ಚಾಮರಾಜನಗರದ ಸಂತೇಮರಹಳ್ಳಿ ವೃತ್ತದಲ್ಲಿ ತಂಗುದಾಣವಿಲ್ಲದೇ ಅಂಗಡಿ ಮುಂಗಟ್ಟುಗಳ ಮುಂದೆ ಪ್ರಯಾಣಿಕರು ಕಾಯುತ್ತಿರುವುದು
- ಜಿಲ್ಲಾ ಕೇಂದ್ರದಲ್ಲೇ ಸೌಕರ್ಯ ಕೊರತೆ
- ಬಿಸಿಲು, ಮಳೆಯಲ್ಲೇ ಕಾಯಬೇಕಿದೆ ಪ್ರಯಾಣಿಕರು
- ಟ್ರಾಫಿಕ್ ಸಮಸ್ಯೆಯೇ ಹೆಚ್ಚು
ಚಾಮರಾಜನಗರ: ಜಿಲ್ಲಾ ಕೇಂದ್ರದ ಪ್ರಮುಖ ರಸ್ತೆಗಳಲ್ಲಿ ಸಮರ್ಪಕವಾದ ಬಸ್ ತಂಗುದಾಣಗಳು ಇಲ್ಲದೇ ಪ್ರಯಾಣಿಕರು ನಿತ್ಯವೂ ತೊಂದರೆ ಅನುಭವಿಸುತ್ತಿದ್ದಾರೆ.
ನಗರದ ಡಿವಿಯೇಷನ್ ರಸ್ತೆಯಲ್ಲಿರುವ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣವನ್ನು ಹೊರತುಪಡಿಸಿದರೇ, ಪ್ರಮುಖ ರಸ್ತೆಗಳಲ್ಲಿ ಬಸ್ ತಂಗುದಾಣಗಳು ಇಲ್ಲದೇ ಪ್ರಯಾಣಿಕರು ಅಂಗಡಿ-ಮುಂಗಟ್ಟು, ಗಿಡ-ಮರಗಳ ಕೆಳಗೆ ನಿಂತು ಬಸ್‌ಗಳಿಗೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಚಾಮರಾಜನಗರದಿಂದ ನಂಜನಗೂಡು ಮತ್ತು ಮೈಸೂರು ಕಡೆಗೆ ಹೋಗುವವರು, ಎಲ್‌ಐಸಿ ವೃತ್ತದ ರಸ್ತೆ ಬದಿಯಲ್ಲಿ ನಿಲ್ಲುತ್ತಾರೆ. ಸಂತೇಮರಹಳ್ಳಿ, ಯಳಂದೂರು, ಕೊಳ್ಳೇಗಾಲ, ತಿ.ನರಸೀಪುರ ಕಡೆಗೆ ಹೋಗುವವರು ಸಂತೇಮರಹಳ್ಳಿ ವೃತ್ತದಲ್ಲಿ ಬಸ್‌ಗಳಿಗೆ ಕಾಯುತ್ತಾರೆ. ಗುಂಡ್ಲುಪೇಟೆ ಕಡೆಗೆ ಹೋಗುವವರು ಗುಂಡ್ಲುಪೇಟೆ ವೃತ್ತ, ಹಳೇ ಆರ್‌ಟಿಓ ವೃತ್ತ ಹಾಗೂ ಕೆಎಸ್‌ಆರ್‌ಟಿಸಿ ಮುಂಭಾಗ ಹೆದ್ದಾರಿ ಬದಿಯಲ್ಲಿ ನಿಂತು ಬಸ್‌ಗಳಿಗೆ ಕಾಯುವಂತಾಗಿದೆ. ಹರದನಹಳ್ಳಿ, ಅಮಚವಾಡಿ, ತಮಿಳುನಾಡು ಭಾಗಗಳಿಗೆ ಹೋಗುವವರದ್ದೂ, ಇದೇ ಕಥೆಯಾಗಿದೆ. ಅದಲ್ಲದೇ ಶ್ರೀಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಹಾಗೂ ಇನ್ನಿತರೆ ಕಡೆಗಳಲ್ಲಿ ಬಸ್‌ತಂಗುದಾಣಗಳು ಇಲ್ಲದೇ ಪ್ರಯಾಣಿಕರು ರಸ್ತೆ ಬದಿಯಲ್ಲೇ ನಿಲ್ಲುವಂತಾಗಿದೆ.
