ಚಾಮರಾಜನಗರ ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನೂತನ ಕೊಠಡಿಯನ್ನು ಉದ್ಘಾಟಿಸಿದರು. ಎಂ.ಸಿ.ಮಹದೇವಮ್ಮ, ಅಂಬಿಕಾ, ಮರಿಸ್ವಾಮಿ, ಎ.ಎಸ್.ಪ್ರದೀಪ್, ಹನುಮಶೆಟ್ಟಿ, ಸೋಮಣ್ಣೇಗೌಡ, ಮಹದೇವಯ್ಯ, ಶಶಿಕಲಾ ಇನ್ನಿತರರಿದ್ದರು.  
ಚಾಮರಾಜನಗರ

ಶಾಲೆಗಳಿಗೆ ಮೂಲಸೌಕರ್ಯ ಒದಗಿಸಲು ಆದ್ಯತೆ

ಎ.ಎಸ್.ಮಣಿಕಂಠ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಸಿ.ಪುಟ್ಟರಂಗಶೆಟ್ಟಿ ಭರವಸೆ
  • ಮಲ್ಲಯ್ಯನಪುರದಲ್ಲಿ ಶಾಲಾ ನೂತನ ಕೊಠಡಿ ಉದ್ಘಾಟನೆ
  • ಕೊಠಡಿಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ
ಚಾಮರಾಜನಗರ: ಸರ್ಕಾರಿ ಶಾಲಾ-ಕಾಲೇಜುಗಳಿಗೆ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಮೊದಲ ಆದ್ಯತೆ ನೀಡಲಾಗುವುದು ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.
ತಾಲೂಕಿನ ಶಿವಪುರ ಗ್ರಾಮಪಂಚಾಯಿತಿ ವ್ಯಾಪ್ತಿಯ ಮಲ್ಲಯ್ಯನಪುರ ಗ್ರಾಮದಲ್ಲಿ ಜಿಲ್ಲಾಪಂಚಾಯಿತಿ ಹಾಗೂ ಶಿಕ್ಷಣಇಲಾಖೆ ವತಿಯಿಂದ ನಿರ್ಮಿಸಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿಯನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
ರಾಜ್ಯಸರ್ಕಾರ ಶಾಲಾಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ, ಸಮವಸ್ತ್ರ, ವಿದಾರ್ಥಿ ವೇತನ ಸೇರಿದಂತೆ ಹಾಸ್ಟೆಲ್ ಸೌಲಭ್ಯ ಕಲ್ಪಿಸುತ್ತಿದೆ. ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯ ಪಡೆದುಕೊಂಡು ಸುಶಿಕ್ಷಿತರಾಗಬೇಕು. ಚಾಮರಾಜನಗರದಲ್ಲಿ ಪದವಿಪೂರ್ವ, ಪದವಿ, ಸುವರ್ಣಗಂಗೋತ್ರಿ, ಎಂಜಿನಿಯರಿಂಗ್ ಕಾಲೇಜು, ಕೇಂದ್ರಿಯವಿದ್ಯಾಲಯ, ಕೃಷಿವಿಜ್ಞಾನಕಾಲೇಜು, ಮೆಡಿಕಲ್ ಕಾಲೇಜು, ಕರ್ನಾಟಕ ಪಬ್ಲಿಕ್ ಶಾಲೆ, ಆದರ್ಶ ಶಾಲೆಗಳಿದೆ. ಪ್ರಸ್ತುತ ವ್ಯಾಸಂಗಮಾಡುವ ಹಾಗೂ ಮುಂದಿನಸಾಲಿನ ವಿದ್ಯಾರ್ಥಿಗಳ ಉನ್ನತಶಿಕ್ಷಣಕ್ಕೆ ಪೂರಕವಾಗಲಿವೆ ಎಂದರು.
ಯಾವುದೇ ದೇಶ ಅಭಿವೃದ್ದಿಯತ್ತ ಸಾಗಬೇಕಾದರೆ ಅದು ಶಿಕ್ಷಣದಿಂದ ಮಾತ್ರ ಸಾಧ್ಯವಾಗುತ್ತದೆ. ಸಂವಿಧಾನಾತ್ಮಕ ಸೌಲಭ್ಯ ಪಡೆಯಲು ಶಿಕ್ಷಣವೇ ಆಧಾರ ಎಂಬುದನ್ನು ಎಲ್ಲರೂ ಮನಗಾಣಬೇಕು.
ಈ ನಿಟ್ಟಿನಲ್ಲಿ ಶಾಲೆಗಳಿಗೆ ಬೇಕಾದ ಕುಡಿಯುವನೀರು, ಕೊಠಡಿಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾ,ಪಂ ಮಾಜಿ ಅಧ್ಯಕ್ಷೆ ಎಂ.ಸಿ.ಮಹದೇವಮ್ಮ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ಅಂಬಿಕಾ, ಉಪಾಧ್ಯಕ್ಷ ಮರಿಸ್ವಾಮಿ, ಸದಸ್ಯ ಎಪಿಎಂಸಿ ಸದಸ್ಯ ಎ.ಎಸ್.ಪ್ರದೀಪ್, ಬಿಇಒ ಹನುಮಶೆಟ್ಟಿ, ನಿವೃತ್ತ ಬಿಇಒ ಸೋಮಣ್ಣೇಗೌಡ, ಸಿಆರ್‌ಪಿ ಮಹದೇವಯ್ಯ, ಮುಖ್ಯಶಿಕ್ಷಕಿ ಶಶಿಕಲಾ, ಅಸ್ಲಾಂಪಾಷ, ಯಜಮಾನ್ ನಂಜುಂಡಸ್ವಾಮಿ, ಸುಬ್ಬೇಗೌಡ, ಮಲ್ಲಯ್ಯನಪುರ ಶಿವಣ್ಣ ನೋಡಲ್ ಅಧಿಕಾರಿ ತ್ಯಾಗರಾಜು, ಶಿವಕುಮಾರ್ ಇತರರಿದ್ದರು.