- ರೈತ ಸಂಘದ ಜಿಲ್ಲಾ ಸಂಚಾಲಕ ಶೈಲೇಂದ್ರ ಆರೋಪ
ಕೊಳ್ಳೇಗಾಲ: ಜನಸ್ನೇಹಿ ಪೊಲೀಸ್ ವ್ಯವಸ್ಥೆ ಜಾರಿಯಲ್ಲಿದ್ದರೂ ಕೊಳ್ಳೇಗಾಲ ಉಪವಿಭಾಗ ವ್ಯಾಪ್ತಿಯ ಕೆಲವು ಪೊಲೀಸ್ ಠಾಣೆಗಳಲ್ಲಿ ದಪ್ಪ ಚರ್ಮದ ಅಧಿಕಾರಿಗಳಿಂದ ನಾಗರಿಕರಿಗೆ ಗೌರವ ಮತ್ತು ನ್ಯಾಯ ಸಿಗುತ್ತಿಲ್ಲ. ಹಾಗಾಗಿ ಗೃಹ ಸಚಿವರು ನೊಂದವರಿಗೆ ನ್ಯಾಯ ಕೊಡಿಸಬೇಕೆಂದು ರೈತ ಸಂಘದ ಜಿಲ್ಲಾ ಸಂಚಾಲಕ ಶೈಲೇಂದ್ರ ಆಗ್ರಹಿಸಿದರು.
ಪೊಲೀಸ್ ಠಾಣೆಗೆ ಭೇಟಿ ನೀಡುವ ನಾಗರಿಕರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮವಹಿಸದೆ ಗಂಟೆಗಟ್ಟಲೆ ಕಾಯುವು ಕೆಲಸವಾಗುತ್ತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು
ನನ್ನ ಮನೆಗೆ ಬೇರೆಯವರು ಬಂದು ನನ್ನನ್ನು ಹೊರತಳ್ಳಿ ವಾಸ ಮಾಡುತ್ತಿದ್ದಾರೆ ಎಂದು ಮಾರ್ಟಳ್ಳಿ ನಿವಾಸಿ ಮೋಕ್ಷರಾಣಿ ಏ.16 ರಂದು ರಾಮಾಪುರ ಠಾಣೆಗೆ ದೂರು ನೀಡಿದ್ದಾರೆ. ಡಿವೈಎಸ್ಪಿ ಅವರಿಗೆ 11 ದಿನದ ಹಿಂದೆ ದೂರು ನೀಡಿದ್ದಾರೆ. ಆದರೆ ಈವರೆಗೂ ಕ್ರಮವಾಗಿಲ್ಲ. ಪೊಲೀಸರು ಇದನ್ನು ಸಿವಿಲ್ ವಿಚಾರ ಎಂದೇಳುತ್ತಾರೆ. ವಾಸವಿದ್ದ ಮನೆಯಿಂದ ಮಹಿಳೆಯನ್ನು ಹೊರ ಹಾಕಿರುವ ವಿಚಾರ ಹೇಗೆ ಸಿವಿಲ್ ಆಗುತ್ತದೆ. ಮಹಿಳೆಯನ್ನು ಮುಟ್ಟಿ ಹೊರ ಹಾಕಿರುವುದು, ವಾಸವಿದ್ದ ಮನೆಗೆ ಅತಿಕ್ರಮ ಪ್ರವೇಶ ಮಾಡಲಾಗಿದೆ. ವಿಪರ್ಯಾಸವೆಂದರೆ ಠಾಣೆ ಇನ್‌ಸ್ಪೆಕ್ಟರ್ ಚಿಕ್ಕರಾಜಶೆಟ್ಟಿ ದೂರುದಾರೆ ಮೋಕ್ಷರಾಣಿ ಮೇಲೆ ಹಲ್ಲೆ ಮಾಡುವಂತೆ ಪ್ರಚೋದನೆ ನೀಡಿದ್ದಾರೆ. ಅಕ್ರಮವಾಗಿ ಮನೆಯೊಳಗೆ ಪ್ರವೇಶ ಮಾಡಿರುವವರ ಪರ ಇನ್‌ಸ್ಪೆಕ್ಟರ್ ನಿಂತಿರುವುದು ಅನುಮಾನ ಮೂಡಿಸಿದೆ. ಹಾಗಾಗಿ ಅವರನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿದರು.
