ಅಜ್ಜೀಪುರ ಗ್ರಾಮದ ಇಟ್ಟಿಗೆ ಕಾರ್ಖಾನೆಯೊಂದಕ್ಕೆ ಅಧಿಕಾರಿಗಳು ತೆರಳಿ ಪರಿಶಿಲನೆ ನಡೆಸಿದರು. ರಾಮಚಂದ್ರ, ಕೆ.ಎನ್ ಚೈತ್ರಾ, ಪ್ರಸಾದ್ ಇತರರಿದ್ದರು.
- child labor
- brick factories
ಹನೂರು: ತಾಲೂಕಿನ ಅಜ್ಜೀಪುರ ಗ್ರಾಮದ ಇಟ್ಟಿಗೆ ಕಾರ್ಖಾನೆಯಲ್ಲಿ ದುಡಿಮೆಯಲ್ಲಿ ತೊಡಗಿದ್ದ ಬಾಲ ಕಾರ್ಮಿನೊಬ್ಬನನ್ನು ಸೋಮವಾರ ಕಾರ್ಮಿಕ ಇಲಾಖೆಯ ಅಧಿಕಾರಿಗಳು ರಕ್ಷಿಸಿದ್ದು, ಮಾಲೀಕನ ವಿರುದ್ಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಅಜ್ಜೀಪುರ, ನಾಗಣ್ಣ ನಗರ ಹಾಗೂ ಈ ಭಾಗದ ಇನ್ನಿತರೆ ಕಡೆಗಳಲ್ಲಿ ಇಟ್ಟಿಗೆ ಕಾರ್ಖಾನೆಗಳಿದ್ದು, ಕೆಲವು ಕಡೆಗಳಲ್ಲಿ ಬಾಲ ಕಾರ್ಮಿಕರನ್ನು ದುಡಿಮೆಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ಇತ್ತು. ಈ ಹಿನ್ನೆಲೆ ಸೋಮವಾರ ಜಿಲ್ಲಾ ಬಾಲ ಕಾರ್ಮಿಕ ಹಾಗೂ ಯೋಜನೆ ಸೊಸೈಟಿ ಅಧಿಕಾರಿಗಳು ಜಂಟಿಯಾಗಿ ಇಟ್ಟಿಗೆ ಕಾರ್ಖಾನೆಗಳಿಗೆ ತೆರಳಿ ಪರಿಶೀಲಿಸಿದರು. ಈ ವೇಳೆ ಅಜ್ಜೀಪುರ ಗ್ರಾಮದ ಮುಖ್ಯ ರಸ್ತೆ ಬದಿಯಲ್ಲಿರುವ ಸನ್ ಬ್ರಿಕ್ಸ್ ಇಂಡಸ್ಟ್ರಿಯಲ್ಲಿ ತಮಿಳುನಾಡು ಮೂಲದ 15 ವರ್ಷದ ಬಾಲಕನೊಬ್ಬ ದುಡಿಮೆಯಲ್ಲಿ ತೊಡಗಿದ್ದು ಕಂಡು ಬಂತು. ಬಾಲಕನನ್ನು ವಿಚಾರಿಸಿದಾಗ 12 ಗಂಟೆಗಳ ಕಾಲ ದುಡಿಯುತ್ತಿದ್ದು, ದಿನಕ್ಕೆ 650 ರೂ. ಕೂಲಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾನೆ. ಬಳಿಕ ತಹಸೀಲ್ದಾರ್ ಕೆ.ಎನ್ ಚೈತ್ರಾ ಅವರ ನೇತೃತ್ವದಲ್ಲಿ ಬಾಲಕನನ್ನು ವಶಕ್ಕೆ ಪಡೆದ ಇಲಾಖೆಯ ಅಧಿಕಾರಿಗಳು ಜಿಲ್ಲಾ ಬಾಲ ಮಂದಿರದಲ್ಲಿ ಇರಿಸಿದ್ದಾರೆ. ಈ ಸಂಬಂಧ ಇಟ್ಟಿಗೆ ಕಾರ್ಖಾನೆ ಮಾಲೀಕ ಅಜ್ಜೀಪುರದ ಪಳನಿಸ್ವಾಮಿ ಎಂಬುವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಕಾರ್ಮಿಕ ಇಲಾಖೆಯ ತಾಲೂಕು ನಿರೀಕ್ಷಕ ಪ್ರಸಾದ್ ಅವರು ರಾಮಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಹಾಗೆಯೇ ಇಟ್ಟಿಗೆ ಕಾರ್ಖಾನೆಯಲ್ಲಿ ದುಡಿಕೆಯಲ್ಲಿದ್ದ ಪಶ್ಚಿಮ ಬಂಗಾಳದ ಮತ್ತೊಬ್ಬ ಬಾಲಕನನ್ನು ವಶಕ್ಕೆ ಪಡೆದಿರುವ ಕಾರ್ಮಿಕ ಇಲಾಖೆಯ ಅಧಿಕಾರಿಗಳು ವಯಸ್ಸಿನ ದೃಢೀಕರಣದ ಅಗತ್ಯ ದಾಖಲೆಯ ಪರಿಶೀಲನೆಯಲ್ಲಿದ್ದಾರೆ.