ಇದ್ದರು.