ಹನೂರಿನಲ್ಲಿ ಗಣಪತಿ ಮೂರ್ತಿ ವಿಸರ್ಜನೆ ಸಂಬಂಧ ಇನ್ಸ್‌ಪೆಕ್ಟರ್ ಆನಂದಮೂರ್ತಿ ಅವರು ಪೊಲೀಸ್ ಹಾಗೂ ಗೃಹರಕ್ಷಕ ಸಿಬ್ಬಂದಿಯನ್ನು ನಿಯೋಜಿಸಿ ಮಾತನಾಡಿದರು. ರವಿ, ಕೃಷ್ಣ, ವಿಶ್ವನಾಥ್ ಇತರರಿದ್ದರು.  
ಚಾಮರಾಜನಗರ

ಗಣಪತಿ ಮೂರ್ತಿ ವಿಸರ್ಜನಾ ವೇಳೆ ಶಾಂತಿ ಪಾಲಿಸಿ

ಎ. ಆರ್. ರಘುರಾಮ
ಹನೂರು : ಗಣಪತಿ ಮೂರ್ತಿ ವಿಸರ್ಜನಾ ಸಂದರ್ಭ ಪ್ರತಿಯೊಬ್ಬರೂ ಶಾಂತಿ ಪಾಲನೆಗೆ ಸಹಕರಿಸಬೇಕು ಎಂದು ಇನ್ಸ್‌ಪೆಕ್ಟರ್ ಸಿ. ಆನಂದಮೂರ್ತಿ ತಿಳಿಸಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬುಧವಾರ ಗಣೇಶ ಮೂರ್ತಿ ವಿಸರ್ಜನೆ ಸಂಬಂಧ ಆಯಕಟ್ಟನ ಸ್ಥಳಗಳಿಗೆ ಪೊಲೀಸ್ ಹಾಗೂ ಗೃಹ ರಕ್ಷಕ ಸಿಬ್ಬಂದಿಯನ್ನು ನಿಯೋಜಿಸಿ ಮಾತನಾಡಿದರು.
ಪೊಲೀಸ್ ಠಾಣಾ ವ್ಯಾಪ್ತಿಯ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಕೆಲವು ಗ್ರಾಮಗಳಲ್ಲಿ 5ನೇ ದಿನಕ್ಕೆ ವಿಸರ್ಜನೆಯಾಗಲಿವೆ. ಮೆರವಣಿಗೆ ವೇಳೆ ಹಬ್ಬದ ವಾವರಣವಿರುತ್ತದೆ. ಯುವಜನರು ಹೆಚ್ಚಾಗಿ ಭಾಗಿಯಾಗಲಿದ್ದಾರೆ. ಕಾನೂನು ಸುವ್ಯವಸ್ಥೆಯೊಂದಿಗೆ ಸಾರ್ವಜನಿಕರ ಹಿತ ಕಾಪಾಡುವುದು ಎಲ್ಲರ ಕರ್ತವ್ಯ ಎಂದರು.
ಪ್ರತಿಯೊಬ್ಬ ಪೊಲೀಸ್ ಮತ್ತು ಗೃಹರಕ್ಷಕ ಸಿಬ್ಬಂದಿ ನಿಯೋಜಿತ ಸ್ಥಳದಲ್ಲೇ ಖುದ್ದು ಇರಬೇಕು. ಸಾರ್ವಜನಿಕರು ಹಾಗೂ ಸಂಘಟಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ನೂಕು ನುಗ್ಗಲು ಉಂಟಾಗದಂತೆ ನೋಡಿಕೊಳ್ಳಬೇಕು. ಸಾರ್ವಜನಿಕರಿಗೆ ಅಡ್ಡಿಯಾಗದಂತೆ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು. ಸೂಕ್ಷ್ಮ ಸ್ಥಳ ಹಾಗೂ ವಿಸರ್ಜನಾ ಸ್ಥಳದಲ್ಲಿ ಹೆಚ್ಚಿನ ನಿಗಾ ವಹಿಸಬೇಕು. ಒಂದು ವೇಳೆ ಸಮಸ್ಯೆ ಇದ್ದಲ್ಲಿ ಕೂಡಲೇ ನಮ್ಮ ಗಮನಕ್ಕೆ ತರಬೇಕು. ಇದರಲ್ಲಿ ಯಾವುದೇ ನಿರ್ಲಕ್ಷ್ಯ ಸಲ್ಲದು. ಒಟ್ಟಿನಲ್ಲಿ ಗಣೇಶ ಮೂರ್ತಿ ವಿಸರ್ಜನೆ ಯಶಸ್ವಿಯಾಗಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಬ್ ಇನ್ಸ್‌ಪೆಕ್ಟರ್ ರವಿ, ಎಎಸೈ ಕೃಷ್ಣ ಹಾಗೂ ಇನ್ನಿತರರಿದ್ದರು.