ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಮುಂಭಾಗ ಪರಿಶಿಷ್ಟ ಜಾತಿ ಬಲಗೈ ಸಮುದಾಯ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
- ಪರಿಶಿಷ್ಟ ಜಾತಿ ಬಲಗೈ ಸಮುದಾಯ ಒಕ್ಕೂಟದ ವತಿಯಿಂದ ಧರಣಿ
- ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರ ವಿರುದ್ಧ ಆಕ್ರೋಶ
- ಸಿಎಂ ಭಾವಚಿತ್ರ ವಿರೂಪಕ್ಕೆ ಯತ್ನ
ಚಾಮರಾಜನಗರ: ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳಿಗೆ ಅವೈಜ್ಞಾನಿಕ ಒಳಮೀಸಲಾತಿ ಹಾಗೂ ರೋಸ್ಟರ್ ಪದ್ಧತಿ ಜಾರಿ ಮಾಡಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಬಲಗೈ ಸಮುದಾಯದ ಒಕ್ಕೂಟ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಮಹಾಸಭಾ ವತಿಯಿಂದ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ಅಲ್ಲಿಂದ ಮೆರವಣಿಗೆ ಹೊರಟು ಸತ್ತಿ ರಸ್ತೆ, ಸುಲ್ತಾನ್ ಷರೀಫ್ ವೃತ್ತ, ದೊಡ್ಡಂಗಡಿ, ಚಿಕ್ಕಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ, ಶ್ರೀಭುವನೇಶ್ವರಿ ವೃತ್ತ ಹಾಗೂ ಬಿ.ರಾಚಯ್ಯ ಜೋಡಿರಸ್ತೆ ಮಾರ್ಗವಾಗಿ ಜಿಲ್ಲಾಡಳಿತ ಭವನಕ್ಕೆ ತೆರಳಿ ಕೆಲಕಾಲ ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಾಲೂಕು ಡಾ.ಬಿ.ಆರ್.ಅಂಬೇಡ್ಕರ್ ಮಹಾಸಭಾ ಅಧ್ಯಕ್ಷ ಉಮೇಶ್ ಕುದರ್ ಮಾತನಾಡಿ, ರಾಜ್ಯ ಸರ್ಕಾರ ತರಾತುರಿಯಲ್ಲಿ ಒಳಮೀಸಲಾತಿಯನ್ನು ಜಾರಿಗೊಳಿಸುವ ಮೂಲಕ ಪರಿಶಿಷ್ಟಜಾತಿಯ ಬಲಗೈ ಸಂಬಂಧಿತ ಜಾತಿಗಳಿಗೆ ಅನ್ಯಾಯ ಮಾಡಲು ಮುಂದಾಗಿದೆ. ನಾಗಮೋಹನ್ ದಾಸ್ ಸಮಿತಿ ನೀಡಿರುವ ಅವೈಜ್ಞಾನಿಕ ಒಳಮೀಸಲಾತಿಯನ್ನು ಈ ಕೂಡಲೇ ರದ್ದುಪಡಿಸಬೇಕು. ರೋಸ್ಟರ್ ಬಿಂದುವಿನಲ್ಲಿ ಪರಿಶಿಷ್ಟ ಜಾತಿಯ ಬಲಗೈ ಸಮುದಾಯವು 9ನೇ ಸ್ಥಾನದಲ್ಲಿ ಇರುವುದನ್ನು ರದ್ದುಪಡಿಸಬೇಕು. ಎಸ್ಸಿ ಜಾತಿ ಪ್ರಮಾಣ ಪತ್ರವನ್ನು ಮೊದಲಿನಂತೆ ನೀಡಬೇಕು. ಒಳಮೀಸಲಾತಿ ಗೊಂದಲಗಳನ್ನು ಸರಿಪಡಿಸುವ ತನಕ ಯಾವುದೇ ಸರ್ಕಾರಿ ಹುದ್ದೆಗಳನ್ನು ನೇಮಕ ಮಾಡಬಾರದು ಎಂದು ಒತ್ತಾಯಿಸಿದರು.
ಮಹಾಸಭಾ ಗೌರವಾಧ್ಯಕ್ಷ ಸಿ.ಎಂ.ಕೃಷ್ಣಮೂರ್ತಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಲೇ ಅವೈಜ್ಞಾನಿಕ ಒಳಮೀಸಲಾತಿ ವರದಿಯನ್ನು ಜಾರಿಗೊಳಿಸುವ ಮೂಲಕ ಪರಿಶಿಷ್ಟ ಜಾತಿಯ ಉಪಜಾತಿಗಳಲ್ಲಿ ಒಡಕನ್ನು ಉಂಟುಮಾಡಿದೆ. ನಾಗಮೋಹನ್ ದಾಸ್ ವರದಿಯಂತೆ ಪರಿಶಿಷ್ಟ ಜಾತಿಯ ಉಪಜಾತಿಗಳನ್ನು ಮೂರು ವರ್ಗಗಳನ್ನಾಗಿ ಮಾಡಿ, ಬಲಗೈ ಸಂಬಂಧಿತ ಜಾತಿಗಳಿಗೆ ರೋಸ್ಟರ್ ಬಿಂದುವಿನಲ್ಲಿ 9 ನೇ ಸ್ಥಾನವನ್ನು ನೀಡಿದೆ. ಈ ಮೂಲಕ ಬಲಗೈ ಸಮುದಾಯ ಹಾಗೂ ಅಲೆಮಾರಿ ಸಮುದಾಯಗಳ ಶಿಕ್ಷಣ ಮತ್ತು ಉದ್ಯೋಗದ ಹಕ್ಕನ್ನು ಮೊಟಕುಗೊಳಿಸುವ ಪ್ರಯತ್ನ ಮಾಡುತ್ತಿದೆ ಎಂದು ದೂರಿದರು.
