ಚಾಮರಾಜನಗರ ತಾಲೂಕಿನ ಮಲೆಯೂರು ಗ್ರಾಮದಲ್ಲಿ ಸರ್ಕಾರಿ ಶಾಲೆಯನ್ನು ವಿಲೀನಗೊಳಿಸದಂತೆ ಒತ್ತಾಯಿಸಿ ಎಐಡಿಎಸ್‌ಓ ನೇತೃತ್ವದಲ್ಲಿ ಗ್ರಾಮಸ್ಥರು ಹಾಗೂ ಮಕ್ಕಳು ಗುರುವಾರ ಪ್ರತಿಭಟನೆ ನಡೆಸಿದರು. ಚಂದನಾ, ರಾಜಮ್ಮ, ಸುನೀಲ್, ರಾಘವೇಂದ್ರ, ಮಹೇಶ್, ಮಹದೇವಸ್ವಾಮಿ, ರೇಖಾ, ಗೋಪಾಲ, ಸಿದ್ದರಾಜು, ಮಂಜುನಾಥ್, ಗುರು, ಕುಮಾರ್ ಇನ್ನಿತರರಿದ್ದರು.  
ಚಾಮರಾಜನಗರ

ಸರ್ಕಾರಿ ಶಾಲೆಯನ್ನು ವಿಲೀನಗೊಳಿಸದಂತೆ ಪ್ರತಿಭಟನೆ

ಪ್ರಮುಖ ಮುಖ್ಯಾಂಶಗಳು

  • ಮಲೆಯೂರು ಮತ್ತು ಹಳೇಪುರ ಗ್ರಾಮಸ್ಥರಿಂದ ಧರಣಿ
  • ಎಐಡಿಎಸ್‌ಓ ನೇತೃತ್ವದಲ್ಲಿ ಹೋರಾಟ
  • ಶಾಲೆ ಉಳಿಸಿ ಹೋರಾಟ ಸಮಿತಿ ರಚನೆ
ಚಾಮರಾಜನಗರ: ತಾಲೂಕಿನ ಮಲೆಯೂರು ಹಾಗೂ ಹಳೇಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ವಿಲೀನದ ಹೆಸರಿನಲ್ಲಿ ಸರ್ಕಾರ ಮುಚ್ಚಲು ಹೊರಟಿದೆ ಎಂದು ಆರೋಪಿಸಿ ಎಐಡಿಎಸ್‌ಓ ನೇತೃತ್ವದಲ್ಲಿ ಗ್ರಾಮಸ್ಥರು ಹಾಗೂ ಮಕ್ಕಳು ಗುರುವಾರ ಪ್ರತಿಭಟನೆ ನಡೆಸಿದರು.
ತಾಲೂಕಿನ ಮಲೆಯೂರು ಗ್ರಾಮದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಕೆಲಕಾಲ ಧರಣಿ ನಡೆಸಿದರು. ಸರ್ಕಾರದ ವಿರುದ್ಧ ೋಷಣೆಯನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಎಐಡಿಎಸ್‌ಓ ಜಿಲ್ಲಾ ಸಂಚಾಲಕಿ ಚಂದನಾ ಮಾತನಾಡಿ, ರಾಜ್ಯ ಸರ್ಕಾರದ ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಕೆಪಿಎಸ್ ಶಾಲೆ ಸ್ಥಾಪಿಸಲಾಗುತ್ತದೆ. ಇತರೆ ಶಾಲೆಗಳ ಮಕ್ಕಳು ಅಲ್ಲಿಗೆ ಸೇರುವುದರಿಂದ ಅಂತಹ ಶಾಲೆಗಳ ಕಟ್ಟಡಗಳನ್ನು ಸಂರಕ್ಷಿಸಬಹುದಾಗಿದೆ. ಸರ್ಕಾರಿ ಶಾಲೆಗಳ ಕಟ್ಟಡ, ಜಮೀನು ಸೇರಿದಂತೆ ಯಾವುದೇ ಆಸ್ತಿಯನ್ನು ನಿರ್ಲಕ್ಷ್ಯ ಮಾಡುವುದಿಲ್ಲ. ಅವುಗಳನ್ನು ಸ್ಥಳೀಯ ಸ್ವಸಹಾಯ ಸಂಘಗಳಿಗೆ ನೀಡಲಾಗುವುದು ಎಂದು ಶಿಕ್ಷಣ ಸಚಿವರು ಹೇಳಿದ್ದರು. ಆದರೆ ಗೊಂದಲದ ಹೇಳಿಕೆಗಳನ್ನು ನೀಡುವ ಮೂಲಕ ಶಾಲೆಗಳನ್ನು ಮುಚ್ಚುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.
ಗ್ರಾಮಸ್ಥೆ ರಾಜಮ್ಮ ಮಾತನಾಡಿ , ದುಡ್ಡು ಇರುವವರು ಖಾಸಗಿ ವಾಹನದಲ್ಲಿ ಕಳಿಸುತ್ತಾರೆ. ಆದರೆ ನಾವು ಬಡವರು ನಮ್ಮ ಮಕ್ಕಳನ್ನು ನಮ್ಮೂರ ಶಾಲೆಯಲ್ಲಿ ಓದಿಸಬೇಕು. ನಮ್ಮೂರ ಮುಚ್ಚಿದರೆ ಮಕ್ಕಳು ಎಲ್ಲಿ ಓದಬೇಕು ಎಂದು ಪ್ರಶ್ನಿಸಿದರು.
ಹಳೇಪುರ ಗ್ರಾಮದ ಸಿದ್ದರಾಜು ಮಾತನಾಡಿ, ನಮ್ಮ ಊರಿನ ಶಾಲೆಯಲ್ಲಿ ಓದಿದ ಹಲವಾರು ವಿದ್ಯಾರ್ಥಿಗಳು ದೊಡ್ಡ ದೊಡ್ಡ ಹುದ್ದೆಯಲ್ಲಿ ಇದ್ದಾರೆ. ಹಲವಾರು ಸಾಧನೆಯನ್ನು ಮಾಡಿದ್ದಾರೆ .ಆ ಅವಕಾಶ ಈ ಊರಿನ ಮಕ್ಕಳಿಗೆ ಸಿಗಬೇಕೆಂದರೆ ನಮ್ಮ ಗ್ರಾಮದ ಶಾಲೆ ಉಳಿಯಲೇಬೇಕು ಎಂದು ಒತ್ತಾಯಿಸಿದರು. ಬಳಿಕ ಮಲೆಯೂರು ಹಾಗೂ ಹಳೇಪುರ ಸರ್ಕಾರಿ ಶಾಲೆ ಉಳಿಸಿ ಹೋರಾಟ ಸಮಿತಿಯನ್ನು ರಚಿಸಲಾಯಿತು.
ಪ್ರತಿಭಟನೆಯಲ್ಲಿ ಯುವಜನ ಸಂಘಟನೆಯ ಅಧ್ಯಕ್ಷ ಸುನೀಲ್, ಗ್ರಾಮಸ್ಥರಾದ ರಾಘವೇಂದ್ರ, ಮಹೇಶ್, ಮಹದೇವಸ್ವಾಮಿ, ರೇಖಾ, ಗೋಪಾಲ, ಸಿದ್ದರಾಜು, ಮಂಜುನಾಥ್, ಗುರು, ಕುಮಾರ್ ಹಾಗೂ ಇತರರು ಭಾಗವಹಿಸಿದ್ದರು.