ಮಲೆಮಹದೇಶ್ವರ ಬೆಟ್ಟದಲ್ಲಿ ಮಹಾ ಶಿವರಾತ್ರಿ ಜಾತ್ರೆ ಹಿನ್ನೆಲೆಯಲ್ಲಿ ಕೈಗೊಂಡಿರುವ ಸಿದ್ಧತೆಗಳನ್ನು ಪ್ರಾಧಿಕಾರದ ಕಾರ್ಯದರ್ಶಿ ಎ.ಈ.ರಘು ಪರಿಶೀಲಿಸಿದರು. ಚಂದ್ರಶೇಖರ್, ಸೆಲ್ವ ಗಣಪತಿ ಇದ್ದರು.
ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಜರುಗುವ ಮಹಾ ಶಿವರಾತ್ರಿ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆ ಅಗತ್ಯ ಸಿದ್ಧತೆ ಆರಂಭವಾಗಿದ್ದು ಬುಧವಾರ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ.ರಘು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಮ.ಬೆಟ್ಟದಲ್ಲಿ ಫೆ.14 ರಿಂದ 18ರವರೆಗೆ ಮಹಾ ಶಿವರಾತ್ರಿ ಜಾತ್ರಾ ಮಹೋತ್ಸವ ಜರುಗಲಿದ್ದು ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಕಾಲ್ನಡಿಗೆ ಮೂಲಕ ಆಗಮಿಸಲಿದ್ದಾರೆ. ತಮಿಳುನಾಡಿನಿಂದಲೂ ಹೆಚ್ಚಿನ ಭಕ್ತರು ಆಗಮಿಸುವರು. ಭಕ್ತರಿಗೆ ಅಗತ್ಯ ಮೂಲಸೌಕರ್ಯ ಒದಗಿಸುವುದು ಪ್ರಾಧಿಕಾರದ ಕರ್ತವ್ಯ. ಈ ಸಂಬಂಧ ಬೆಂಗಳೂರಿನಲ್ಲಿ ಜ.27ರಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಶಾಸಕ ಎಂ.ಆರ್.ಮಂಜುನಾಥ್, ಜಿಲ್ಲಾಧಿಕಾರಿ ಶ್ರೀರೂಪಾ, ಜಿಪಂ ಸಿಇಒ ಮೋನಾರೋತ್ ಹಾಗೂ ಇನ್ನಿತರ ಅಧಿಕಾರಿಗಳ ಸಮ್ಮುಖದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಅಗತ್ಯ ಮೂಲಸೌಕರ್ಯ ಒದಗಿಸುವಂತೆ ಸೂಚನೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಮ.ಬೆಟ್ಟದಲ್ಲಿ ಸಿದ್ಧತಾ ಕಾರ್ಯ ಭರದಿಂದ ಸಾಗಿದೆ.
ಕಾಲ್ನಡಿಗೆ ಮೂಲಕ ಆಗಮಿಸುವ ಭಕ್ತರಿಗೆ ಮ.ಬೆಟ್ಟದ ಪ್ರಾಧಿಕಾರದ ಕಚೇರಿ ಸಮೀಪದ ಅರಳಿ ಮರದಿಂದ ದೇಗುಲಕ್ಕೆ ಉಚಿತವಾಗಿ ತೆರಳಲು ಈಗಾಗಲೇ ಪ್ರತ್ಯೇಕ ಕೌಂಟರ್ ನಿರ್ಮಿಸಲಾಗಿದೆ. ದೇವರ ದರ್ಶನದ ಕ್ಯೂಲೈನ್, ರಾಜಗೋಪುರ ಎಡ ಹಾಗೂ ಬಲ ಬದಿಯಲ್ಲಿ ನೆರಳಿನ ವ್ಯವಸ್ಥೆ ಕಲ್ಪಿಸಲು ಶಾಮಿಯಾನ ಅಳವಡಿಸಲಾಗಿದೆ. ಅಂತರ ಗಂಗೆ ಶುಚಿಗೊಳಿಸಲಾಗಿದೆ. ಕುಡಿಯುವ ನೀರಿನ ಸೌಕರ್ಯ, ಶೌಚಗೃಹ, ದಾಸೋಹ ಸೇರಿದಂತೆ ಮಾಸ್ಟರ್ ಪ್ಲಾನ್ ಆವರಣದಲ್ಲಿ ಇನ್ನಿತರೆ ಅಗತ್ಯ ಸೌಕರ್ಯವನ್ನು ಒದಗಿಸಲು ಕಾರ್ಯಾರಂಭಿಸಲಾಗಿದೆ. ಲಕ್ಷಾಂತರ ಭಕ್ತರು ತಾಳುಬೆಟ್ಟದಿಂದ ಮ.ಬೆಟ್ಟಕ್ಕೆ ಅರಣ್ಯ ಪ್ರದೇಶದ ಮೆಟ್ಟಿಲಿನ ಮೂಲಕ ಆಗಮಿಸುವುದರಿಂದ ಸುರಕ್ಷತೆಯ ದೃಷ್ಟಿಯಿಂದ ಮಾರ್ಗ ಬದಿಯಲ್ಲಿ ಬೆಳೆದಿರುವ ಗಿಡ ಗಂಟಿಗಳನ್ನು ತೆರವುಗೊಳಿಸಲಾಗುತ್ತಿದೆ.
