ಹನೂರಿನ ತಹಸೀಲ್ದಾರ್ ಕಚೇರಿಯ ಆವರಣದಲ್ಲಿನ ಅಭಿಲೇಖಾಲಯದಲ್ಲಿ ಅಗತ್ಯ ದಾಖಲೆ ಪಡೆಯಲು ಜನರು ಬಿಸಿಲಿನಲ್ಲಿ ಕಾದು ನಿಂತಿರುವುದು.
- ಮೂಲಸೌಕರ್ಯ ಕಲ್ಪಿಸುವಂತೆ ಒತ್ತಾಯ
- ದಾಖಲೆ ಪತ್ರ ಪಡೆಯಲು ಪರದಾಟ
ಹನೂರು: ಪಟ್ಟಣದ ತಹಸೀಲ್ದಾರ್ ಕಚೇರಿಯ ಆವರಣದಲ್ಲಿನ ಅಭಿಲೇಖಾಲಯದಲ್ಲಿ ನೆರಳು ಹಾಗೂ ಕುಡಿಯುವ ನೀರಿನ ಸೌಕರ್ಯ ಇಲ್ಲದ ಪರಿಣಾಮ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.
ಈ ಹಿಂದೆ ಕೊಳ್ಳೇಗಾಲ ತಾಲೂಕಿಗೆ ಸೇರಿದ್ದ ಹನೂರಿನಲ್ಲಿ ವಿಶೇಷ ತಹಸೀಲ್ದಾರ್ ಕಚೇರಿ ತೆರೆಯಲಾಗಿತ್ತು. ಆದರೆ ಅಗತ್ಯ ಭೂ ದಾಖಲೆಗಳು ಕೊಳ್ಳೇಗಾಲದ ಕಚೇರಿಯಲ್ಲೇ ಇರಿಸಲಾಗಿತ್ತು. 2018ರಲ್ಲಿ ಹನೂರು ಹೊಸ ತಾಲೂಕಾಗಿ ರಚನೆಯಾದ ಬಳಿಕ ಇಲ್ಲಿ ತಹಸೀಲ್ದಾರ್ ಕಚೇರಿ ರೂಪುಗೊಂಡಿತು. 2021ರಲ್ಲಿ ಈ ಭಾಗದ ದಾಖಲೆಗಳನ್ನು ಹನೂರಿಗೆ ಸ್ಥಳಾಂತರಿಸಲಾಯಿತು. ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಅಭಿಲೇಖಾಲಯ ಕಚೇರಿಯನ್ನು ತೆರೆಯಲಾಗಿದ್ದು, ಪ್ರಸ್ತುತ ಪಿಡಬ್ಲ್ಯುಡಿ ಕಟ್ಟಡವೊಂದರಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದರೆ ಇಲ್ಲಿ ನೆರಳು ಹಾಗೂ ಕುಡಿಯುವ ನೀರಿನ ಸೌಕರ್ಯ ಇಲ್ಲದ ಪರಿಣಾಮ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ.
ಬಿಸಿಲಿನಲ್ಲಿ ಕಾದು ನಿಲ್ಲಬೇಕು: ಅಭಿಲೇಖಾಲಯ ಕಚೇರಿಗೆ ಸುಮಾರು 100 ಕಿ.ಮೀ ಹೆಚ್ಚು ಅಂತರವನ್ನು ಹೊಂದಿರುವ ತಾಲೂಕಿನ ಗೋಪಿನಾಥಂ, ಇತರ ಗ್ರಾಮಗಳಿಂದ ಸಾರ್ವಜನಿಕರು ಭೂ ದಾಖಲೆಯನ್ನು ಪಡೆಯಲು ಆಗಮಿಸುತ್ತಾರೆ. ಆದರೆ ಸೌಕರ್ಯ ಕಲ್ಪಿಸದ ಪರಿಣಾಮ ಕಟ್ಟಡದ ಹೊರ ಭಾಗದ ಕಿಟಕಿ ಮೂಲಕವೇ ಸಾರ್ವಜನಿಕರು ಗಂಟೆಗಟ್ಟಲೇ ನಿಂತುಕೊಂಡೇ ದಾಖಲೆ ಪಡೆಯಬೇಕು, ನೆರಳಿನ ಸೌಕರ್ಯವನ್ನೂ ಕಲ್ಪಿಸಿಲ್ಲ. ಇದರಿಂದ ಜನರು ಬಿಸಿಲಿನಲ್ಲೇ ಕಾದು ನಿಲ್ಲಬೇಕಿದೆ. ಮಳೆ ಬಂದ ವೇಳೆ ಸಮೀಪದ ಕಟ್ಟಡವನ್ನು ಆಶ್ರಯಿಸುವಂತಾಗಿದೆ. ಇದರಿಂದ ಸಾರ್ವಜನಿಕರು ಅದರಲ್ಲೂ ವಯೋವೃದ್ಧರು ಹೆಚ್ಚಿನ ತೊಂದರೆ ಅನುಭವಿಸುವಂತಾಗಿದೆ. ಕುಡಿಯುವ ನೀರಿನ ಸೌಕರ್ಯವಿಲ್ಲದ ಪರಿಣಾಮ ಸಾರ್ವಜನಿಕರಿಗೆ ಅಗತ್ಯ ಮೂಲಸೌಕರ್ಯ ಇಲ್ಲದಂತಾಗಿದ್ದು, ತೊಂದರೆ ಅನುಭವಿಸುವಂತಾಗಿದೆ.
ನೆರಳು ಹಾಗೂ ಕುಡಿಯುವ ನೀರಿನ ಸೌಕರ್ಯ ಕಲ್ಪಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ. ಆದ್ದರಿಂದ ಅಧಿಕಾರಿಗಳು ಇನ್ನಾದರೂ ಇತ್ತ ಗಮನಹರಿಸಿ ಅಗತ್ಯ ಮೂಲ ಸೌಕರ್ಯ ಕಲ್ಪಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.