ಕೊಳ್ಳೇಗಾಲ ಪಟ್ಟಣದ ಗುರುಭವನದಲ್ಲಿ ಭಾನುವಾರ ಶ್ರೀ ಮಹರ್ಷಿ ವಾಲ್ಮೀಕಿ ಪ್ರತಿಷ್ಠಾನ ಕೊಳ್ಳೇಗಾಲ ವತಿಯಿಂದ ಆಯೋಜಿಸಿದ್ದ ಸಂವಿಧಾನ ಜಾಗೃತಿ ವಿಚಾರ ಸಂಕಿರಣ ಕಾರ್ಯಕ್ರಮ ಹಾಗೂ ಕಾಯಕಯೋಗಿ ವಾಲ್ಮೀಕಿ ಸೇವಾರತ್ನ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಬೆಂಗಳೂರು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಡಾ.ಕೆ.ಆರ್.ರಾಜಕುಮಾರ್ ಚಾಲನೆ ನೀಡಿದರು. ಕೆ.ಎಸ್.ಮೃತ್ಯುಂಜಯ, ರಾಮಚಂದ್ರ, ಎಚ್.ಎಸ್.ಮಂಜುನಾಥ್, ಪ್ರೊ.ನಂಜುಂಡಸ್ವಾಮಿ ಹರದನಹಳ್ಳಿ, ಲೋಕೇಶ್, ಭೋಗ ನಾಯಕ ಇತರರು ಇದ್ದರು. 
ಚಾಮರಾಜನಗರ

