ಚಾಮರಾಜನಗರದ ಡಾ.ರಾಜ್‌ಕುಮಾರ್ ರಂಗಮಂದಿರದಲ್ಲಿ ಶನಿವಾರ ಕವಿ ಮತ್ತು ಪತ್ರಕರ್ತ ಆ.ಸಿ.ಮ (ಮಣಿಕಂಠ ಆಲೂರು) ಅವರ ಎರಡನೇ ಕೃತಿ ಶಂಖು ನುಡಿದಾವೋ ಬಿಡುಗಡೆ ಮಾಡಲಾಯಿತು. ಡಾ.ರವಿಕುಮಾರ್ ಬಾಗಿ, ಶಂಕನಪುರ ಮಹದೇವ್, ಮಹೇಶ್ ಕುದರ್, ದೀಪಾ ಬುದ್ಧೆ, ವೆಂಕಟರಮಣಸ್ವಾಮಿ, ಶಿವು ಜನ್ನೂರು, ಶಿವಶಂಕರ್ ಚಟ್ಟು ಇತರರು ಇದ್ದರು. 
ಚಾಮರಾಜನಗರ

ಕವಿಗಳು ಸಮಾಜದ ಕಣ್ಣುಗಳಾಗಿ

ಪ್ರಮುಖ ಮುಖ್ಯಾಂಶಗಳು

  • ವಿಮರ್ಶಕ ಡಾ.ರವಿಕುಮರ್ ಬಾಗಿ ಅಭಿಮತ
  • ಸಾಹಿತಿ ಆ.ಸಿ.ಮ ಅವರ ಶಂಖು ನುಡಿದಾವೋ ಕವನ ಸಂಕಲನ ಬಿಡುಗಡೆ
ಚಾಮರಾಜನಗರ: ಸೃಜನಶೀಲ ಕವಿ ಕಾಲ ಸೃಷ್ಟಿಸುವ ಕೇಡುಗಳಿಗೆ ಕಣ್ಣು, ಕಿವಿಯಾಗಬೇಕೆಂದು ವಿಮರ್ಶಕ ಡಾ.ರವಿಕುಮಾರ್ ಬಾಗಿ ತಿಳಿಸಿದರು.
ನಗರದ ಡಾ.ರಾಜ್‌ಕುಮಾರ್ ರಂಗ ಮಂದಿರದಲ್ಲಿ ಆತ್ಮೀಯ ರಂಗ ಪ್ರಯೋಗಾಲಯ ಟ್ರಸ್ಟ್ ಹಾಗೂ ಸುಮಾ ಪ್ರಕಾಶನದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಕವಿ ಮತ್ತು ಪತ್ರಕರ್ತ ಆ.ಸಿ.ಮ (ಮಣಿಕಂಠ ಆಲೂರು) ಅವರ ಎರಡನೇ ಕೃತಿ ಶಂಖು ನುಡಿದಾವೋ ಬಿಡುಗಡೆ ಮಾಡಿ ಮಾತನಾಡಿದರು.
