ಹನೂರು ತಾಲೂಕಿನ ಲೊಕ್ಕನಹಳ್ಳಿ ಗ್ರಾಮದಲ್ಲಿ ನಾಟಿ ಕೋಳಿಗಳು ಮೃತಪಟ್ಟ ಸ್ಥಳಕ್ಕೆ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಿದ್ದರಾಜು ಭೇಟಿ ನೀಡಿ ಪರಿಶೀಲಿಸಿದರು.
- ಲೊಕ್ಕನಹಳ್ಳಿಗೆ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಿದ್ದರಾಜು ಭೇಟಿ
- ಜಂತುಹುಳು ನಾಶಕ ಚುಚ್ಚುಮದ್ದು ನೀಡಲು ಕ್ರಮ
ಹನೂರು: ತಾಲೂಕಿನ ಲೊಕ್ಕನಹಳ್ಳಿ ಗ್ರಾಮದಲ್ಲಿ ನಾಟಿ ಕೋಳಿಗಳು ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಗುರುವಾರ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಿದ್ದರಾಜು ಭೇಟಿ ನೀಡಿ ಪರಿಶೀಲಿಸಿದರು.
ಕೋಳಿ ಸಾಕಣೆ ಮಾಲೀಕ ಮನೋಹರ್ ಅವರಿಂದ ಮಾಹಿತಿ ಪಡೆದ ಡಾ.ಸಿದ್ದರಾಜು ಕೋಳಿಗಳು ಮೃತಪಟ್ಟಿದ್ದ ವೇಳೆ ಇಲಾಖೆಯ ಗಮನಕ್ಕೆ ತರದಿರುವುದರ ಬಗ್ಗೆ ಪ್ರಶ್ನಿಸಿದರು. ಇನ್ನು ಮುಂದೆ ಕೋಳಿಗಳು ಇದ್ದಕ್ಕಿದ್ದಂತೆ ಮೃತಪಟ್ಟರೆ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ಗಮನಕ್ಕೆ ತರಬೇಕು. ಈ ಬಗ್ಗೆ ಕೂಡಲೇ ಅಗತ್ಯ ಕ್ರಮವಹಿಸಲಾಗುವುದು ಎಂದು ತಿಳಿಸಿದರು. ಇದೇ ವೇಳೆ ರೈತರು ಜಾನುವಾರುಗಳಿಗೆ ಮೇವು ಬೆಳೆಯಲು ಮೆಕ್ಕೆಜೋಳ ವಿತರಿಸುವಂತೆ ಮನವಿ ಮಾಡಿದರು.
ಬಳಿಕ ಸಾಕಣೆ ಘಟಕದಲ್ಲಿ ಮೃತಪಟ್ಟಿದ್ದ 3 ಕೋಳಿಗಳ ಮರಣೋತ್ತರ ಪರೀಕ್ಷೆ ನಡೆಸಿ ಪ್ರಯೋಗಾಲಯಕ್ಕೆ ಕಳುಹಿಸಲಾಯಿತು.
ಈ ಸಂಬಂಧ ಡಾ.ಸಿದ್ದರಾಜು ವಿಜಯವಾಣಿಯೊಂದಿಗೆ ಮಾತನಾಡಿ, ಮನೋಹರ ಅವರ ಬಳಿ ಸದ್ಯ ಸುಮಾರು 100 ನಾಟಿ ಕೋಳಿಗಳಷ್ಟೇ ಇವೆ. ಇದೀಗ ಮೃತಪಟ್ಟಿರುವ 3 ಕೋಳಿಗಳ ಮರಣೋತ್ತರ ಪರೀಕ್ಷೆ ನಡೆಸಿದಾಗ ಜಂತುಹುಳು ಬಾಧೆ ಅಥವಾ ವೈರಾಣು ಸೋಂಕಿನಿಂದ ಮೃತಪಟ್ಟಿವೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ನಿಖರ ಕಾರಣ ತಿಳಿದು ಬರಲಿದೆ. ಇಲಾಖೆಯ ಮಾಹಿತಿ ಪ್ರಕಾರ ಗ್ರಾಮದಲ್ಲಿ 350 ನಾಟಿ ಕೋಳಿಗಳಿದ್ದು, ಜಂತುಹುಳು ನಾಶಕ ಚುಚ್ಚು ಮದ್ದು ಹಾಕಲಾಗುವುದು ಎಂದು ತಿಳಿಸಿದರು.