ತಾಳುಬೆಟ್ಟದಿಂದ ಮ.ಬೆಟ್ಟದವರೆಗೆ ಪಾದಯಾತ್ರಿಗಳಿಗೆ ಕುಡಿಯುವ ನೀರಿನ ಸೌಕರ್ಯ ಒದಗಿಸಲಾಗಿದೆ. ತೇರು ಕಟ್ಟುವ ಕಾರ್ಯಕ್ಕೆ ಅಗತ್ಯ ಸಿದ್ಧತೆ ನಡೆದಿದೆ. ಬುಧವಾರ ಈ ಸ್ಥಳಗಳಿಗೆ ಪ್ರಾಧಿಕಾರದ ಎ.ಈ.ರಘು ತೆರಳಿ ಸಿದ್ಧತೆ ಪರಿಶೀಲಿಸಿದರು. ಆಗಮಿಸುವ ಭಕ್ತರಿಗೆ ಯಾವುದೇ ರೀತಿಯಲ್ಲೂ ಸಮಸ್ಯೆಯಾಗದಂತೆ ನೀಡಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಸಿಬ್ಬಂದಿಗೆ ಸೂಚಿಸಿದರು.
ತಾಳುಬೆಟ್ಟ ಮಾರ್ಗದಲ್ಲಿ 50 ಸಿಬ್ಬಂದಿ ನಿಯೋಜನೆ:
ತಾಳುಬೆಟ್ಟದ ಮಾರ್ಗದಲ್ಲಿ ಇತ್ತೀಚೆಗೆ ಭಕ್ತರೊಬ್ಬರು ಚಿರತೆ ದಾಳಿಗೆ ಬಲಿಯಾದ ಹಿನ್ನೆಲೆಯಲ್ಲಿ ಭಕ್ತರ ಸುರಕ್ಷತೆಯ ದೃಷ್ಟಿಯಿಂದ ಅರಣ್ಯ ಇಲಾಖೆ ಸಿಬ್ಬಂದಿ ಜತೆಗೆ ಪ್ರಾಧಿಕಾರದ 50 ಸಿಬ್ಬಂದಿಯನ್ನು ತಾಳುಬೆಟ್ಟದಿಂದ ಮ.ಬೆಟ್ಟದವರೆಗೆ ನಿಯೋಜಿಸಲಾಗಿದೆ. ಈ ಮಾರ್ಗದ ಅಲಲ್ಲಿ ಮೊಬೈಲ್ ಶೌಚಗೃಹ ಅಳವಡಿಕೆ, ಮ.ಬೆಟ್ಟದಲ್ಲಿ ತುರ್ತು ಆರೋಗ್ಯ ಸೇವಾ ಕೇಂದ್ರ ತೆರೆಯಲು ಕ್ರಮವಹಿಸಲಾಗಿದೆ.
ಜಾತ್ರೆಗೆ ಆಗಮಿಸುವ ಭಕ್ತರಿಗೆ ತಾಳುಬೆಟ್ಟದಿಂದ ಮ.ಬೆಟ್ಟದವರೆಗೆ ಕುಡಿಯುವ ನೀರಿನ ಸೌಕರ್ಯವನ್ನು ಕಲ್ಪಿಸಲಾಗಿದೆ. ಭಕ್ತರು ಪ್ಲಾಸ್ಟಿಕ್ ಬಾಟಲಿ ಬಳಸದಂತೆ ಪ್ರಾಧಿಕಾರಕ್ಕೆ ಸಹಕರಿಸಬೇಕು. ತಾಳುಬೆಟ್ಟದಿಂದ ಮ.ಬೆಟ್ಟದವರೆಗೆ ಸಂಪೂರ್ಣ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ. ಭಕ್ತರು ಶ್ರೀ ಕ್ಷೇತ್ರದ ಪಾವಿತ್ರ್ಯತೆಗೆ ಕೈ ಜೋಡಿಸಬೇಕು ಎಂದು ಕಾರ್ಯದರ್ಶಿ ಮನವಿ ಮಾಡಿದ್ದಾರೆ.