ಒಳ ಮೀಸಲಾತಿ ಅನ್ಯಾಯವನ್ನು ಖಂಡಿಸಿ ಶುಕ್ರವಾರ ಜ್ಞಾನಸೂರ್ಯ ಡಾ.ಬಿ.ಆರ್.ಅಂಬೇಡ್ಕರ್ ಸಂಘ, ಕೊತ್ತನೂರು ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳು ಕೊಳ್ಳೇಗಾಲದಲ್ಲಿ ಒಳ ಮೀಸಲಾತಿ ಅನ್ಯಾಯವನ್ನು ಖಂಡಿಸಿ ಪ್ರತಿಭಟನಾ ರ‌್ಯಾಲಿ ನಡೆಸಿದರು. 
ಚಾಮರಾಜನಗರ

ಒಳಮೀಸಲಾತಿ ಅನ್ಯಾಯ ಖಂಡಿಸಿ ಪ್ರತಿಭಟನೆ

ಕಿರಣ್ ಮಾದರಹಳ್ಳಿ

ಪ್ರಮುಖ ಮುಖ್ಯಾಂಶಗಳು

  • ವರದಿ ಮತ್ತೆ ಪರಿಷ್ಕರಿಸಲು ಒತ್ತಾಯ
  • ಉಪವಿಭಾಗಾಧಿಕಾರಿಗೆ ಮನವಿ
ಕೊಳ್ಳೇಗಾಲ: ಒಳ ಮೀಸಲಾತಿ ಅನ್ಯಾಯವನ್ನು ಖಂಡಿಸಿ ಶುಕ್ರವಾರ ಜ್ಞಾನಸೂರ್ಯ ಡಾ.ಬಿ.ಆರ್.ಅಂಬೇಡ್ಕರ್ ಸಂಘ, ಕೊತ್ತನೂರು ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಪಟ್ಟಣದಲ್ಲಿ ಒಳ ಮೀಸಲಾತಿ ಅನ್ಯಾಯವನ್ನು ಖಂಡಿಸಿ ಪ್ರತಿಭಟನಾ ರ‌್ಯಾಲಿ ನಡೆಯಿತು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಂಭಾಗ ಸಮಾವೇಶಗೊಂಡ ನೂರಾರು ಪ್ರತಿಭಟನಾಕಾರರು ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಒಳ ಮೀಸಲಾತಿ ವರದಿ ವಿರುದ್ಧ ದಿಕ್ಕಾರ ಕೂಗಿ ತಾಲೂಕು ಕಚೇರಿ ಮುಂಭಾಗ ಸಮಾವೇಶಗೊಂಡರು.
ಈ ವೇಳೆ ಮುಖಂಡ ಮುಳ್ಳೂರು ಶಿವಮಲ್ಲು ಮಾತನಾಡಿ, ಒಳಮೀಸಲಾತಿ ಅನ್ಯಾಯ ಖಂಡಿಸಿ ರಾಜ್ಯದೆಲ್ಲೆಡೆ ಬಲಗೈ ಸಮುದಾಯ ಪ್ರತಭಟಿಸುತ್ತಿದೆ. ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿರಂತರವಾಗಲಿದೆ ಎಂದರು. ಮುಖಂಡ ತೆಳ್ಳನೂರು ಸೋಮಣ್ಣ ಮಾತನಾಡಿ, ಆಳುವ ಯಾವುದೇ ರಾಜಕೀಯ ಸರ್ಕಾರ ಅಧಿಕಾರಕ್ಕೆ ಬಂದರೂ ಬಲಗೈ ಸಮುದಾಯದ ಏಳಿಗೆ ಸಹಿಸುತ್ತಿಲ್ಲ. ಅಂತೆಯೇ, ಪರಿಶಿಷ್ಟ ಜಾತಿಯ 101 ಜಾತಿಗಳಿಗೆ ಅವೈಜ್ಞಾನಿಕವಾದ ಒಳ ಮೀಸಲಾತಿಯನ್ನು ಜಾರಿ ಮಾಡಲು ಹೊರಟಿದ್ದು ಇದರಿಂದ ಬಲಗೈ ಸಮುದಾಯಕ್ಕೆ ಅನ್ಯಾಯವಾಗಿದೆ. ಹಾಗಾಗಿ ಒಳ ಮೀಸಲಾತಿ ವರದಿಯನ್ನು ಮತ್ತೆ ಪರಿಷ್ಕರಣೆಗೊಳಪಡಿಸಬೇಕು. ಅಲ್ಲಿಯವರೆಗೆ ಶೈಕ್ಷಣಿಕ ಕ್ಷೇತ್ರ ಮತ್ತು ಉದ್ಯೋಗಕ್ಕೆ ಅನ್ವಯಿಸುತ್ತಿರುವ ಒಳ ಮೀಸಲಾತಿ ಕಾರ್ಯ ಚಟುವಟಿಕೆಗೆ ತಡೆಯಾಜ್ಞೆ ನೀಡಬೇಕು. ಹೊಸ ಜಾತಿ ಪ್ರಮಾಣ ಪತ್ರವನ್ನು ವಿತರಣೆ ಮಾಡುವುದನ್ನು ನಿಲ್ಲಿಸಿ ಹಳೆಯ ಜಾತಿ ಪ್ರಮಾಣವನ್ನೇ ಮುಂದುವರಿಸಬೇಕು ಎಂದು ಆಗ್ರಹಿಸಿದರು. ಬಳಿಕ ಪ್ರತಿಭಟನಾ ಸ್ಥಳಕ್ಕೆ ಆಗಮಸಿದ ಉಪವಿಭಾಗಾಧಿಕಾರಿ ದಿನೇಶ್‌ಕುಮಾರ್ ಮೀನಾ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಎಚ್.ಕೆ.ಟ್ರಸ್ಟ್ ಕಾರ್ಯದರ್ಶಿ ಪ್ರೇಮಲತಾ ಕೃಷ್ಣಸ್ವಾಮಿ, ಡಿಎಸ್‌ಎಸ್ ರಾಜ್ಯ ಸಂಘಟನಾ ಸಂಚಾಲಕ ದೊಡ್ಡಿಂದುವಾಡಿ ಸಿದ್ದರಾಜು, ಮುಖಂಡರಾದ ಮುಳ್ಳೂರು ಶಿವಮಲ್ಲು, ಪುಟ್ಟ, ವೆಂಕಟರಂಗಯ್ಯ, ನಟರಾಜು, ನಿಂಗರಾಜು ಸೋಮಣ್ಣ, ದೇವರಾಜು, ಶಿವರಾಜು, ಚಿಕ್ಕದೊಡ್ಡಯ್ಯ, ಮಹಿಳೆ ಸಂಘಟನೆ ಸಿದ್ದಮ್ಮ, ಮಹದೇವಮ್ಮ, ಜಾನಕಮ್ಮ, ನಿಂಗರಾಜಮ್ಮ, ರಾಜಮಣ್ಣಿ ಸುನೀತಾ, ಶಾಂತಿ ಮತ್ತಿತರರಿದ್ದರು.