ಗುಂಡ್ಲುಪೇಟೆ ತಾಲೂಕು ಕಚೇರಿ ಮುಂಭಾಗ ಬಿಜೆಪಿ ಮಂಡಲ ವತಿಯಿಂದ ತಾಲೂಕನ್ನು ಬರಪೀಡಿವೆಂದು ಘೋಷಿಸುವಂತೆ ಹಾಗೂ ಕೆರೆಗಳಿಗೆ ನೀರು ತುಂಬಿಸುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಮನವಿಪತ್ರ ಸಲ್ಲಿಸಿದರು.
- ಮಾಜಿ ಶಾಸಕ ಸಿ.ಎಸ್.ನಿರಂಜನಕುಮಾರ್ ಒತ್ತಾಯ
- ತಾಲೂಕು ಕಚೇರಿ ಎದುರು ಬಿಜೆಪಿ ಪ್ರತಿಭಟನೆ
ಗುಂಡ್ಲುಪೇಟೆ: ಸರ್ಕಾರ ಕೂಡಲೇ ತಾಲೂಕನ್ನು ಬರಪೀಡಿತ ಎಂದು ಘೋಷಿಸುವ ಜತೆಗೆ ಎಲ್ಲಾ ಕೆರೆಗಳಿಗೂ ನದಿಮೂಲದಿಂದ ನೀರುಹರಿಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ತಾಲೂಕು ಕಚೇರಿ ಮುಂಭಾಗ ಬಿಜೆಪಿ ಮಂಡಲ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ತಾಲೂಕು ಕಚೇರಿ ಎದುರು ಜಮಾಯಿಸಿದ ಕಾರ್ಯಕರ್ತರು ಕಳೆದ ಮೂರು ವರ್ಷಗಳಿಂದ ತಾಲೂಕಿನ ಕೆರೆಗಳಿಗೆ ನೀರುಬಿಡದೆ ರೈತರನ್ನು ಸಂಕಷ್ಟಕ್ಕೀಡು ಮಾಡಲಾಗಿದೆ ಎಂದು ಘೋಷಣ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನಕುಮಾರ್ ಮಾತನಾಡಿ, ಗಣೇಶ್ ಪ್ರಸಾದ್ ಶಾಸಕರಾದ ನಂತರ ಕೆರೆಗಳಿಗೆ ನೀರು ತುಂಬಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದರಿಂದ ಅಂತರ್ಜಲ ಮಟ್ಟ ತೀವ್ರ ಕುಸಿತವಾಗಿದ್ದು ತಾಲೂಕಿನ ಎಲ್ಲಿಯೂ ಕೊಳವೆಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ.
ಇತ್ತ ಮಳೆಯೂ ಬೀಳದೆ ಬರ ಆವರಿಸಿದ್ದು, ರೈತರು ಮುಂದೇನು ಎಂಬ ಆತಂಕ ಎದುರಿಸುತ್ತಿದ್ದಾರೆ. ಆದರೆ ಇದರ ಬಗ್ಗೆ ಸರ್ಕಾರಕ್ಕೆ ಪರಿಜ್ಞಾನ ಇಲ್ಲ. ಎಲ್ಲದಕ್ಕೂ ಚೌಕಾಸಿ ಮಾಡುತ್ತಿದ್ದಾರೆ. ಯಂತ್ರೋಪಕರಣಗಳ ಸಬ್ಸಿಡಿ ನಿಂತಿದೆ. ಸರ್ಕಾರದಲ್ಲಿ ಆತ್ಮಹತ್ಯೆ ಮಾಡಿಕೊಂಡವರಿಗೆ ಪರಿಹಾರ ಕೊಡಲು ಹಣ ಇಲ್ಲವಾಗಿದೆ ಎಂದು ಲೇವಡಿ ಮಾಡಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರತಿ ವರ್ಷವೂ ಕೆರೆಗಳಿಗೆ ನೀರು ತುಂಬಿಸಲಾಗುತ್ತಿತ್ತು. ಶಿವಪುರ ಕಲ್ಲುಕಟ್ಟೆ ಜಲಾಶಯ ತುಂಬಿ ನಲ್ಲೂರು ಅಮಾನಿ ಕೆರೆಗೂ ನೀರು ಹರಿದಿತ್ತು. ಆದರೆ ಇದೀಗ ಕೆರೆಗಳಿಗೆ ನೀರು ಬಿಡದ ಕಾರಣ ರೈತರು ಫಸಲು ಒಣಗಿ ಹೋಗಿದೆ. ಇದರಿಂದ ಬೋರ್ ವೆಲ್ ಕೊರೆಯಲು, ಬಿತ್ತನೆ, ಗೊಬ್ಬರ ಎಲ್ಲದಕ್ಕೂ ಸಾಲ ಮಾಡಬೇಕಾಗಿದೆ. ಸಂಬಳ ಪಡೆಯುವ ಅಧಿಕಾರಿಗಳು ರೈತರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಕೆರೆಗಳಿಗೆ ನೀರು ತುಂಬಿಸುವಂತೆ ಒತ್ತಾಯಿಸಿ ರೈತರು ತಾಲೂಕು ಕಚೇರಿ ಮುಂದೆ 39 ದಿನ ಪ್ರತಿಭಟನೆ ನಡೆಸಿದ್ದರು. ಕಲ್ಲುಕಟ್ಟೆ ಜಲಾಶಯದ ಬಳಿ ವಿರೋಧ ಪಕ್ಷ ಮತ್ತು ರೈತರು ಹೋರಾಟ ಮಾಡಿದ್ದರೂ ಸಹ ಶಾಸಕ ಗಣೇಶಪ್ರಸಾದ್ ತಾಂತ್ರಿಕ ಕಾರಣ, ಹೊಳೆಯಲ್ಲಿ ನೀರಿಲ್ಲ ಎಂದು ಸಬೂಬು ಹೇಳುತ್ತಿದ್ದಾರೆ. ಹೀಗಿದ್ದಲ್ಲಿ ನಿಮ್ಮನ್ನು ಕ್ಷೇತ್ರದ ಜನತೆ ಆಯ್ಕೆ ಮಾಡಿರುವುದು ಏತಕ್ಕೆ ಎಂದು ಪ್ರಶ್ನಿಸಿದರು.
ತಾಲೂಕಿನಿಂದ ಕೇರಳಕ್ಕೆ ಪ್ರತಿನಿತ್ಯ 300ಕ್ಕೂ ಹೆಚ್ಚಿನ ಟಿಪ್ಪರ್‌ಗಳಲ್ಲಿ ನಮ್ಮ ಖನಿಜ ಸಂಪತ್ತು ಅಕ್ರಮವಾಗಿ ಸಾಗಣೆಯಾಗುತ್ತಿದೆ. ಇದನ್ನು ಪ್ರಶ್ನೆ ಮಾಡದೆ ಸುಮ್ಮನಿದ್ದೀರಾ ಎಂದರೇ ಅದರಲ್ಲಿ ನೀವು ಪಾಲುದಾರರು ಎಂದರ್ಥ. ಗಾಂಜಾ ಮಾರಾಟ ಅವ್ಯಾಹತವಾಗಿದ್ದು, ಕೇರಳ ಲಾಟರಿ ಮಾರಾಟ, ಜೂಜಾಟ, ಪಡಿತರ ಅಕ್ಕಿ ಸಾಗಣೆ ದಂಧೆಯಾಗಿ ಮಾರ್ಪಟ್ಟಿದೆ. ಜತೆಗೆ ಕೇರಳ, ತಮಿಳುನಾಡಿಗೆ ತಾಲೂಕಿನಿಂದ ಅಕ್ರಮವಾಗಿ ಜಾನುವಾರು ಸಾಗಣೆಯೂ ಕೂಡ ಆರಂಭವಾಗಿರುವ ಗುಮಾನಿ ಇದೆ. ಶಾಸಕ ಗಣೇಶಪ್ರಸಾದ್ ಇದಕ್ಕೆಲ್ಲ ಕಡಿವಾಣ ಹಾಕದೆ ಅನೇಕ ವಿಚಾರದಲ್ಲಿ ಫೆಲ್ಯೂರ್ ಆಗಿದ್ದಾರೆ ಎಂದು ಟೀಕಿಸಿದರು.