ಮೊಳಗನಕಟ್ಟೆ ಗ್ರಾಮದ ವಿಜಯಲಲಿತಾ ಅವರು ಫೆ.2 ರಂದು ಮನೆಯಲ್ಲಿದ್ದ ವೇಳೆ ಮುಖಕ್ಕೆ ಮಾಸ್ಕ್, ಕೈಗೆ ಗ್ಲೌಸ್ ಧರಿಸಿ ಬಂದ 3 ಪುರುಷರು ಆಕೆಯ ಕೈಹಿಡಿದು ಬಲವಂತವಾಗಿ ಸೀಲ್‌ನಿಂದ ಬೆರಳು ಅಚ್ಚೆ ಪಡೆದುಕೊಂಡಿದ್ದಾರಲ್ಲದೆ, ಪೊಲೀಸರಿಗೆ ದೂರು ನೀಡಿದರೆ ನಿನ್ನ ಮೇಲೆ ದೂರು ಹಾಕಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿ 3 ತಿಂಗಳಾದರೂ ಪಿಎಸ್‌ಐ ಸುಪ್ರೀತ್ ಅಪರಿಚಿತರನ್ನು ಪತ್ತೆ ಮಾಡಿಲ್ಲ. ಜಕ್ಕಳಿ ಗ್ರಾಮದಲ್ಲಿ ವಾಸವಿರುವ ಹಿರಿಯ ನಾಗರಿಕರೊಬ್ಬರು ಆಸ್ತಿ ವಿಚಾರವಾಗಿ ದೂರು ನೀಡಿದರೂ ಕ್ರಮವಾಗಿಲ್ಲ. ಮಹಿಳೆಯರು, ಹಿರಿಯ ನಾಗರಿಕರಿಗೆ ಪೊಲೀಸ್ ಠಾಣೆಗಳಲ್ಲಿ ನ್ಯಾಯ ಸಿಗುತ್ತಿಲ್ಲ ಎಂದರು.
ಮಹಿಳೆಯರಿಗೆ ಅನ್ಯಾಯ ಆಗುತ್ತಿರುವುದನ್ನು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಗಮನಹರಿಸಿ ಕ್ರಮವಹಿಸಬೇಕು. ಗೃಹ ಸಚಿವ ಪರಮೇಶ್ವರ್ ಕೂಡ ತಮ್ಮ ಇಲಾಖೆಯನ್ನು ಹದ್ದುಬಸ್ತಿನಲ್ಲಿಡಬೇಕು. ಜಿಲ್ಲಾ ಉಸ್ತುವಾರಿ ಕೆ.ವೆಂಕಟೇಶ್, ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ, ಹನೂರು ಶಾಸಕ ಎಂ.ಆರ್.ಮಂಜುನಾಥ್ ಅವರು ಪೊಲೀಸ್ ಇಲಾಖೆಗೆ ಸೂಚನೆ ನೀಡಬೇಕು. ಇಲ್ಲವಾದರೆ ರೈತ ಸಂಘ ಪ್ರತಿಭಟನೆ ಮಾಡಲಿದೆ ಎಂದು ಎಚ್ಚರಿಸಿದರು.
ಮದ್ಯ ಅಕ್ರಮ ಮಾರಾಟ: ರೈತ ಮುಖಂಡ ಪೆರಿಯನಾಯಗಂ ಮಾತನಾಡಿ, ಕುರುಬನಕಟ್ಟೆಯಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ವೈನ್‌ಶಾಪ್‌ನಲ್ಲಿ ಸಿಗುವ ಎಲ್ಲ ಮದ್ಯವನ್ನು ಮಾರಾಟ ಮಾಡಲಾಗುತ್ತಿದೆ. ಅಬಕಾರಿ ಅಧಿಕಾರಿಗಳು ಮತ್ತು ಕೊಳ್ಳೇಗಾಲ ಗ್ರಾಮಾಂತರ ಪೊಲೀಸರ ಗಮನಕ್ಕೆ ತರಲಾಯಿತಾದರೂ ಮಾಹಿತಿದಾರರ ಗೌಪ್ಯತೆಯನ್ನು ಕಾಪಾಡುತ್ತಿಲ್ಲ. ಇಂತಹವರೇ ಹೇಳಿದ್ದಾರೆ ಎಂದು ಅಕ್ರಮ ಎಸಗಿರುವವರಿಗೆ ಹೇಳುತ್ತಿದ್ದಾರೆ ಎಂದರು.
ರೈತ ಸಂಘದ ತಾಲೂಕು ಅಧ್ಯಕ್ಷ ರಾಜು ಮೋಳೆ, ಉಪಾಧ್ಯಕ್ಷ ವಾಸು, ವಿನ್ನರಸ, ವಸಂತ್‌ಕುಮಾರ್, ಪೆರಿಯನಾಯಗಂ, ಲಾರೆನ್ಸ್, ಮುತ್ತುರಾಮ ಸುದ್ದಿಗೋಷ್ಠಿಯಲ್ಲಿದ್ದರು.