ರಾಮಾಪುರದ ರಸ್ತೆಯಲ್ಲಿ ರಸ್ತೆಗೆ ಅಡ್ಡಲಾಗಿ ನಿಂತಿರುವ ಕುದುರೆಗಳು.  
ಚಾಮರಾಜನಗರ

ಬಿಡಾಡಿ ದನಗಳ ಹಾವಳಿ ತಡೆಯಿರಿ

ಮಾದೇಶ್ ತಿ.ನರಸೀಪುರ

ಪ್ರಮುಖ ಮುಖ್ಯಾಂಶಗಳು

  • ಹನೂರು ತಾಲೂಕಿನ ಮಾಮರದೊಡ್ಡಿಯ ಗ್ರಾಮಸ್ಥರ ಆಗ್ರಹ
ಹನೂರು: ತಾಲೂಕಿನ ರಾಮಾಪುರದ ರಸ್ತೆಯಲ್ಲಿ ಬಿಡಾಡಿ ದನಗಳು ಹಾಗೂ ಕುದುರೆಗಳು ಎಲ್ಲೆಂದರಲ್ಲಿ ನಿಲ್ಲುವುದರಿಂದ ಸಂಚಾರಕ್ಕೆ ತೊಂದರೆಯಾಗಿದೆ ಎಂದು ತಾಲೂಕಿನ ಮಾಮರದೊಡ್ಡಿಯ ಗ್ರಾಮಸ್ಥರು ದೂರಿದ್ದಾರೆ.
ರಾಮಾಪುರದ ಈ ಮಾರ್ಗದಲ್ಲಿ ನಿತ್ಯ ಹೆಚ್ಚಿನ ವಾಹನಗಳು ಸಂಚರಿಸುತ್ತವೆ. ಜತೆಗೆ ಶಾಲಾ, ಕಾಲೇಜು ಇದೆ. ಹಾಗಾಗಿ ಹೆಚ್ಚು ಜನಸಂಚಾರವಿರುವ ರಸ್ತೆ ಇದಾಗಿದೆ. ಆದರೆ ಕಳೆದ ಹಲವು ತಿಂಗಳಿನಿಂದ ಈ ರಸ್ತೆಯಲ್ಲಿ ಬಿಡಾದಿ ದನ ಹಾಗೂ ಕುದುರೆಗಳು ಅಡ್ಡಾದಿಡ್ಡಿಯಾಗಿ ನಿಲ್ಲುತ್ತವೆ ಹಾಗೂ ಓಡಾಡುತ್ತವೆ. ಇದರಿಂದ ಸಂಚಾರಕ್ಕೆ ತೊಡುಕಾಗಿ ಪರಿಣಮಿಸಿದೆ. ವಿದ್ಯಾರ್ಥಿಗಳು ಭಯದಿಂದ ತೆರಳಬೇಕಿರುವುದು ಒಂದೆಡೆಯಾದರೆ, ವಾಹನ ಸವಾರರು ಅದರಲ್ಲೂ ಬೈಕ್ ಸವಾರರು ಸಂಚರಿಸಲು ಸಮಸ್ಯೆ ಎದುರಿಸಬೇಕಿದೆ. ಕೆಲವೊಂದು ವೇಳೆ ರಸ್ತೆಯಲ್ಲಿ ದಿಢೀರನೆ ಓಡಾಡುವ ದನ ಹಾಗೂ ಕುದುರೆಗಳಿಂದ ಬೈಕ್ ಸವಾರರು ಬಿದ್ದು ಗಾಯಗೊಂಡಿರುವ ಘಟನೆಗಳು ನಡೆದಿದೆ. ಇದರಿಂದ ಸಾರ್ವಜನಿಕರ ಸಂಚಾರಕ್ಕೆ ಸಮಸ್ಯೆಯಾಗಿದೆ.
ರಸ್ತೆಯಲ್ಲಿ ಓಡಾಡುವ ಬಿಡಾಡಿ ದನ ಹಾಗೂ ಕುದುರೆಗಳಿಗೆ ಕಡಿವಾಣ ಹಾಕುವಂತೆ 2 ತಿಂಗಳ ಹಿಂದೆಯೇ ರಾಮಾಪುರ ಗ್ರಾಪಂ ಪಿಡಿಒಗೆ ಮನವಿ ಸಲ್ಲಿಸಲಾಗಿದ್ದರೂ ಯಾವುದೇ ಕ್ರಮವಾಗಿಲ್ಲ. ಆದ್ದರಿಂದ ಅಧಿಕಾರಿಗಳು ಇನ್ನಾದರೂ ಇತ್ತ ಗಮನಹರಿಸಿ ಬಿಡಾಡಿ ದನ ಹಾಗೂ ಕುದುರೆಗಳಿಗೆ ಕಡಿವಾಣ ಹಾಕುವುದರ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಪೂಂಗುಡಿ ಒತ್ತಾಯಿಸಿದ್ದಾರೆ.