ಕೆಲವು ಕಡೆಗಳಲ್ಲಿ ನೆಪಮಾತ್ರಕ್ಕೆ ಬಸ್ ತಂಗುದಾಣಗಳು ಇದ್ದೂ, ಅದು ಉಪಯೋಗಕ್ಕೆ ಬಾರದಂತಾಗಿದೆ. ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಸುವ ಜನರಿಗೆ ಬಸ್‌ತಂಗುದಾಣಗಳ ಸೌಲಭ್ಯ ಮರಿಚೀಕೆಯಾಗಿದೆ. ಇಷ್ಟಾದರೂ ಸಂಬಂಧಪಟ್ಟ ಜನಪ್ರತಿನಿಧಿಗಳು ಅಥವಾ ನಗರಸಭೆ ಸಮರ್ಪಕ ಬಸ್ ತಂಗುದಾಣಗಳನ್ನು ನಿರ್ಮಾಣ ಮಾಡಲು ಕ್ರಮವಹಿಸದೇ ಇರುವುದಕ್ಕೆ ಪ್ರಯಾಣಿಕರು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಕೇಂದ್ರದ ಪ್ರಮುಖ ರಸ್ತೆಗಳಲ್ಲಿ ಬಸ್‌ತಂಗುದಾಣಗಳನ್ನು ನಿರ್ಮಾಣ ಮಾಡುವ ಮೂಲಕ ಪ್ರಯಾಣಿಕರಿಗೆ ನೆರವಾಗುವಂತೆ ಒತ್ತಾಯಿಸಿದ್ದಾರೆ.
ಟ್ರಾಫಿಕ್ ಸಮಸ್ಯೆಯೇ ಹೆಚ್ಚು:
ನಗರದ ವಿವಿಧ ಪ್ರಮುಖ ರಸ್ತೆಗಳಲ್ಲಿ ಬಸ್ ತಂಗುದಾಣಗಳು ಇಲ್ಲದೇ, ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಶ್ರೀಭುವನೇಶ್ವರಿ ವೃತ್ತ, ಜಿಲ್ಲಾಸ್ಪತ್ರೆಯ ಮುಂಭಾಗ ಮತ್ತು ಸಂತೇಮರಹಳ್ಳಿ ವೃತ್ತಗಳಲ್ಲಿ ಬಸ್‌ಗಳು ರಸ್ತೆ ಬದಿಯಲ್ಲೇ ನಿಲ್ಲಿಸುವುದರಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಸಿಗ್ನಲ್ ಬಿಟ್ಟ ಬಳಿಕ ರಸ್ತೆ ಬದಿಯಲ್ಲಿ ಬಸ್‌ಗಳು ನಿಂತು ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದರಿಂದ ಹಿಂಬದಿಯ ವಾಹನಗಳು ಚಲಿಸಲು ತೊಂದರೆಯಾಗುತ್ತಿದೆ. ಇದರಿಂದ ದ್ವಿಚಕ್ರ ಮತ್ತು ಇನ್ನಿತರೆ ವಾಹನಗಳ ಸವಾರರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಶ್ರೀಭವನೇಶ್ವರಿ ವೃತ್ತ ಮತ್ತು ಸಂತೇಮರಹಳ್ಳಿ ವೃತ್ತಗಳ ಸಮೀಪದಲ್ಲೇ ವಾಹನಗಳು ನಿಲ್ಲುವುದರಿಂದ ವಾಹನಗಳ ಸಂಚಾರಕ್ಕೂ ತೊಡಕು ಉಂಟಾಗುತ್ತಿದೆ. ಒಟ್ಟಾರೆಯಾಗಿ ಯಾವುದೇ ರಸ್ತೆಗಳಲ್ಲೂ ಸಮರ್ಪಕವಾದ ತಂಗುದಾಣಗಳು ಇಲ್ಲದೇ, ಸಾರ್ವಜನಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಬಿಸಿಲಿನಲ್ಲೇ ನಿಂತುಕೊಂಡು ಬಸ್‌ಗಳಿಗೆ ಕಾಯಬೇಕಾಗಿದೆ.
