ಇ-ಆಸ್ತಿ ವಿತರಣೆ ವಿಳಂಬ ಧೋರಣೆ ಖಂಡಿಸಿ ನಗರಸಭೆ ಕಚೇರಿ ಮುಂಭಾಗ ನಗರಸಭೆ ಮಾಜಿ ನಾಮ ನಿರ್ದೇಶಿತ ಸದಸ್ಯ ಮಧುಚಂದ್ರ ಗುರುವಾರ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಸ್ಥಳಕ್ಕೆ ನಗರಸಭೆ ಪೌರಾಯುಕ್ತೆ ರುದ್ರಮ್ಮ ಶರಣಯ್ಯ ಅವರು ಭೇಟಿ ನೀಡಿ ಸಮಸ್ಯೆ ಆಲಿಸಿದರು. 
ಚಾಮರಾಜನಗರ

ಇ-ಆಸ್ತಿ ವಿಳಂಬ ಖಂಡಿಸಿ ಪ್ರತಿಭಟನೆ

ಕಿರಣ್ ಮಾದರಹಳ್ಳಿ

ಪ್ರಮುಖ ಮುಖ್ಯಾಂಶಗಳು

  • ನಗರಸಭೆ ಕಚೇರಿ ಮುಂಭಾಗ ಆಮರಣಾಂತರ ಉಪವಾಸ ಸತ್ಯಾಗ್ರಹ
  • ನಗರಸಭೆ ಮಾಜಿ ನಾಮನಿರ್ದೇಶಿತ ಸದಸ್ಯ ಮಧುಚಂದ್ರ
ಕೊಳ್ಳೇಗಾಲ: ಇ-ಆಸ್ತಿ (ನಮೂನೆ-3) ವಿತರಣೆ ವಿಳಂಬ ಧೋರಣೆ ಖಂಡಿಸಿ ನಗರಸಭೆ ಕಚೇರಿ ಮುಂಭಾಗ ರೈತ ಮುಖಂಡರ ಬೆಂಬಲದೊಂದಿಗೆ ನಗರಸಭೆ ಮಾಜಿ ನಾಮನಿರ್ದೇಶಿತ ಸದಸ್ಯ ಮಧುಚಂದ್ರ ಗುರುವಾರ ಆಮರಣಾಂತರ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಈ ವೇಳೆ ಮಧುಚಂದ್ರ ಮಾತನಾಡಿ, ಕೊಳ್ಳೇಗಾಲ ನಗರಸಭೆಯಲ್ಲಿ ಸಾರ್ವಜನಿಕರಿಗೆ ಇ-ಆಸ್ತಿ ಸಿಗದೆ ತೊಂದರೆಯಾಗಿದೆ. ಇ-ಸ್ವತ್ತು ನವೀಕರಣ, ಉಪ ನೋಂದಣಾಧಿಕಾರಿ ಕಚೇರಿಯಿಂದ ನೋಂದಣಿಯಾದ ಕ್ರಯ ಪತ್ರ, ವಿಭಾಗ ಪತ್ರ ಹಾಗೂ ದಾನ ಪತ್ರಗಳು ಕೋಸ್ಟಕದಲ್ಲಿ ಬಂದಿದರು ನೋಟಿಸ್ ಮಾಡದೆ ಸಾರ್ವಜನಿಕರಿಗೆ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಹೋರಾಟ ನಡೆದಾಗ ಮಾತ್ರ ಅಧಿಕಾರಿಗಳು ಕೇವಲ ಭರವಸೆ ನೀಡುತ್ತಾರೆ. ಆದರೆ, ಸಕಾಲಕ್ಕೆ ಇ-ಆಸ್ತಿಯನ್ನು ಜನರಿಗೆ ನೀಡುತ್ತಿಲ್ಲ. ಇದರಿಂದ ನಗರಸಭೆ ವ್ಯಾಪ್ತಿಯ ಜನರಿಗೆ ತೊಂದರೆಯಾಗುತ್ತಿದೆ. ಹಾಗಾಗಿ, ಜಿಲ್ಲಾಧಿಕಾರಿ ಶ್ರೀರೂಪಾ ಅವರು ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಬೇಕು. ಅಲ್ಲಿಯವರೆವಿಗೂ ಉಪವಾಸ ಸತ್ಯಾಗ್ರಹ ಮುಂದುವರೆಯುವುದಾಗಿ ತಿಳಿಸಿದರು.
ಇದಕ್ಕೂ ಮೊದಲು ಪ್ರತಿಭಟನಾ ಸ್ಥಳಕ್ಕೆ ನಗರಸಭೆ ಪೌರಾಯುಕ್ತೆ ರುದ್ರಮ್ಮ ಶರಣಯ್ಯ ಭೇಟಿ ನೀಡಿ ಹೋರಾಟಗಾರರನ್ನು ಮನವೊಲಿಸಲು ಮುಂದಾದರು. ಇ-ಆಸ್ತಿಗಳನ್ನು ಸಾರ್ವಜನಿಕರಿಗೆ ನೀಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ನಿಯಮಾನುಸಾರವಾಗಿ ವಿತರಿಸುವ ಭರವಸೆ ನೀಡಿ ಉಪವಾಸ ಸತ್ಯಾಗ್ರಹ ಕೈಬಿಡುವಂತೆ ಮನವಿ ಮಾಡಿದರು. ಪ್ರತಿಭಟನೆಯಲ್ಲಿ ರೈತ ಮುಖಂಡ ರಾಮಕೃಷ್ಣ, ಸೋಮಣ್ಣ, ನಗರಸಭೆ ಮಾಜಿ ಸದಸ್ಯ ಕೆ.ಕೆ.ಮೂರ್ತಿ, ಚಂದು, ಜೀ ಬಜಾರ್ ಮಹದೇವಪ್ಪ, ವಿಶ್ವ, ಲೋಕೇಶ್, ಪ್ರಭು, ರವಿ, ರೇಚಣ್ಣ, ಶಂಕರ್ ಇತರರು ಇದ್ದರು.