ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಸಮೀಪ ಜಮೀನಿನಲ್ಲಿದ್ದ ತಮಿಳುನಾಡು ಮೂಲದ ಜೀತಕಾರ್ಮಿಕರನ್ನು ಜಿಲ್ಲಾಡಳಿತ ರಕ್ಷಿಸಿರುವುದು. 
ಚಾಮರಾಜನಗರ

ತಮಿಳುನಾಡು ಮೂಲದ ಕೃಷಿ ಕಾರ್ಮಿಕರ ರಕ್ಷಣೆ

ಪ್ರಮುಖ ಮುಖ್ಯಾಂಶಗಳು

  • ತೆರಕಣಾಂಬಿ ಹೋಬಳಿ
  • ಕೃಷಿ ಕಾರ್ಮಿಕರಾಗಿ ದುಡಿಯುತ್ತಿದ್ದ
  • ತಮಿಳುನಾಡು ಮೂಲದ ಮೂವರಿಗೆ
  • ಜಿಲ್ಲಾಡಳಿತ ಕಾರ್ಮಿಕರನ್ನು ರಕ್ಷಿಸಿ
ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ಹೋಬಳಿಯ ತೋಟದ ಮನೆಯೊಂದರಲ್ಲಿ ಕೃಷಿ ಕಾರ್ಮಿಕರಾಗಿ ದುಡಿಯುತ್ತಿದ್ದ ತಮಿಳುನಾಡು ಮೂಲದ ಮೂವರಿಗೆ ನಿಗದಿತ ಸಮಯಕ್ಕೆ ಹಣ ನೀಡದೆ ಹಾಗೂ ಸ್ವಗ್ರಾಮಕ್ಕೆ ಕಳುಹಿಸದೆ ಸತಾಯಿಸಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಮಧ್ಯಪ್ರವೇಶಿಸಿದ ಜಿಲ್ಲಾಡಳಿತ ಕಾರ್ಮಿಕರನ್ನು ರಕ್ಷಿಸಿ ಸ್ವಂತ ಸ್ಥಳಕ್ಕೆ ಕಳುಹಿಸಿಕೊಟ್ಟಿದೆ.
ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಮರವಾಡಿ ಗ್ರಾಮದ ಮಾದೇಶ ಮತ್ತು ಪತ್ನಿ ಲಕ್ಷ್ಮೀ, ಮಗಳು ಕಾವೇರಿಯಮ್ಮಾಳ್ ತೆರಕಣಾಂಬಿ ಹೋಬಳಿಯ ವೆಂಕಟೇಶ್ ಅವರ ತೋಟದ ಮನೆಯಲ್ಲಿ 11 ತಿಂಗಳಿಂದ ಕೂಲಿ ಕೆಲಸ ಮಾಡುತ್ತಿದ್ದರು. ತೋಟದ ಮಾಲೀಕ ವೆಂಕಟೇಶ್ ನಿಗದಿತ ಸಮಯಕ್ಕೆ ದುಡಿದ ಹಣ ನೀಡದೆ ಸತಾಯಿಸುವ ಜತೆಗೆ ಸ್ವಗ್ರಾಮಕ್ಕೆ ಕಳುಹಿಸದ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ನಿರ್ದೇಶನದಂತೆ ನ.6ರಂದು ಗುಂಡ್ಲುಪೇಟೆಯ ತಹಶೀಲ್ದಾರ್ ಎಂ.ಎಸ್.ತನ್ಮಯಿ, ತೆರಕಣಾಂಬಿ ನಾಡಕಚೇರಿಯ ಕಂದಾಯ ಅಧಿಕಾರಿ ನಾಗೇಂದ್ರ, ತೆರಕಣಾಂಬಿ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಕೆ.ಎಂ.ಮಹೇಶ್ ತೋಟದ ಮನೆಗೆ ಭೇಟಿ ನೀಡಿ ಕೃಷಿ ಕಾರ್ಮಿಕರನ್ನು ರಕ್ಷಿಸಿ ಜೀತ ವಿಮುಕ್ತಿ ಕಾಯ್ದೆಯಡಿ ಉಪವಿಭಾಗಾಧಿಕಾರಿ ಬಳಿ ಹಾಜರುಪಡಿಸಿ ವಿಚಾರಣೆ ನಡೆಸಿದರು.
ಈ ಮೂವರು ಜೀತ ಕೃಷಿ ಕಾರ್ಮಿಕರು ಎಂದು ಪರಿಗಣಿಸಿ ಬಿಡುಗಡೆ ಪತ್ರ ನೀಡಿ ಜಮೀನಿನ ಮಾಲೀಕರ ವಿರುದ್ಧ ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಯಿತು. ಕೃಷಿ ಕಾರ್ಮಿಕರನ್ನು ಧರ್ಮಪುರಿ ಜಿಲ್ಲಾಡಳಿತಕ್ಕೆ ಸೂಕ್ತ ಪೊಲೀಸ್ ಬಂದೋ ಬಸ್ತ್‌ನೊಂದಿಗೆ ಕಳುಹಿಸಲಾಯಿತು.