ಚಾಮರಾಜನಗರದ ಶ್ರೀ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಕೆಂಗಾಕಿ ನಾಗರತ್ನ, ಭಾಗ್ಯ, ನಾಗಶ್ರೀ, ಸುವರ್ಣಾ, ಚಿನ್ನಮ್ಮ, ಪದ್ಮಾ ಪುರುಷೋತ್ತಮ್, ಕಾವೇರಿ ಶಿವಕುಮಾರ್ ಇದ್ದರು.
ಚಾಮರಾಜನಗರ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಹೆಸರು ಬದಲಾಯಿಸುವ ಮೂಲಕ ಗ್ರಾಮೀಣ ಜನರ ಉದ್ಯೋಗವನ್ನು ಕೇಂದ್ರ ಸರ್ಕಾರ ಕಸಿದುಕೊಂಡಿದೆ ಎಂದು ಆರೋಪಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ಅಲ್ಲಿಂದ ಮೆರವಣಿಗೆ ಹೊರಟು ಶ್ರೀಭುವನೇಶ್ವರಿ ವೃತ್ತದಲ್ಲಿ ಕೆಲಕಾಲ ಧರಣಿ ನಡೆಸಿದರು. ಬಿಜೆಪಿ, ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಾಗರತ್ನ ಕೆಂಗಾಕಿ ಮಾತನಾಡಿ, ಕಳೆದ 20 ವರ್ಷಗಳಿಂದ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯು ಗ್ರಾಮೀಣ ಜನರ ಆಶಾಕಿರಣವಾಗಿತ್ತು. ಮಹಾತ್ಮಾ ಗಾಂಧಿ ಅವರ ಹೆಸರಿನಲ್ಲಿದ್ದ ಈ ಯೋಜನೆಯು ಗ್ರಾಮ ಪಂಚಾಯಿತಿಗಳ ಸಬಲೀಕರಣ ಮತ್ತು ಆರ್ಥಿಕ ಭದ್ರತೆಗೆ ಪೂರಕವಾಗಿತ್ತು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಗಾಂಧೀಜಿ ಅವರ ಗ್ರಾಮ ಸ್ವರಾಜ್ ಪರಿಕಲ್ಪನೆಯೊಂದಿಗೆ ಈ ಯೋಜನೆಯನ್ನು ಜಾರಿ ಮಾಡಿದ್ದರು ಎಂದರು.
ಮನರೇಗಾ ಯೋಜನೆಯಿಂದ 20 ವರ್ಷಗಳಲ್ಲಿ ಲಕ್ಷಾಂತರ ಹಳ್ಳಿಗಳು ಪ್ರಗತಿಯಾಗಿವೆ. ಕೋಟ್ಯಂತರ ನಿರುದ್ಯೋಗಿಗಳಿಗೆ ಉದ್ಯೋಗ ನೀಡಲಾಗಿದೆ. ಈ ಯೋಜನೆಯ ಜನಪ್ರಿಯತೆಯನ್ನು ಸಹಿಸದ ಕೇಂದ್ರ ಸರ್ಕಾರ ಹೆಸರು ಬದಲಾವಣೆ ಮಾಡಿ ಬಡವರು ಹಾಗೂ ಕೂಲಿ ಕಾರ್ಮಿಕರ ವಿರುದ್ದ ಗಧಾಪ್ರಹಾರ ಮಾಡಿದೆ. ವಿಶೇಷವಾಗಿ ಮಹಿಳೆಯರ ಹಕ್ಕು ಕಸಿದುಕೊಂಡಿದೆ. ಈ ಕೂಡಲೇ ಕೇಂದ್ರ ಸರ್ಕಾರ ಯೋಜನೆಯನ್ನು ವಾಪಸ್ ಪಡೆದು, ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಪುನರ್ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರುಸ್ವಾಮಿ, ಯುವ ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಶ್ರೀನಿವಾಸ್ ಶೆಟ್ಟಿ, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಭಾಗ್ಯ, ನಾಗಶ್ರೀ, ಸುವರ್ಣಾ, ಚಿನ್ನಮ್ಮ, ಪದ್ಮಾ ಪುರುಷೋತ್ತಮ್, ಜಿಪಂ ಮಾಜಿ ಅಧ್ಯಕ್ಷೆ ಕಾವೇರಿ ಶಿವಕುಮಾರ್, ಮಹದೇವಮ್ಮ ರೇಖಾ, ಕೋಮಲ, ದುಂಡಮ್ಮ, ರತ್ನಮ್ಮ ಇನ್ನಿತರರಿದ್ದರು.