ಗುಂಡ್ಲುಪೇಟೆ ತಾಲೂಕಿನ ಮೂಡುಗೂರು ಗ್ರಾಮದ ಪಿಎಸಿಸಿ ಬ್ಯಾಂಕ್‌ನಲ್ಲಿ ನಗದು ಕಳ್ಳತನ ಪ್ರಕರಣದಲ್ಲಿ ಎಸ್‌ಪಿ ಡಾ.ಬಿ.ಟಿ.ಕವಿತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. 
ಚಾಮರಾಜನಗರ

14 ಲಕ್ಷ ರೂ. ನಗದು ಕಳವು ಪ್ರಕರಣ ಸಿಕ್ಕಿಬಿದ್ದ ಸಂಘದ ಮುಖ್ಯಕಾರ್ಯನಿರ್ವಾಹಕ

ಲಲಾಟಾಕ್ಷ ಎಸ್
ಗುಂಡ್ಲುಪೇಟೆ: ತಾಲೂಕಿನ ಮೂಡುಗೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಗದು ಕಳ್ಳತನ ಪ್ರಕರಣ ಬೇಧಿಸಿದ ಪೊಲೀಸರು ಸಂಘದ ಮುಖ್ಯಕಾರ್ಯನಿರ್ವಾಹಕನನ್ನು ಬಂಧಿಸಿ ಆತನಿಂದ 8 ಲಕ್ಷ ರೂ.ವಶಕ್ಕೆ ಪಡೆದಿದ್ದಾರೆ.
ಕಳ್ಳರು ಬ್ಯಾಂಕ್‌ನ ಬಾಗಿಲು ಹಾಗೂ ಬೀರುವಿನ ಬೀಗ ಮುರಿದು ಸಾಲಗಾರರಿಂದ ವಸೂಲಿ ಮಾಡಿಟ್ಟಿದ್ದ 14.6 ಲಕ್ಷ ರೂ.ನಗದು ಕಳ್ಳತನ ಮಾಡಿದ್ದಾರೆ ಎಂದು ಬ್ಯಾಂಕ್ ಮುಖ್ಯಕಾರ್ಯನಿರ್ವಾಹಕ ಚಂದ್ರಶೇಖರ ಮೂರ್ತಿ ಡಿ.17ರಂದು ಪೊಲೀಸರಿಗೆ ದೂರು ನೀಡಿದ್ದರು. ವಿಷಯ ತಿಳಿದ ಕೂಡಲೇ ಶ್ವಾನದಳ ಹಾಗೂ ಬೆರಳಚ್ಚು ತಜ್ಞರೊಂದಿಗೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ, ಡಿವೈಎಸ್‌ಪಿ ಸ್ನೇಹರಾಜ್ ಭೇಟಿ ನೀಡಿದ್ದರು.
ಈ ಬಗ್ಗೆ ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ಚಾಮರಾಜನಗರ ಮಹಿಳಾ ಪೊಲೀಸ್ ಠಾಣೆಯ ಸರ್ಕಲ್ ಇನ್‌ಸ್ಪೆಕ್ಟರ್ ಕೆ.ರಘು ಅವರಿಗೆ ಚಂದ್ರಶೇಖರಮೂರ್ತಿಯೇ ಕಳ್ಳತನ ಮಾಡಿರುವ ಅನುಮಾನ ವ್ಯಕ್ತವಾಗಿತ್ತು. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಾನೇ ಕೃತ್ಯ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಸೋಮವಾರ ಆತನ ಮನೆಯಲ್ಲಿ ಬಚ್ಚಿಟ್ಟಿದ್ದ 8.98 ಲಕ್ಷ ರೂ.ನಗದು ವಶಕ್ಕೆ ಪಡೆದರು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಯಾಧೀಶರ ಆದೇಶದಂತೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.