ಹನೂರಿನಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಎಂ.ಆರ್ ಮಂಜುನಾಥ್, ಪ್ರತಿಭಾ, ವೆಂಕಟೇಶ್ ಇತರರಿದ್ದರು.  
ಚಾಮರಾಜನಗರ

ಹನೂರು ತಾಲೂಕಿನಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎಂ.ಆರ್.ಮಂಜುನಾಥ್ ಮೆಚ್ಚುಗೆ
ಹನೂರು: ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಮೀಪದಲ್ಲೇ ಗುರುಭವನ ನಿರ್ಮಿಸಲು ಅಗತ್ಯ ಕ್ರಮವಹಿಸಲಾಗುವುದು ಎಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.
ಪಟ್ಟಣದ ಆರ್.ಎಸ್.ದೊಡ್ಡಿಯ ಶ್ರೀಗೌರಿ ಶಂಕರ ಕಲ್ಯಾಣ ಮಂಟಪದಲ್ಲಿ ಶನಿವಾರ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕ ವೃತ್ತಿ ಪವಿತ್ರವಾದುದು. ಮಕ್ಕಳು ಹಾಗೂ ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅಪಾರ. ಭೌಗೋಳಿಕವಾಗಿ ಹಾಗೂ ಗುಡ್ಡಗಾಡು ಪ್ರದೇಶದಿಂದ ಕೂಡಿರುವ ಹನೂರು ಭಾಗದಲ್ಲಿನ ಶಿಕ್ಷಕರು ಸಮಸ್ಯೆ ನಡುವೆಯೂ ಶ್ರಮವಹಿಸಿ ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವುದು ಮೆಚ್ಚುಗೆಯ ಸಂಗತಿ ಎಂದು ಹೇಳಿದರು.
ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕಿಸಿ ಕೊಡುವ ನಿಟ್ಟಿನಲ್ಲಿ ಹಾಗೂ ಶಿಕ್ಷಕರ ಕಾರ್ಯಭಾರವನ್ನು ಕಡಿಮೆಗೊಳಿಸುವ ಸಲುವಾಗಿ ಹನೂರು ಶೈಕ್ಷಣಿಕ ವಲಯದಲ್ಲಿ ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಗಳನ್ನು ಸಮೀಪದ ಶಾಲೆಗೆ ವಿಲೀನಗೊಳಿಸುವ ಯೋಜನೆಯೊಂದನ್ನು ರೂಪಿಸಲಾಗುತ್ತಿದ್ದು, ಕಾರ್ಯ ಪ್ರಗತಿಯಲ್ಲಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ. ಈಗಾಗಲೇ ಹನೂರಿನಲ್ಲಿ ಸಾರಿಗೆ ಬಸ್ ಡಿಪೋ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕ ಬಸ್‌ನ ಸಮಸ್ಯೆ ಪರಿಹಾರವಾಗಲಿದೆ.ಇನ್ನುಳಿದ ಬೇಡಿಕೆಯನ್ನು ಹಂತಹಂತವಾಗಿ ಈಡೇರಿಸಲಾಗುವುದು ಎಂದು ತಿಳಿಸಿದರು.
ಇದಕ್ಕೂ ಮೊದಲು ಶಿಕ್ಷಕರ ಸಂಘದಿಂದ ಗುಡ್ಡಗಾಡು ಪ್ರದೇಶದ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರಿಗೆ ಗಿರಿಭತ್ಯೆ, ಬಸ್ ಸೌಕರ್ಯ, ಗುರುಭವನ, ಆರೋಗ್ಯ ಸಂಜೀವಿನಿ ಹಾಗೂ ಅತಿಥಿ ಶಿಕ್ಷಕರಿಗೆ 20 ಸಾವಿರ ರೂ.ವೇತನ ನೀಡುವಂತೆ ಮನವಿ ಸಲ್ಲಿಸಲಾಯಿತು. ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಮೈಸೂರು ಡಯಟ್ ಉಪನ್ಯಾಸಕ ಎಸ್.ಪಿ ನಾಗರಾಜು, ಬಿಇಒ ಪ್ರತಿಭಾ, ಬಿಆರ್‌ಸಿ ವೆಂಕಟೇಶ್, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಶಿವಶಂಕರನಾಯಕ್, ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ. ಮಾದೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುರುಸ್ವಾಮಿ ಇತರರು ಇದ್ದರು.