ಬೆಂಗಳೂರಿನಲ್ಲಿ ಆಯೋಜಿಸಿದ್ದ ಸಂಸ್ಕೃತ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರಿಗೆ ರಾಜ್ಯಪಾಲ ಥಾವರ್ ಚಂದ್ ಗೇಹ್ಲೋಟ್ ಪಿಎಚ್.ಡಿ ಪದವಿ ಪ್ರದಾನ ಮಾಡಿದರು. ಡಾ.ಸಿ.ಎಸ್ ಮಂಜುನಾಥ್, ಆಹಲ್ಯ, ಗಿರೀಶ್ ಚಂದ್ರ ಇದ್ದರು.
ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು ಮಂಡಿಸಿದ ಮಹಾ ಪ್ರಬಂಧಕ್ಕೆ ಮಂಗಳವಾರ ವಿಶ್ವವಿದ್ಯಾಲಯದ ಕುಲಪತಿಯೂ ಆದ ರಾಜ್ಯಪಾಲ ಥಾವರ್ ಚಂದ್ ಗೇಹ್ಲೋಟ್ ಪಿಎಚ್.ಡಿ ಪದವಿ ಪ್ರದಾನ ಮಾಡಿದರು.
ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ 12 ಮತ್ತು 13ನೇ ಘಟಿಕೋತ್ಸವದಲ್ಲಿ ಶ್ರೀಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಶ್ರೀಗಳು ವೇದಾಂತ ವಿಭಾಗದಲ್ಲಿ ಪ್ರತಿಪಾದಿಸಿರುವ ಅಂಶುಮದಾಗಮ ಸಂಪದನಾತ್ಮಕಮಧ್ಯಯನಮ್ ಸಂಶೋಧನಾ ಪ್ರಬಂಧಕ್ಕೆ ಕುಂದೂರು ಮಠದ ಪೀಠಾಧಿಪತಿ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೂ ಆಗಿರುವ ವಿದ್ವಾನ್ ಡಾ.ಶರತ್ ಚಂದ್ರ ಸ್ವಾಮೀಜಿ ಮಾರ್ಗದರ್ಶಕರಾಗಿದ್ದರು. 84 ಅಧ್ಯಾಯವನ್ನು ಒಳಗೊಂಡಿರುವ ಈ ಮಹಾ ಪ್ರಬಂಧಕ್ಕೆ ಮಾ.2 ರಂದು ಸಂಸ್ಕೃತ ವಿಶ್ವವಿದ್ಯಾಲಯದಿಂದ 2024ನೇ ಸಾಲಿನ ಸಂಸ್ಕೃತ ಗ್ರಂಥ ಪುರಸ್ಕಾರವೂ ಲಭಿಸಿತ್ತು.
ಘಟಿಕೋತ್ಸವದಲ್ಲಿ ಬೆಂಗಳೂರು ಗ್ರಾಮಾಂತ ಸಂಸದ ಡಾ. ಸಿ.ಎಸ್ ಮಂಜುನಾಥ್, ಉಪ ಕುಲಪತಿ ಆಹಲ್ಯ ಹಾಗೂ ಕುಲ ಸಚಿವ ಗಿರೀಶ್ ಚಂದ್ರ ಇದ್ದರು.
ಪ್ರಬಂಧದಲ್ಲಿನ ವಿಷಯಗಳು: ಪ್ರಬಂಧದಲ್ಲಿ ಪರಿಪೂರ್ಣವಾಗಿ ದೇಗುಲ, ಪೂಜಾದಿ ಆರಂಭ, ಸಕಳ ಸ್ಥಾಪನ, ಅತ್ಯಾರ್ಥಯಜನ ಪವಿತ್ರ ವಿಧಿ, ಪಂಚಾಮೃತ ವಿಧಿ, ಚೂರ್ಣೋತ್ಸವ ವಿಧಿ, ಪರಸುಪ್ರತ್ತಯ ವಿಧಿ, ಪಾದ್ಯಾದಿವಿಧಿಗಳು ಸುವಿಸ್ತಾರವಾಗಿ ವರ್ಣಿತವಾಗಿವೆ. ವಿವಿಧ ದೇವತೆಗಳಿಗೆ ಸಂಬಂಧಿಸಿದ ಅರ್ಚನಾ ಕ್ರಮಗಳ ವಿವರಗಳಿವೆ. ವಿನಾಯಕ ವ್ರತ, ಮುಖಲಿಂಗಾರ್ಚನ, ಗೌರೀಪವಿತ್ರ ವಿಧಿ, ನಕ್ಷತ್ರ ಪೂಜಾ ವಿಧಿ. ಅರ್ಧನಾರೀಶ್ವರ ಪೂಜಾ ವಿಧಿ. ಚಂದೇಕಾರ್ಚನ ವಿಧಿ ಮಹಾಶಾಂತಿ ವಿಧಿ, ದೇವೀಪೂಜಾ ವಿಧಿಯೂ ಇದೆ. ಈ ಆಗಮದಲ್ಲಿ ದೇಗುಲಗಳ ನಿರ್ಮಾಣ, ಮೂರ್ತಿ ನಿರ್ಮಾಣದ ವಿಧಾನ, ಸೇನಾಸ್ಥಂಭ, ಅಶ್ವಸ್ತಂಭಗಳ ಸ್ಥಾಪನೆ ಇತ್ಯಾದಿ ವಿವರಗಳಿವೆ. ಜತೆಗೆ ರುದ್ರಾಕ್ರ ಭಸ್ಮಾದಿ ವಿಧಿಗಳು, ಕೃತ್ತಿಕಾದೀಪ ವಿಧಿ, ವಿವಿಧ ಪ್ರಾಯಶ್ಚಿತ್ರಗಳು, ಪ್ರದೋಷ, ಪೂಜಾದಿ ವಿಧಿಗಳೂ ಸವಿಸ್ತಾರವಾಗಿವೆ.