ಚಾಮರಾಜನಗರದ ಡಾ.ರಾಜ್‌ಕುಮಾರ್ ರಂಗಮಂದಿರದಲ್ಲಿ ದಲಿತ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ಗುರುವಾರ ಆಯೋಜಿಸಿದ್ದ ಡಾ.ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರ 135 ನೇ ಜನ್ಮದಿನಾಚರಣೆ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 135 ಸಾಧಕರಿಗೆ ಸನ್ಮಾನ ಮತ್ತು ದಲಿತ ಕವಿ ನಾಡೋಜ ಡಾ.ಸಿದ್ದಲಿಂಗಯ್ಯ ಮತ್ತು ಕ್ರಾಂತಿಕವಿ ಮುಳ್ಳೂರು ನಾಗರಾಜುರವರ ನೆನಪು ಹಾಗೂ ದಲಿತ ಚಳುವಳಿ -ಸಾಹಿತ್ಯ ಕುರಿತು ಸಂವಾದ ಕಾರ್ಯಕ್ರಮವನ್ನು ಮಾಜಿ ಸಚಿವ ಬಿ.ಸೋಮಶೇಖರ್ ಉದ್ಘಾಟಿಸಿದರು. ಮೈಸೂರಿನ ಉರಿಲಿಂಗಪೆದ್ದಿ ಮಠದ ಶ್ರೀಜ್ಞಾನ ಪ್ರಕಾಶ್ ಸ್ವಾಮೀಜಿ, ದಲಿತ ಮಹಾಸಭಾದ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ (ಪಾಪು) ಮತ್ತು ಇತರರು ಹಾಜರಿದ್ದರು.
- ಮಾಜಿ ಸಚಿವ ಬಿ.ಸೋಮಶೇಖರ್ ಹೇಳಿಕೆ
- ದಲಿತ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ಅಂಬೇಡ್ಕರ್ ಅವರ 135 ನೇ ಜನ್ಮದಿನಾಚರಣೆ
ಚಾಮರಾಜನಗರ: ರಾಜಕೀಯ ಅಧಿಕಾರದಿಂದ ಮಾತ್ರ ಎಂತಹದ್ದೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಮಾಜಿ ಸಚಿವ ಬಿ.ಸೋಮಶೇಖರ್ ತಿಳಿಸಿದರು.
ನಗರದ ಡಾ.ರಾಜ್‌ಕುಮಾರ್ ರಂಗಮಂದಿರದಲ್ಲಿ ದಲಿತ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ಗುರುವಾರ ಆಯೋಜಿಸಿದ್ದ ಡಾ.ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರ 135 ನೇ ಜನ್ಮದಿನಾಚರಣೆ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 135 ಸಾಧಕರಿಗೆ ಸನ್ಮಾನ ಮತ್ತು ದಲಿತ ಕವಿ ನಾಡೋಜ ಡಾ.ಸಿದ್ದಲಿಂಗಯ್ಯ ಮತ್ತು ಕ್ರಾಂತಿಕವಿ ಮುಳ್ಳೂರು ನಾಗರಾಜುರವರ ನೆನಪು ಹಾಗೂ ದಲಿತ ಚಳುವಳಿ -ಸಾಹಿತ್ಯ ಕುರಿತು ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ಪ್ರಜಾಪ್ರಭುತ್ವವೆಂದರೆ ಜಾತಿಯಿಂದ, ಜಾತಿಗಾಗಿ, ಜಾತಿಗೋಸ್ಕರ ಎನ್ನುವಂತಾಗಿದೆ. ಅನ್ಯ ಸಮುದಾಯಗಳ ನಾಯಕರ ಹಿಂದೆ ಹೋಗದೆ ದಲಿತರು ತಮ್ಮಮತಗಳನ್ನು ಸಮುದಾಯಕ್ಕೆ ಮೀಸಲು ಇಡಬೇಕು ಎಂದರು. ರಾಜಕಾರಣದಲ್ಲಿ ಶ್ರೇಷ್ಠತೆ ಬರುವುದು ನಡವಳಿಕೆ, ದಕ್ಷತೆ, ಪ್ರಾಮಾಣಿಕತೆಯಿಂದ ಮಾತ್ರ ಸಾಧ್ಯ. ಆದರೆ ಇದು ಇಂದಿನ ರಾಜಕೀಯದಲ್ಲಿ ಉಪಯೋಗಕ್ಕೆ ಬರುವುದಿಲ್ಲ. ಅಂಬೇಡ್ಕರ್ ಆಶಯದಂತೆ ಉನ್ನತ ಮಟ್ಟಕ್ಕೇರಬೇಕು. ಸಾಂವಿಧಾನಿಕ ಸಂಸ್ಥೆಗಳು, ಒಕ್ಕೂಟ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಹಾಳು ಮಾಡುತ್ತಿದೆ ಎಂದು ಹೇಳಿದರು.