ಸಂವಿಧಾನದ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ

ಪ್ರಮುಖ ಮುಖ್ಯಾಂಶಗಳು

  • ಕೆ.ಎಸ್.ಮೃತ್ಯುಂಜಯ ಹೇಳಿಕೆ
  • ವಾಲ್ಮೀಕಿ ಸೇವಾರತ್ನ ಪ್ರಶಸ್ತಿ ಪ್ರದಾನ
ಕೊಳ್ಳೇಗಾಲ: ಸಂವಿಧಾನವನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಸಮಾಜ ಕಲ್ಯಾಣ ಇಲಾಖೆಯ ನಿವೃತ್ತ ಅಧಿಕಾರಿ ಕೆ.ಎಸ್.ಮೃತ್ಯುಂಜಯ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಭಾನುವಾರ ಶ್ರೀ ಮಹರ್ಷಿ ವಾಲ್ಮೀಕಿ ಪ್ರತಿಷ್ಠಾನ ಕೊಳ್ಳೇಗಾಲ ವತಿಯಿಂದ ಆಯೋಜಿಸಿದ್ದ ಸಂವಿಧಾನ ಜಾಗೃತಿ ವಿಚಾರ ಸಂಕಿರಣ ಕಾರ್ಯಕ್ರಮ ಹಾಗೂ ಕಾಯಕಯೋಗಿ ವಾಲ್ಮೀಕಿ ಸೇವಾರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ಎಲ್ಲ ಧರ್ಮ, ಜಾತಿಗಳು ಕೂಡಿ ಬಾಳುವ ವ್ಯವಸ್ಥೆ ಇರುವ ಸಂವಿಧಾನವನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶಕ್ಕೆ ನೀಡಿದ್ದಾರೆ. ಸಂವಿಧಾನ ಆಶಯಗಳು ನಾವೆಲ್ಲರೂ ತಿಳಿಯಬೇಕೆಂದರು.
ಸಂವಿಧಾನದಲ್ಲಿ ಪರಿಶಿಷ್ಟ ಪಂಗಡಗಳ ಸಮುದಾಯ ಜನರಿಗಿರುವ ಶಿಕ್ಷಣ, ಉದ್ಯೋಗ, ರಾಜಕೀಯ ಪ್ರಾತಿನಿಧ್ಯ ಇನ್ನಿತರ ಅವಕಾಶಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.
ಬೆಂಗಳೂರು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಡಾ.ಕೆ.ಆರ್.ರಾಜಕುಮಾರ್ ಮಾತನಾಡಿ, ಕಾಡಂಚಿನಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಪಂಗಡಕ್ಕೆ ಸೇರಿದ ಜನರು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿ ಹಿಂದುಳಿದಿರುವುದನ್ನು ನೋಡಬಹುದು. ಇವರೆಲ್ಲರನ್ನು ಮುಖ್ಯವಾಹಿನಿಗೆ ತರಬೇಕಿದೆ. ಹಾಗಾಗಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಈ ನಿಟ್ಟಿನಲ್ಲಿ ಇಲಾಖೆ ಶ್ರಮಿಸುತ್ತಿದೆ. ವಿದ್ಯಾರ್ಥಿ ವೇತನ ಸೇರಿದಂತೆ ಇನ್ನಿತರ ಸೌಲಭ್ಯ ಸಹಿತವಾಗಿ ಶಿಕ್ಷಣ ನೀಡಲಾಗುತ್ತಿದೆ. ವಿದೇಶದಲ್ಲಿ ಉನ್ನತ ವ್ಯಾಸಾಂಗ ಮಾಡುವ ಮಕ್ಕಳಿಗೆ 1 ಕೋಟಿ ರೂ.ಸಹಾಯಧಾನ ನೀಡಲಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ಓದಿದ ವಿಶ್ವ ವಿದ್ಯಾಲಯದಲ್ಲಿ ನಮ್ಮ ಮಕ್ಕಳು ಓದುತ್ತಿದ್ದಾರೆ ಇದು ನಮ್ಮ ಹೆಮ್ಮೆಯಾಗಿದೆ ಎಂದರು.
ಇಲಾಖೆ ಸೌಲಭ್ಯವನ್ನು ಪ್ರತಿಯೊಬ್ಬರೂ ಸದುಪಯೋಗ ಪಡೆದುಕೊಳ್ಳಬೇಕು. ನಾಯಕ ಸಮಾಜದ ಬಾಂಧವರು ಇನ್ನೂ ಹೆಚ್ಚಿನ ರೀತಿಯಲ್ಲಿ ಸಂಘಟಿತರಾಗಬೇಕಿದೆ ಎಂದರು. ಈ ವೇಳೆ 30 ಜನರಿಗೆ ಕಾಯಕಯೋಗಿ ವಾಲ್ಮೀಕಿ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ನಾಯಕರ ಸಂಘದ ಅಧ್ಯಕ್ಷ ಎಂ.ರಾಮಚಂದ್ರ, ಕೊಳ್ಳೇಗಾಲ ತಾಲೂಕು ನಾಯಕರ ಸಂಘದ ಅಧ್ಯಕ್ಷ ಜಗದೀಶ್, ಬೆಂಗಳೂರು ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತ ಎಚ್.ಎಸ್.ಮಂಜುನಾಥ್, ಪಿರಿಯಾಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ನಂಜುಂಡಸ್ವಾಮಿ ಹರದನಹಳ್ಳಿ, ವಕೀಲ ಲೋಕೇಶ್, ಕೆಎಸ್‌ಆರ್‌ಟಿಸಿ ಕೊಳ್ಳೇಗಾಲ ಡಿಪೋ ಮ್ಯಾನೇಜರ್ ಭೋಗ ನಾಯಕ, ವಿಚಾರವಾದಿ ಮಹದೇವ ಕುಮಾರ್, ಶ್ರೀ ಮಹರ್ಷಿ ವಾಲ್ಮೀಕಿ ಪ್ರತಿಷ್ಠಾನ ಕೊಳ್ಳೇಗಾಲ ಕಾರ್ಯಕಾರಿ ಸಮಿತಿ ಸದಸ್ಯರಾದ ರಂಗನಾಥ್, ಶಾಂತರಾಜು, ಮುಖಂಡರಾದ ಚಿಕ್ಕಮಾದು, ಜಯಸುಂದರ್, ಪಾಳ್ಯ ಕೃಷ್ಣ ವಿವಿಧ ಗ್ರಾಮಗಳ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತಿತರಿದ್ದರು.