ಕೊಳ್ಳೇಗಾಲ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಿತು. ತಹಸೀಲ್ದಾರ್ ಬಸವರಾಜು, ಗುರುಶಾಂತಪ್ಪ ಬೆಳ್ಳುಂಡಗಿ, ಮಂಜುಳಾ, ಕೇಶವಮೂರ್ತಿ, ರುದ್ರಮ್ಮ ಇದ್ದರು. 
ಚಾಮರಾಜನಗರ

ಬಾಬು ಜಗಜೀವನರಾಮ್ ಜಯಂತಿ ಆಚರಣೆಗೆ ಸಿದ್ಧತೆ

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್ ಬಸವರಾಜು ನೇತೃತ್ವದಲ್ಲಿ ಪೂರ್ವಭಾವಿ ಸಭೆ
ಕೊಳ್ಳೇಗಾಲ: ತಾಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಏ.5ರಂದು ಪಟ್ಟಣದಲ್ಲಿ ಮಾಜಿ ಉಪಪ್ರಧಾನಿ ಬಾಬು ಜಗಜೀವನ ರಾಮ್ ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ತಹಸೀಲ್ದಾರ್ ಬಸವರಾಜು ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಂಭಾಗದಿಂದ ಬಾಬು ಜಗಜೀವನರಾಮ್ ಅವರ ಭಾವಚಿತ್ರ ಮೆರವಣಿಗೆ ಆರಂಭವಾಗಲಿದ್ದು, ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಲಿದೆ. ಅಂತಿಮವಾಗಿ ಗುರುಭವನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದರು. ಇದಕ್ಕೂ ಮೊದಲು ಸಭೆಯಲ್ಲಿ ನೆರೆದಿದ್ದ ಸಮಾಜದ ಮುಖಂಡರ ಬಳಿ ಸಲಹೆಗಳನ್ನು ಸಂಗ್ರಹಿಸಲಾಯಿತು.
ಅಧ್ಯಕ್ಷರ ಸ್ಥಾನ ವಿಚಾರದಲ್ಲಿ ಗದ್ದಲ: ಸಭೆ ಆರಂಭದಲ್ಲಿ ಸಲಹೆ ನೀಡುವಂತೆ ತಹಸೀಲ್ದಾರ್ ಬಸವರಾಜು ಅವರು ಮುಖಂಡರಿಗೆ ತಿಳಿಸಿದರು. ಈ ವೇಳೆ ಗೋಪಾಲ್ ಎಂಬುವರು ಮಾತನಾಡಿ, ಮುಖಂಡರು ಸಲಹೆ ನೀಡುವಾಗ ತಮ್ಮ ಸ್ಥಾನಮಾನದ ಬಗ್ಗೆ ಪರಿಚಯಿಸಿಕೊಂಡು ಮಾತನಾಡಿ ಎಂದರು. ಬಳಿಕ ಬಾಲರಾಜು ಮಾತನಾಡಿ, ನಾನು ಬಾಬು ಜಗಜೀವನ ರಾಮ್ ಸಂಘಟನೆ ಒಕ್ಕೂಟದ ತಾಲೂಕು ಅಧ್ಯಕ್ಷನಾಗಿದ್ದೇನೆ. ತಾಲೂಕು ಆಡಳಿತ ಕಳೆದ ಬಾರಿ ಅದ್ದೂರಿಯಾಗಿ ಜಯಂತಿ ಆಚರಣೆ ಮಾಡಿದಂತೆ ಈ ಬಾರಿಯು ಆಚರಿಸಬೇಕು. ಕಳೆದ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಬೇಕು. ಸಂಪನ್ಮೂಲ ವ್ಯಕ್ತಿಗಳಿಂದ ವಿಚಾರ ಮಂಡನೆ ಮಾಡಿಸಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಮಧ್ಯೆ ಪ್ರವೇಶಿಸಿದ ಗೋಪಾಲ್ ಅವರು ನಾನು ನೂತನವಾಗಿ ಬಾಬು ಜಗಜೀವನ ರಾಮ್ ಸಂಘಟನೆ ಒಕ್ಕೂಟದ ತಾಲೂಕು ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ನನ್ನನ್ನು ಜಿಲ್ಲಾ ಸಂಘದಿಂದ ಆಯ್ಕೆ ಮಾಡಲಾಗಿದೆ ಎಂದರು. ಈ ವೇಳೆ ಅಧ್ಯಕ್ಷ ಸ್ಥಾನದ ವಿಚಾರವಾಗಿ ಬಾಲರಾಜು ಹಾಗೂ ಗೋಪಾಲ್ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ತಹಸೀಲ್ದಾರ್ ಬಸವರಾಜು ವೇದಿಕೆಯಿಂದ ಕೆಳಗಿಳಿದು ಮುಖಂಡರ ಗಲಾಟೆಯನ್ನು ಶಾಂತಿಗೊಳಿಸಿದರು.
ಸಭೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಗುರುಶಾಂತಪ್ಪ ಬೆಳ್ಳುಂಡಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ, ಸಮಾಜ ಕಲ್ಯಾಣ ಇಲಾಖೆ ತಾಲೂಕು ಸಹಾಯಕ ನಿರ್ದೇಶಕ ಕೇಶವಮೂರ್ತಿ, ನಗರಸಭೆ ಪೌರಾಯುಕ್ತೆ ರುದ್ರಮ್ಮ ಶರಣಯ್ಯ ಇದ್ದರು.