ಕವಿಯಾಗುವುದೆಂದರೆ ಸೂಕ್ಷ್ಮವಾಗುವುದು. ಸೃಜನಶೀಲ ಕವಿ ಕಲ್ಲಿನಿಂದಲೂ ಮಾತು ಬರಿಸಬಲ್ಲ. ಕವಿ ಆ.ಸಿ.ಮ ಅವರ ಶಂಖು ನುಡಿದಾವೋ ಕವನ ಸಂಕಲನದಲ್ಲಿ ಸಿಟ್ಟು, ಆಕ್ರೋಶ, ಹತಾಶೆ, ಅಸಹಾಯಕತೆ, ಭಾವುತಕೆ ಇದೆ. ಪದ್ಯಗಳು ನ್ಯಾಯವನ್ನು ಕೇಳುತ್ತಾ ಅನ್ಯಾಯವನ್ನು ಪ್ರತಿಭಟಿಸುತ್ತವೆ. ಕವಿತೆಗಳೂ ಓದುಗರ ಸಂವೇದನೆಯನ್ನು ವಿಸ್ತರಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಕನ್ನಡ ರಾಜ್ಯೋತ್ಸವ ಪುರಸ್ಕೃತ ಸಾಹಿತಿ ಶಂಕನಪುರ ಮಹದೇವ್ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಜಿಲ್ಲೆಯಲ್ಲಿ ಸ್ಥಳೀಯ ಭಾಷೆ ಮತ್ತು ಸೊಗಡನ್ನು ಸಾಹಿತ್ಯದಲ್ಲಿ ಪ್ರತಿಬಿಂಬಿಸುವ, ಅಭಿವ್ಯಕ್ತಿ ಮಾಡುವ ಕವಿಗಳಿದ್ದಾರೆ. ಇವರಲ್ಲಿ ಕವಿ ಆ.ಸಿ.ಮ ಅವರ ಕವಿತೆಗಳ ಪ್ರಸ್ತುತವಾಗಿವೆ. ನಾನು ಅವರ ಕವಿತೆಗಳನ್ನು ಬಹಳ ಕುತೂಹಲದಿಂದ ಓದುತ್ತೇನೆ ಎಂದರು.
ಜಿಲ್ಲೆಯ ಕವಿಗಳು, ಕಥೆಗಾರರಿಗೆ ಇದೊಂದು ಪರ್ವ ಕಾಲ. ಸಮಾನತೆ, ಸಹಬಾಳ್ವೆ, ಜ್ಯಾತ್ಯಾತೀತತೆ, ಸಂವಿಧಾನದ ಆಶಯವನ್ನು ಪ್ರತಿಪಾದಿಸುವ ಬರಹಗಳನ್ನು ನಮಗೆ ಕೊಡುತ್ತಾ ಬಂದಿದ್ದಾರೆ. ಈ ಪರ್ವ ಕಾಲದಲ್ಲಿ ಪ್ರೀತಿ, ಕರುಣೆ, ಮೈತ್ರಿ ಸಾಹಿತ್ಯ ಲೋಕದಲ್ಲಿ ಪ್ರಧಾನ ನೆಲೆಯಾಗಬೇಕು. ಇಲ್ಲದಿದ್ದರೆ ದ್ವೇಷವಯನ್ನು ಕೊನೆಗಾಣಿಸಲು ಸಾಧ್ಯವಿಲ್ಲ. ಕಾವ್ಯ ಮನುಷ್ಯರನ್ನು ಬೆಸೆಯಬೇಕು ಎಂದು ಹೇಳಿದರು.
ಹಿರಿಯ ದಲಿತ ಪರ ಹೋರಾಟಗಾರ ವೆಂಕಟರಮಣಸ್ವಾಮಿ ಪಾಪು ಮಾತನಾಡಿ, ದುಃಖ ಬಂದಾಗ ಕಣ್ಣೀರು ಹಾಕದ, ಸುಖ ಬಂದಾಗ ಸಂತೋಷ ವ್ಯಕ್ತಪಡಿಸದೆ ಇರುವ ಭಾವರಹಿತರು ಸಮಾಜಕ್ಕೆ ಮಾರಕ. ಕವಿಗಳು ಭಾವಜೀವಿಗಳು. ಸೂಕ್ಷ್ಮ ಪ್ರಜ್ಞೆ ಇರುವವರು ಮಾತ್ರ ಸಾಹಿತಿಗಳಾಗಲು ಸಾಧ್ಯ. ಕವಿ ಆ.ಸಿ.ಮ ಭಾವುಕ ಜೀವಿ. ಶೋಷಿತ ಸಮುದಾಯ ಇಲ್ಲದಿದ್ದರೆ ಜಾನಪದ ಹುಟ್ಟುತ್ತಿರಲಿಲ್ಲ. ಮಡಿವಂತಿಕೆ ಸಾಹಿತ್ಯ ಕ್ಷೇತ್ರವನ್ನು ಬೆಳೆಯಲು ಬಿಡುವುದಿಲ್ಲ. ತೆರೆದ ಮನಸ್ಸಿನಿಂದ ಸಾಹಿತ್ಯ ಓದಬೇಕು ಎಂದು ತಿಳಿಸಿದರು.