ಬರಹಗಾರ ಮಲ್ಕುಂಡಿ ಮಹದೇವಸ್ವಾಮಿ ಮಾತನಾಡಿ, ಸಿದ್ದಲಿಂಗಯ್ಯ ಮತ್ತು ಮುಳ್ಳೂರು ನಾಗರಾಜು ಅವರ ಸಾಹಿತ್ಯ ಹಸಿವಿನ ಅಕ್ಷರದ ಸಾಹಿತ್ಯವಾಗಿದೆ. ಪ್ರಶ್ನೆ ಮಾಡುವ ಸಾಹಿತ್ಯವಾಗಿದೆ. ಮುಳ್ಳೂರು ನಾಗರಾಜು ಅವರ ಸಾಹಿತ್ಯವನ್ನು ರಾಜ್ಯ ಸರ್ಕಾರ 4 ಸಂಪುಟಗಳಲ್ಲಿ ಹೊರತಂದಿದೆ. ಆದರೆ 10 ಸಂಪುಟಗಳನ್ನು ಹೊರತರುವಷ್ಟು ವಿಷಯಗಳನ್ನು ಮುಳ್ಳೂರು ನಾಗರಾಜು ಜನರ ನಡುವೆ ಉಳಿಸಿಹೋಗಿದ್ದಾರೆ ಎಂದರು.
ಮೈಸೂರಿನ ಉರಿಲಿಂಗಪೆದ್ದಿ ಮಠದ ಶ್ರೀಜ್ಞಾನ ಪ್ರಕಾಶ್ ಸ್ವಾಮೀಜಿ ಮಾತನಾಡಿ, ಎಲ್ಲ ಕಡೆಯು ಕೂಡ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿಗಳು ಎತ್ತರಕ್ಕೆ ಬೆಳೆಯುತ್ತಿವೆ. ಆದರೆ, ಅವರ ಮೌಲ್ಯಗಳು ಕುಸಿಯುತ್ತಿವೆ. ಅವರ ತತ್ವ ಆದರ್ಶಗಳನ್ನು ಪಾಲನೆ ಮಾಡಿ, ಅವರಂತೆ ನಾವು ಸಹ ಸಾಧನೆ ಮಾಡುವ ಛಲವನ್ನು ಬೆಳೆಸಿಕೊಳ್ಳಬೇಕು ಎಂದರು.
ಅಂಬೇಡ್ಕರ್ ವಾದಿಗಳು ಅವಕಾಶವಾದಿಗಳಲ್ಲ. ಅವಕಾಶವಾದಿಗಳು ಅಂಬೇಡ್ಕರ್ ವಾದಿಗಳು ಸಾಧ್ಯವಿಲ್ಲ.ಸಾಧಕರು ಸಮಯ ಸಾಧಕರಾಗಬಾರದು. ಅಂಬೇಡ್ಕರ್ ಅವರು ಸಾಧಕರಾಗಿ ಎಂದು ಹೇಳಿದ್ದರು. ನಾವು ಸಮಯ ಸಾಧಕರಾಗುತ್ತಿದ್ದೇವೆ. ಅವಕಾಶವಾದಿಗಳಾಗಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಿ ಎಂದು ಹೇಳಿದ್ದರು.
ದಲಿತ ಮಹಾಸಭಾದ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ (ಪಾಪು) ಅವರ ನೇತೃತ್ವದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು 135ನೇ ಜನ್ಮ ದಿನಾಚರಣೆಯ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 135 ಸಾಧಕರಿಗೆ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಶ್ರೀಕಲ್ಯಾಣಸಿರಿ ಬಂತೇಜಿ ಸಾನಿಧ್ಯ ವಹಿಸಿದ್ದರು. ರಮಾ ಸಿದ್ದಲಿಂಗಯ್ಯ, ಸಾಹಿತಿ ಸೋಮಶೇಖರ ಬಿಸಲವಾಡಿ, ಮುಖಂಡರಾದ ಅರಕಲವಾಡಿ ನಾಗೇಂದ್ರ, ಬಸವಣ್ಣ ಮೂಕಳ್ಳಿ, ಪ್ರಾಧ್ಯಾಪಕ ಗುರುರಾಜು ಯರಗನಹಳ್ಳಿ ಮಾತನಾಡಿದರು. ಜಿ.ಪಂ.ಮಾಜಿ ಉಪಾಧ್ಯಕ್ಷ ಅಯ್ಯನಪುರ ಶಿವಕುಮಾರ್, ನಗರಸಭೆ ಮಾಜಿ ಸದಸ್ಯ ನಂಜುಂಡಸ್ವಾಮಿ, ಕೆಸಿಆರ್ ರಂಗಸ್ವಾಮಿ, ದೊಡ್ಡಿಂದುವಾಡಿ ಸಿದ್ದರಾಜು, ನಾಗು ರಮೇಶ್, ಡಿಎಸ್‌ಎಸ್ ಶಿವಣ್ಣ ಮತ್ತು ಇತರರು ಇದ್ದರು.