ಹನೂರಿನಲ್ಲಿ ಲೊಕ್ಕನಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ತೀವ್ರ ಹದಗೆಟ್ಟಿದ್ದು, ಬೈಕ್ ಸವಾರರು ಪ್ರಯಾಸದಿಂದ ತೆರಳುತ್ತಿರುವುದು.  
ಚಾಮರಾಜನಗರ

ಹದಗೆಟ್ಟಿರುವ ರಸ್ತೆ ಅಭಿವೃದ್ಧಿಗೆ ಕ್ರಿಯಾಯೋಜನೆ ತಯಾರಿಸಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎಂ.ಆರ್.ಮಂಜುನಾಥ್ ಸೂಚನೆ
ಹನೂರು: ಪಟ್ಟಣದಲ್ಲಿ ತೀವ್ರ ಹದಗೆಟ್ಟಿರುವ ಖಾಸಗಿ ಬಸ್ ನಿಲ್ದಾಣದಿಂದ ಬಂಡಳ್ಳಿ ಮುಖ್ಯ ರಸ್ತೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಲೊಕ್ಕನಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ತಾತ್ಕಾಲಿಕವಾಗಿ ಅಭಿವೃದ್ಧಿ ಪಡಿಸಲು ಕೂಡಲೇ ಕ್ರಿಯಾಯೋಜನೆ ತಯಾರಿಸುವಂತೆ ಶಾಸಕ ಎಂ.ಆರ್.ಮಂಜುನಾಥ್ ಅವರು ಪಿಡಬ್ಲುೃಡಿ ಇಂಜಿನಿಯರ್‌ಗೆ ಸೂಚಿಸಿದ್ದು, ಪಟ್ಟಣದ ಜನರು ಕೊಂಚ ನಿಟ್ಟುಸಿರು ಬಿಟ್ಟಂತಾಗಿದೆ.
ಪಟ್ಟಣದ ವ್ಯಾಪ್ತಿಯಲ್ಲಿರುವ ಈ 2 ಮಾರ್ಗದ ರಸ್ತೆಯು ಸುಮಾರು 3 ಕಿ.ಮೀ ಅಂತರ ಹೊಂದಿದೆ. ಪಿಡಬ್ಲುೃಡಿ ಇಲಾಖೆಗೆ ಒಳಪಟ್ಟಿರುವ ಬಂಡಳ್ಳಿಗೆ ತೆರಳುವ ರಸ್ತೆ ಮಾರ್ಗದಲ್ಲಿ ಬ್ಯಾಂಕ್‌ಗಳು, ಅಂಚೆ ಕಚೇರಿ, ಗ್ಯಾಸ್, ಬೈಕ್ ಷೋ ರೂಮ್‌ಗಳು, ಹೋಟೆಲ್, ಮದ್ಯದಂಗಡಿ ಹಾಗೂ ಅಂಗಡಿ ಮುಂಗಟ್ಟುಗಳು ಹೆಚ್ಚಿನ ಸಂಖ್ಯೆಯಲ್ಲಿದೆ. ಇದರಿಂದ ಈ ರಸ್ತೆಯು ಹೆಚ್ಚು ಜನರು ಸಂಚರಿಸುವ ಮಾರ್ಗವಾಗಿದೆ. ಅಲ್ಲದೆ ಇದೇ ಮಾರ್ಗದಲ್ಲಿ ಕ್ರಿಸ್ತರಾಜ ಶಿಕ್ಷಣ ಸಂಸ್ಥೆ, ಜಿ.ವಿ ಗೌಡ ಸರ್ಕಾರಿ ಪ್ರೌಢಶಾಲೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಇದ್ದು, ನಿತ್ಯ ಸಾವಿರಾರು ವಿದ್ಯಾರ್ಥಿಗಳು ಸಂಚರಿಸುತ್ತಾರೆ. ಜತೆಗೆ ಕೆಲಸ ಕಾರ್ಯಗಳ ನಿಮಿತ್ತ ಶಿಕ್ಷಕರು ಬಿಇಒ ಕಚೇರಿಗೆ ತೆರಳುವ ಮುಖ್ಯ ರಸ್ತೆಯಾಗಿದೆ.
ಇನ್ನು ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಲೊಕ್ಕನಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮಾರ್ಗದಲ್ಲಿ ಗೌತಮ್ ಶಿಕ್ಷಣ ಸಂಸ್ಥೆ, ಬಿಎಂಜಿ ಸರ್ಕಾರಿ ಪ್ರೌಢಶಾಲೆ, ಲ್ಯಾಂಪ್ಸ್ ಸೊಸೈಟಿ ಹಾಗೂ ಜನವಸತಿ ಪ್ರದೇಶವಿದ್ದು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಈ ರಸ್ತೆಯಲ್ಲಿ ಹೆಚ್ಚು ಸಂಚರಿಸುತ್ತಾರೆ.