ಉದ್ಯಮಿ ಮಹೇಶ್ ಕುದರ್ ಮಾತನಾಡಿ, ಕವಿ ಆ.ಸಿ.ಮ ಅವರಿಗೆ ಪ್ರತಿಭೆ, ಬರವಣಿಗೆಯೇ ಶಕ್ತಿ.
ಪತ್ರಕರ್ತರಾಗಿ ಸಾಹಿತ್ಯ ಕ್ಷೇತ್ರದಲ್ಲೂ ತೊಡಗಿಕೊಂಡಿದ್ದಾರೆ. ಸಮಾಜದ ನೈಜತೆಯನ್ನು ಕವಿತೆಗಳಲ್ಲಿ ಪರಿಣಾಮಕಾರಿ ಬರೆಯುತ್ತಾರೆ ಎಂದು ಹೇಳಿದರು.
ಸಮತಾ ಸೊಸೈಟಿ ಅಧ್ಯಕ್ಷೆ ದೀಪಾ ಬುದ್ಧೆ ಮಾತನಾಡಿ, ಸಾಹಿತ್ಯ ಸಂಕುಚಿತ ಮನೋಭಾವ ತೊರೆದು ವಿಶಾಲ ಮನೋಭಾವ ಬೆಳೆಸಿಕೊಳ್ಳಬೇಕು.ಲಿಂಗತ್ವ ಅಲ್ಪಸಂಖ್ಯಾತರನ್ನು ಒಳ್ಳೆಯ ಕಾರ್ಯಗಳಸಿ ಕೊಳ್ಳಬೇಕು.ಮಡಿವಂತಿಕೆಯ ಸಾಹಿತ್ಯ ಬಿಟ್ಟು ಹೋಗಬೇಕು ಎಂದು ಹೇಳಿ ಶಂಕು ನುಡಿದಾವೋ ಕವನ ಸಂಕಲದನ ಕವಿತೆಯನ್ನು ಓದಿದರು. ಸಾಹಿತಿ ಮಂಜು ಕೋಡಿಉಗನೆ ಮಾತನಾಡಿ, ಕಾಲದ ಮನೋಗುಣದಲ್ಲಿ ಎಲ್ಲ ಸಾಧ್ಯತೆಗಳನ್ನು ಕವಿ ಬರೆಯಬಲ್ಲ. ಸಾಮಾಜಿಕವಾಗಿ ಆಲೋಚನೆ ಮಾಡಿದರೆ ಕವಿಯಾಗಬಹುದು. ಕವಿ ಆ.ಸಿ.ಮ ಅವರ ಕವಿತೆಗಳು ಪರಂಪರೆಯ ಕುರುಹುಗಳನ್ನು ಆಲೋಚನೆ ಮಾಡುವುದರಿಂದ ಸದಾಕಾಲ ಜೀವಂತವಾಗಿ ಇರುತ್ತವೆ ಎಂದರು. ಆತ್ಮೀಯ ರಂಗ ಪ್ರಯೋಗಾಲಯ ಟ್ರಸ್ಟ್‌ನ ಅಧ್ಯಕ್ಷ ಶಿವು ಜನ್ನೂರು, ಶಿವಶಂಕರ್ ಚಟ್ಟು, ಜ್ಯೋತಿಗೌಡನಪುರ ನಾಗೇಂದ್ರ, ರಾಮಸಮುದ್ರ ಬಾಬು, ಅರ್ಜುನ್ ಇತರರು ಇದ್ದರು.