ಬರದ ಮುನ್ಸೂಚನೆ ಇದ್ದರೂ ಸಹ ಅಧಿಕಾರಿಗಳು ಮೇವು ಕೇಂದ್ರ, ಗೋಶಾಲೆ ತೆರೆದಿಲ್ಲ. ಇದರ ಬಗ್ಗೆ ಶಾಸಕರಿಗೆ ಅರಿವೇ ಇಲ್ಲ. ಬರ ಘೋಷಗೆ ಒಮ್ಮೆಯೂ ದನಿ ಎತ್ತಿಲ್ಲ. ಇನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಸದರು ನಾಪತ್ತೆಯಾಗಿದ್ದು ಜನತೆಯ ಸಂಕಷ್ಟ ಕೇಳುವವರೇ ಇಲ್ಲವಾಗಿದ್ದಾರೆ. ಸರ್ಕಾರದಲ್ಲಿ ಹಣ ಇಲ್ಲದ ಕಾರಣ ವೃದ್ಧಾಪ್ಯ, ವಿಧವೆ ವೇತನ, ಅಂಗವಿಕಲರರಿಗೆ ಹಲವಾರು ತಿಂಗಳಿನಿಂದ ಮಾಶಾಸನ ಸಿಗುತ್ತಿಲ್ಲ. ಜನರು ತಾಲೂಕು ಕಚೇರಿಗಳಲ್ಲಿ ಕ್ಯೂನಲ್ಲಿ ನಿಂತು ವರಮಾನ, ಜಾತಿ ಧೃಡೀಕರಣ ಮಾಡಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ಹೊರ ಹಾಕಿದರು.
ನಂತರ ಕೂಡಲೇ ತಾಲೂಕನ್ನು ಬರಪೀಡಿತ ಎಂದು ಘೋಷಿಸುವಂತೆ ಒತ್ತಾಯಿಸಿದ ಮನವಿಪತ್ರವನ್ನು ಉಪ ತಹಸೀಲ್ದಾರ್ ಜಯಪ್ರಕಾಶ್ ಅವರಿಗೆ ಸಲ್ಲಿಸಿದರು.
ಬಿಜೆಪಿ ಮಂಡಲಾಧ್ಯಕ್ಷ ಸಿ.ಮಹದೇವಪ್ರಸಾದ್, ಮಾಜಿ ಅಧ್ಯಕ್ಷರಾದ ಡಿ.ಪಿ.ಜಗದೀಶ್, ಎಲ್.ಸುರೇಶ್, ಮಹದೇವಶೆಟ್ಟಿ, ನಾಗೇಶ್, ಕೊಡಸೋಗೆ ಚಂದ್ರಣ್ಣ, ಕಬ್ಬಹಳ್ಳಿ ರೇವಣ್ಣ, ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಡಾ.ನವೀನ್ ಮೌರ್ಯ, ಚನ್ನಮಲ್ಲಪುರ ಬಸವಣ್ಣ, ಎಸ್.ಎಂ. ಮಲ್ಲಿಕಾರ್ಜುನಪ್ಪ, ಚಿಕ್ಕಾಟಿ ಶಿವಣ್ಣನಾಯಕ, ಶಿಂಡನಪುರ ಮಂಜುನಾಥ್, ಆಲತ್ತೂರು ಪ್ರವೀಣ್, ರಮೇಶ್ ಕೊಡಸೋಗೆ, ಹರಿಶ್ಚಂದ್ರ, ಹನುಮಂತಶೆಟ್ಟಿ, ನಮೋ ಮಂಜು, ಪ್ರಣಯ್, ಸುನೀಲ್ ಮೂಡ್ಲು, ಮಹೇಂದ್ರ, ಸದ್ದಾಂ, ಬೊಮ್ಮಲಾಪುರ ಗೋವಿಂದನಾಯಕ, ನಂದೀಶ್ ಸೇರಿದಂತೆ ಹಲವರು ಇದ್ದರು.