ಈ 2 ರಸ್ತೆಯನ್ನು 2 ದಶಕಗಳ ಹಿಂದೆ ಡಾಂಬರೀಕರಣಗೊಳಿಸಲಾಗಿತ್ತು. ಆದರೆ ಕಳೆದ 4 ವರ್ಷದಿಂದೀಚೆಗೆ ಈ ರಸ್ತೆಯ ಬಹುತೇಕ ಕಡೆಗಳಲ್ಲಿ ಗುಂಡಿಗಳು ನಿರ್ಮಾಣವಾಗಿದೆ. ಜಲ್ಲಿಕಲ್ಲುಗಳು ರಸ್ತೆಯ ಆಚೀಚೆ ಹರಡಿಕೊಂಡಿದ್ದು, ತೀವ್ರ ಹಾಳಾಗಿದೆ. ಗುಂಡಿ ಹಾಗೂ ಜಲ್ಲಿಕಲ್ಲುಗಳನ್ನು ತಪ್ಪಿಸಲು ಹೋಗಿ ಬೈಕ್ ಸವಾರರು ಆಯತಪ್ಪಿ ಬಿದ್ದು ಗಾಯಗೊಂಡಿರುವ ಘಟನೆಗಳು ಆಗಾಗ್ಗೆ ಜರುಗುತ್ತಲೆ ಇತ್ತು. ಮಳೆಗಾಲದ ವೇಳೆ ಗುಂಡಿಗಳಲ್ಲಿ ಹಲವು ದಿನಗಳವರೆಗೆ ನೀರು ನಿಂತು ಸವಾರರ ಸಂಚಾರಕ್ಕೆ ತುಂಬ ತೊಡುಕಾಗಿ ಪರಿಣಮಿಸಿತ್ತು. ಹೆಚ್ಚಿನದಾಗಿ ಶಾಲಾ, ಕಾಲೇಜುಗಳಿಗೆ ಮಕ್ಕಳನ್ನು ಬೈಕ್‌ನಲ್ಲಿ ಕರೆದೊಯ್ಯುವ ಪಾಲಕರು ಅದರಲ್ಲೂ ಮಹಿಳೆಯರು ಹೆಚ್ಚು ತುಂಬ ತೊಂದರೆ ಅನುಭವಿಸಬೇಕಿತ್ತು. ಈ 2 ರಸ್ತೆಯನ್ನು ಅಭಿವೃದ್ಧಿ ಪಡಿಸುವಂತೆ ಪಟ್ಟಣದ ಜನತೆ ಹಲವು ವರ್ಷಗಳಿಂದ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ರಸ್ತೆಯ ಅವ್ಯವಸ್ಥೆಯಿಂದ ಪಟ್ಟಣದ ಜನತೆ ರೋಸಿ ಹೋಗಿದ್ದು, ಈ ಬಗ್ಗೆ ಶಾಸಕ ಎಂ.ಆರ್.ಮಂಜುನಾಥ್ ಅವರಲ್ಲಿ ಗಮನಕ್ಕೆ ತಂದಿದ್ದರು. ಈ ಸಂಬಂಧ ಶಾಸಕರು ಅಗತ್ಯ ಮುತುವರ್ಜಿ ವಹಿಸಿದ್ದಾರೆ.
ಇಂಜಿನಿಯರ್‌ಗೆ ಸೂಚನೆ: ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಶಾಸಕರು ಕಾಳಜಿ ವಹಿಸಿದ್ದು, ಈ 2 ರಸ್ತೆಯನ್ನು ಸಿಸಿ ರಸ್ತೆಯಾಗಿಸಲು ಕ್ರಿಯಾಯೋಜನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಆದರೆ ಅನುಮೋದನೆಯಾಗುವ ತನಕ ಈ ರಸ್ತೆಯನ್ನು ತಾತ್ಕಾಲಿಕವಾಗಿ ಅಭಿವೃದ್ಧಿ ಪಡಿಸಲು ಒಂದು ವಾರದೊಳಗೆ ಕ್ರಿಯಾಯೋಜನೆ ತಯಾರಿಸಿ ವರದಿ ಸಲ್ಲಿಸುವಂತೆ ಪಿಡಬ್ಲ್ಯುಡಿ ಇಲಾಖೆಯ ಎಇ ಸುರೇಂದ್ರ ಅವರಿಗೆ ಸೂಚಿಸಿದ್ದಾರೆ. ಹಾಗಾಗಿ ಸದ್ಯದಲ್ಲಿಯೇ ತಾತ್ಕಾಲಿಕವಾಗಿ ಈ 2 ರಸ್ತೆಗಳಿಗೆ ಕಾಯಕಲ್ಪ ಕೂಡಿ ಬರಲಿದೆ. ಇದರಿಂದ ಹಲವು ವರ್ಷಗಳಿಂದ ಓಡಾಡಲು ತೊಂದರೆ ಅನುಭವಿಸುತ್ತಿರುವ ಜನರಿಗೆ ಸಮಸ್ಯೆ ತಪ್ಪಲಿದೆ.