ಗಂಗನದೊಡ್ಡಿಯ ಜಮೀನಿನಲ್ಲಿ ಕಬ್ಬು ಕಟಾವು ಕೆಲಸ ಮಾಡುತ್ತಿದ್ದ ಹೊರ ರಾಜ್ಯದ ಕೂಲಿ ಕಾರ್ಮಿಕರು.
ಹನೂರು: ಮೇಸ್ತ್ರಿಯೊಬ್ಬನ ಅಮಾನವೀಯತೆ ವರ್ತನೆಗೆ ಒಳಗಾಗಿ ಸಂಕಷ್ಟ ಅನುಭವಿಸುತ್ತಿದ್ದ ಹೊರ ರಾಜ್ಯದ ಕೂಲಿ ಕಾರ್ಮಿಕರನ್ನು ರೈತ ಸಂಘದ ಪದಾಧಿಕಾರಿಗಳು ಮಂಗಳವಾರ ರಕ್ಷಿಸಿದ್ದಾರೆ.
ಸ್ಥಳೀಯರ ಮಾಹಿತಿ ಮೇರೆಗೆ ರೈತ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಮ್ಜಾದ್‌ಖಾನ್ ಹಾಗೂ ಕೆಲ ರೈತರು ಮಂಗಳವಾರ ಗಂಗನದೊಡ್ಡಿಯ ಗುಡ್ಡದ ತಪ್ಪಲಿನ ಜಮೀನಿನಲ್ಲಿ ಕಬ್ಬು ಕಟಾವು ಮಾಡುತ್ತಿದ್ದ ಸ್ಥಳಕ್ಕೆ ತೆರಳಿ ಕೂಲಿ ಕಾರ್ಮಿಕರಿಂದ ಮಾಹಿತಿ ಪಡೆದರು. ಈ ವೇಳೆ ಮೇಸ್ತ್ರಿ ನಡೆಸುತ್ತಿದ್ದ ಅಮಾನವೀಯ ಕೃತ್ಯ ಬೆಳಕಿಗೆ ಬಂದಿದೆ.
ತಾಲೂಕಿನ ಸೂಳೇರಿಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಗನದೊಡ್ಡಿಯ ಜಮೀನುಗಳಲ್ಲಿ ಅಂತಾರಾಜ್ಯದ 22 ಜನ ಕೂಲಿ ಕಾರ್ಮಿಕರು ಕಬ್ಬು ಕಟಾವಿನಲ್ಲಿ ನಿರತರಾಗಿದ್ದರು. ಪುದುಚೆರಿಯ ಮೇಸ್ತ್ರಿ ಷಣ್ಮುಗಂ ಎಂಬಾತ ತಮಿಳುನಾಡು, ಬಿಹಾರ ಹಾಗೂ ಆಂಧ್ರಪ್ರದೇಶದಿಂದ ಕಾರ್ಮಿಕರನ್ನು ಕರೆತಂದು ಈ ಭಾಗದ ಜಮೀನುಗಳಲ್ಲಿ ವರ್ಷದಿಂದ ಕಬ್ಬು ಕಟಾವು ಕೆಲಸ ಮಾಡಿಸುತ್ತಿದ್ದ. ಸರಿಯಾಗಿ ಊಟ, ಕೂಲಿ ಹಣ ಕೊಡುತ್ತಿರಲಿಲ್ಲ. ಅನಾರೋಗ್ಯ ಸಂದರ್ಭ ಚಿಕಿತ್ಸೆಗೂ ಹಣ ನೀಡುತ್ತಿರಲಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಥಳಿಸತ್ತಿದ್ದ. ಊರಿಗೆ ತೆರಳಲು ಪ್ರಯತ್ನಿಸಿದರೆ ಬಂಧನದಲ್ಲಿಟ್ಟು ಬೆದರಿಕೆ ಹಾಕಿ ಹಿಂಸೆ ನೀಡುತ್ತಿದ್ದ ಎಂದು ಕಾರ್ಮಿಕರು ರೈತ ಸಂಘದ ಪದಾಧಿಕಾರಿಗಳ ಎದುರು ಅಳಲು ತೋಡಿಕೊಂಡಿದ್ದಾರೆ. ಅಲ್ಲದೆ, ತಮ್ಮ ರಾಜ್ಯಗಳಿಗೆ ಕಳುಹಿಸಿಕೊಡುವಂತೆಯೂ ಮನವಿ ಮಾಡಿದ್ದಾರೆ.
ಮೇಸ್ತ್ರಿ ವರ್ತನೆಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅಮ್ಜಾದ್ ಖಾನ್ ಹಾಗೂ ರೈತರು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಕೂಲಿ ಕಾರ್ಮಿಕರಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ಕೂಲಿ ಹಣ ಕೊಡಿಸಿ, ವೈದ್ಯಕೀಯ ಪರೀಕ್ಷೆ ನಡೆಸಿ ಸ್ವಂತ ರಾಜ್ಯಕ್ಕೆ ಕಳುಹಿಸಿಕೊಡಬೇಕು ಎಂದು ಒತ್ತಾಯಿಸಿದರು.
ಮಾಹಿತಿ ತಿಳಿದ ಸಬ್ ಇನ್‌ಸ್ಪೆಕ್ಟರ್ ಮಂಜುನಾಥ್ ಪ್ರಸಾದ್, ಆರ್‌ಐ ಶಿವಕುಮಾರ್ ಕೂಲಿ ಕಾರ್ಮಿಕರಿಂದ ಮಾಹಿತಿ ಪಡೆದು ಮುಂದಿನ ಕ್ರಮಕೈಗೊಂಡಿದ್ದಾರೆ.
ಕೂಲಿ ಕಾರ್ಮಿಕರು ಕಬ್ಬು ಕಟಾವು ಮಾಡುತ್ತಿದ್ದ ಗಂಗನದೊಡ್ಡಿಯ ಜಮೀನಿಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದೇವೆ. ರೈತ ಸಂಘದವರು ಕೂಲಿ ಕಾರ್ಮಿಕರಿಗೆ ಕೂಲಿ ಹಣ ಕೊಡಿಸಲು ಮೇಸ್ತ್ರಿಯವರೊಂದಿಗೆ ಮಾತುಕತೆ ನಡೆಸಿದ್ದಾರೆ. ಸದ್ಯ ಯಾವುದೇ ಸಮಸ್ಯೆ ಇಲ್ಲ.
ಮಂಜುನಾಥ್ ಪ್ರಸಾದ್, ಸಬ್ ಇನ್‌ಸ್ಪೆಕ್ಟರ್