ಮಹಾಸಭಾ ಕಾರ್ಯಾಧ್ಯಕ್ಷ ಸಿ.ಕೆ.ಮಂಜುನಾಥ್ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಅವೈಜ್ಞಾನಿಕ ಒಳಮೀಸಲಾತಿಯನ್ನು ಜಾರಿಗೆ ತಂದಿದ್ದು, ಇದು ಹೊಲೆಯ ಸಮುದಾಯಕ್ಕೆ ಮರಣ ಶಾಸನವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಲಗೈ ಸಮುದಾಯದ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ಶ್ರೀನಿವಾಸ್‌ಪ್ರಸಾದ್ ಅವರ ರಾಜಕೀಯ ಅವಕಾಶಗಳಿಗೆ ತೊಡಕುಂಟುಮಾಡಿದ್ದರು. ಪ್ರಸ್ತುತ ಬಲಗೈ ಸಮುದಾ ಜನರ ಉದ್ಯೋಗದ ಹಕ್ಕನ್ನು ಕಿತ್ತುಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ಪ್ರತಿಭಟನೆಯಲ್ಲಿ ಮುಖಂಡ ಮಂಜುಕೋಡಿಉಗನೆ, ಮಹೇಶ್ ಕುದರ್, ಕಾಗಲವಾಡಿ ಶಿವರಾಜು, ಭಾನುಪ್ರಕಾಶ್, ರವಿಕುಮಾರ್, ವಾಸು ಹೊಂಡರಬಾಳು, ಮೂಡ್ನಕೂಡು ಪ್ರಕಾಶ್, ನವೀನ್ ಮೌರ್ಯ, ಸುಭಾಷ್ ಮಾಡ್ರಳ್ಳಿ, ಬಾಬು ರಾಮಸಮುದ್ರ, ಪರ್ವತ್‌ರಾಜು, ರಾಜೇಂದ್ರ, ಕೊಳ್ಳೇಗಾಲದ ಮುಳ್ಳೂರು ಶಿವಮಲ್ಲು, ಆನಂದ್, ಮಾಳಿಗೆ, ಸಿದ್ದಪ್ಪಾಜಿ, ಯಳಂದೂರು ಸಿದ್ದರಾಜು, ನಟರಾಜು, ಹನೂರು ಸಂಪತ್ತು, ಪಾಳ್ಯ ಬಸವರಾಜು ಹಾಗೂ ಇತರರು ಭಾಗವಹಿಸಿದ್ದರು.
ಸಿಎಂ, ಸಚಿವರ ವಿರುದ್ಧ ಆಕ್ರೋಶ:
ಪ್ರತಿಭಟನೆಯುದ್ದಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಗೃಹಸಚಿವ ಪರಮೇಶ್ವರ್ ಹಾಗೂ ಪ್ರಿಯಾಂಕ ಖರ್ಗೆ ವಿರುದ್ಧ ೋಷಣೆಯನ್ನು ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವರ ರಾಜೀನಾಮೆಗೂ ಒತ್ತಾಯಿಸಿದರು. ಹಲವಾರು ಮುಖಂಡರು ಪ್ರತಿಭಟನೆ ಉದ್ದೇಶಿಸಿ ಮಾತನಾಡುವ ವೇಳೆಯಲ್ಲೂ ಬಲಗೈ ಸಮುದಾಯದ ಸಚಿವರ ನಡೆಯನ್ನು ಖಂಡಿಸಿದರು. ಮುಂದಿನ ದಿನಗಳಲ್ಲೂ ನಿರಂತರ ಪ್ರತಿಭಟನೆಯನ್ನು ನಡೆಸುವಂತೆ ಸಮುದಾಯದ ಜನರಲ್ಲಿ ಕರೆ ನೀಡಿದರು.
ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ಸಾಗುತ್ತಿದ್ದ ವೇಳೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಚಿತ್ರವನ್ನು ವಿರೂಪಗೊಳಿಸಲು ಪ್ರತಿಭಟನಾಕಾರರು ಮುಂದಾದರು. ಈ ವೇಳೆ ಡಿವೈಎಸ್ಪಿ ಸ್ನೇಹರಾಜ್ ಮತ್ತು ಪೊಲೀಸ್ ಸಿಬ್ಬಂದಿಗಳು ಪ್ರತಿಭಟನಾಕಾರರಿಂದ ಸಿಎಂ ಭಾವಚಿತ್ರಗಳನ್ನು ವಶಪಡಿಸಿಕೊಂಡರು. ಇದರಿಂದ ಹೋರಾಟಗಾರರು ಪೊಲೀಸರ ವಿರುದ್ಧ ಕೆಲಕಾಲ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಪ್ರತಿಭಟನಾ ಮೆರವಣಿಗೆ ಮುಂದುವರಿಸಿದರು. ಬಲಗೈ ಸಮುದಾಯದ ಪ್ರತಿಭಟನೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಯಿತು.