ಗುಂಡ್ಲುಪೇಟೆ ತಾಲೂಕಿನ ಪರಮಾಪುರ ಗ್ರಾಮದಲ್ಲಿ ಬರ ಅಧ್ಯಯನಕ್ಕೆ ಆಗಮಿಸಿದ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ವಿರುದ್ಧ ಸ್ಥಳೀಯರು ದೂರು ನೀಡಿದರು. ಗಣೇಶ್ ಪ್ರಸಾದ್, ಮೃತ್ಯುಂಜಯಪ್ಪ, ಬಸವೇಗೌಡ, ನಾಗೇಂದ್ರ, ಹೂರದಹಳ್ಳಿ ರಾಜು, ನಾಗೇಶ್ ಇತರರು ಇದ್ದರು. 
ಚಾಮರಾಜನಗರ

ನೀರಾವರಿ ಇಲಾಖೆ ಅಧಿಕಾರಿಗಳ ಅಮಾನತಿಗೆ ಪಟ್ಟು

ಪ್ರಮುಖ ಮುಖ್ಯಾಂಶಗಳು

  • ಪರಮಾಪುರ ಗ್ರಾಮದಲ್ಲಿ ಸಚಿವ ಸಿ.ಪುಟ್ಟರಂಗಶೆಟ್ಟಿ ಮುಂದೆ ಆಕ್ರೋಶ
  • ಕೆರೆಗೆ ನೀರು ತುಂಬಿಸುವಲ್ಲಿ ಕರ್ತವ್ಯಲೋಪ

ಗುಂಡ್ಲುಪೇಟೆ:

ಬರ ಅಧ್ಯಯನಕ್ಕೆ ಗುರುವಾರ ತಾಲೂಕಿನ ಪರಮಾಪುರ ಗ್ರಾಮಕ್ಕೆ ಆಗಮಿಸಿದ್ದ ಸಚಿವ ಸಿ.ಪುಟ್ಟರಂಗಶೆಟ್ಟ ಅವರನ್ನು ಭೇಟಿ ಮಾಡಿದ ಸುತ್ತಮುತ್ತಲಿನ ಗ್ರಾಮಸ್ಥರು ಕೆರೆಗೆ ನೀರು ತುಂಬಿಸುವಲ್ಲಿ ಕರ್ತವ್ಯಲೋಪ ಎಸಗುತ್ತಿರುವ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕೂಡಲೇ ಅಮಾನತಿಗೆ ಒತ್ತಾಯಿಸಿದರು.

ಗ್ರಾಮದ ಮುಖಂಡ ಮೃತ್ಯುಂಜಯಪ್ಪ ಮಾತನಾಡಿ, ಹಿಂದೆ ಶ್ಯಾನಾಡ್ರಹಳ್ಳಿ ಹಾಗೂ ಕುಮಚಹಳ್ಳಿ ಗ್ರಾಮಗಳ ನಡುವೆ ಇರುವ ಒಗರು ಕೆರೆಗೆ ತಮ್ಮಡಹಳ್ಳಿ ಪಂಪ್‌ಹೌಸ್‌ನಿಂದ ನೀರು ಬಿಡಲಾಗುತ್ತಿತ್ತು. ಆದರೆ ಇತ್ತೀಚೆಗೆ ವಾಲ್ವ್‌ನಲ್ಲಿ ಉಂಟಾದ ಸಣ್ಣ ರಿಪೇರಿಯಿಂದ ನೀರು ಸರಬರಾಜು ಸ್ಥಗಿತವಾಗಿರುವ ಬಗ್ಗೆ ಸುತ್ತಮುತ್ತಲಿನ ರೈತರು ಶಾಸಕರ ಗಮನಕ್ಕೆ ತಂದರು.
ಕೂಡಲೇ ಪೈಪ್ ರಿಪೇರಿ ಮಾಡಿ ಕೆರೆಗೆ ನೀರು ಹರಿಸುವಂತೆ ಗ್ರಾಮಸ್ಥರ ಎದುರೇ ಶಾಸಕ ಗಣೇಶ್ ಪ್ರಸಾದ್ ನಿಗಮದ ಎಇ ಮಹೇಶ್ ಅವರಿಗೆ ನಿರ್ದೇಶನ ನೀಡಿದರೂ ನೀರುಹರಿಸಿಲ್ಲ. ಇದರಿಂದ ಸಮಸ್ಯೆಗೆ ಒಳಗಾದ ರೈತರು ತಾವೇ ತಲಾ ಒಂದು, ಎರಡು ಸಾವಿರ ರೂಪಾಯಿ ಚಂದಾ ಸಂಗ್ರಹಿಸಿ ಸ್ವತಃ ರಿಪೇರಿ ಕಾರ್ಯಕೈಗೊಂಡಿದ್ದಾರೆ. ಪ್ರತಿದಿನವೂ ಹಗಲಿನಲ್ಲಿ ರೈತರು ಪೈಪ್‌ಲೈನ್ ಕೆಲಸ ಮಾಡಿದ ನಂತರ ಸಂಜೆ ವೇಳೆಗೆ ನಿಗಮದ ಸಿಬ್ಬಂದಿ ಆಗಮಿಸಿ ಫೋಟೋ ತೆಗೆದುಕೊಂಡು ನಕಲಿ ಬಿಲ್ ಮಾಡಿಕೊಳ್ಳುವ ಮೂಲಕ ರೈತರನ್ನು ಹಾಗೂ ಜನಪ್ರತಿನಿಧಿಗಳ ಮಾತನ್ನು ಉಲ್ಲಂಘಿಸಿದ್ದಾರೆ. ಆದ್ದರಿಂದ ಅವರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಪಟ್ಟುಹಿಡಿದರು.
ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಸಚಿವರು ಜಿಲ್ಲಾಧಿಕಾರಿಗೆ ನಿರ್ದೇಶ ನೀಡಿದರು.
ರಂಗನಾಥಪುರಕ್ಕೆ ಭೇಟಿ ನೀಡಿದಾಗ ಸಚಿವರನ್ನು ಸನ್ಮಾನಿಸಿದ ಗ್ರಾಮಸ್ಥರು ಹಿಂದುಳಿದ ಉಪ್ಪಾರ ಜನಾಂಗದವರೇ ವಾಸಿಸುವ ಗ್ರಾಮದಲ್ಲಿನ ಮೂಲ ಸೌಕರ್ಯಗಳ ತೀವ್ರ ಕೊರತೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಮಹಿಳೆಯರು, ಸಚಿವರನ್ನು ನೇರವಾಗಿ ಪ್ರಶ್ನಿಸಿದರು.
ಗ್ರಾಮದಲ್ಲಿ ರಸ್ತೆಗಳು ಸರಿ ಇಲ್ಲ, ಚರಂಡಿ ವ್ಯವಸ್ಥೆ ಇಲ್ಲ, ಬಸ್ ಸೌಲಭ್ಯದ ಕೊರತೆ ಇದೆ ಎಂದು ಮಹಿಳೆಯರು ದೂರಿದರು. ಕುಡಿಯುವ ನೀರಿನ ಸಮಸ್ಯೆಯೂ ಇರುವುದಾಗಿ ತಿಳಿಸಿದ ಗ್ರಾಮಸ್ಥರು, ಕೇವಲ ಕುಡಿಯುವ ನೀರು ಹೊರತುಪಡಿಸಿ ಬೇರೆ ಯಾವುದೇ ಸೌಕರ್ಯಗಳಿಲ್ಲ. ನಮಗೆ ಇಷ್ಟು ಮಾಡಿಕೊಡಿ ಎಂದು ಸಚಿವರಲ್ಲಿ ಮನವಿ ಮಾಡಿ ಪಿಂಚಣಿ ಹಣ ತಲುಪದಿರುವ ಬಗ್ಗೆಯೂ ದೂರಿದರು. ಡಿಸಿ ಕಚೇರಿ ಮತ್ತು ತಾಲೂಕು ಕಚೇರಿಗಳಿಗೆ ಅಲೆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡರು.
ಗ್ರಾಮದ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ಅನುದಾನ ನೀಡಲಾಗಿದ್ದು ಸದ್ಯದಲ್ಲಿಯೇ ಕಾಮಗಾರಿ ಆರಂಭಿಸಲಾಗುವುದು ಎಂದು ಶಾಸಕ ಗಣೇಶ್ ಪ್ರಸಾದ್ ವಿವರ ನೀಡಿದರು.
ಬರ ಅಧ್ಯಯನ:
ಗುಂಡ್ಲುಪೇಟೆ ಕ್ಷೇತ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅಧಿಕಾರಿಗಳ ಜತೆ ಗುರುವಾರ ಬರ ಅಧ್ಯಯನ ನಡೆಸಿದರು. ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ಜಿಲ್ಲಾಧಿಕಾರಿ ಶ್ರೀರೂಪಾ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಜತೆಗೂಡಿ ಬೆಳಗ್ಗೆ ಹರವೆ ಹೋಬಳಿಯ ಹರವೆ, ಮಲೆಯೂರು, ಬೇಗೂರು ಹೋಬಳಿಯ ಸೀಗೆವಾಡಿ, ರಂಗನಾಥಪುರ, ನಿಟ್ರೆ ಹಾಗೂ ತೆರಕಣಾಂಬಿ ಹೋಬಳಿಯ ಪರಮಾಪುರ ಮತ್ತು ಬಲಚವಾಡಿ ಗ್ರಾಮಗಳ ಜಮೀನುಗಳಿಗೆ ತೆರಳಿ ಬೆಳೆನಾಶ ಹಾಗೂ ಕುಡಿಯುವ ನೀರಿನ ಲಭ್ಯತೆ ಬಗ್ಗೆ ಪರಿಶೀಲಿಸಿದರು.