ಕೆಲವೆಡೆ ಇದ್ದರೂ ಪ್ರಯೋಜನವಿಲ್ಲ:
ನಗರದ ಮೈಸೂರು ರಸ್ತೆಯಲ್ಲಿರುವ ಪಾಲಿಟೆಕ್ನಿಕ್ ಕಾಲೇಜಿನ ಬಳಿಲ್ಲಿ ಬಸ್ ತಂಗುದಾಣವನ್ನು ನಿರ್ಮಾಣ ಮಾಡಿದ್ದು, ಅದು ಪ್ರಯಾಣಿಕರಿಗೆ ಪ್ರಯೋಜನವಾಗುತ್ತಿಲ್ಲ.ಇನ್ನು ಜೆಎಸ್‌ಎಸ್ ಕಾಲೇಜಿನ ಮುಂಭಾಗ ರೋಟರಿ ಸಂಸ್ಥೆ ವತಿಯಿಂದ ನಿರ್ಮಾಣ ಮಾಡಿರುವ ಬಸ್ ತಂಗುದಾಣವೂ ಕೂಡ ವ್ಯರ್ಥವಾಗಿದೆ. ಈ ತಂಗುದಾಣಗಳಲ್ಲಿ ಬಸ್‌ಗಳು ನಿಲುಗಡೆ ಮಾಡದೇ ಇರುವುದರಿಂದ ಅನುಕೂಲವಾಗುತ್ತಿಲ್ಲ. ಉಳಿದಂತೆ ಇತ್ತೀಚೆಗೆ ರಾಮಸಮುದ್ರ ಪೊಲೀಸ್ ಠಾಣೆಯ ಮುಂಭಾಗ ಶಾಸಕರ ಅನುದಾನದಲ್ಲಿ ನಿರ್ಮಾಣ ಮಾಡಿರುವ ಬಸ್ ತಂಗುದಾಣವೂ ಕೂಡ ಯಾವುದೇ ರೀತಿಯಲ್ಲೂ ಪ್ರಯೋಜನಕ್ಕೆ ಬಾರದಂತಾಗಿದೆ. ಉಳಿದಂತೆ ಎಲ್ಲೂ ಕೂಡ ಬಸ್ ತಂಗುದಾಣಗಳು ಇಲ್ಲದೇ ಪ್ರಯಾಣಿಕರು ರಸ್ತೆ ಬದಿಯನ್ನೇ ತಂಗುದಾಣವಾಗಿಸಿಕೊಂಡಿದ್ದಾರೆ.
ಈ ಹಿಂದೆ ತಂಗುದಾಣಗಳು ಇದ್ದವು:
ನಗರದ ಹಳೆ ಆರ್‌ಟಿಓ ಕಚೇರಿ ವೃತ್ತ, ಜಿಲ್ಲಾಸ್ಪತ್ರೆಯ ಮುಂಭಾಗ, ರೈಲ್ವೆ ಬಡಾವಣೆ, ಲಾರಿ ನಿಲ್ದಾಣದ ಸಮೀಪ ಹಾಗೂ ವಿವಿಧ ಆಟೋ ನಿಲ್ದಾಣಗಳ ಸಮೀಪ ಬಸ್ ತಂಗುದಾಣಗಳನ್ನು ನಿರ್ಮಾಣ ಮಾಡಲಾಗಿತ್ತು. ನಗರದ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಸಂದರ್ಭದಲ್ಲಿ ತಂಗುದಾನಗಳನ್ನು ತೆರವುಗೊಳಿಸಲಾಗಿದ್ದು, ರಸ್ತೆ ನಿರ್ಮಾಣ ಸಂದರ್ಭದಲ್ಲಿ ಸಮರ್ಪಕವಾದ ಬಸ್ ತಂಗುದಾಣಗಳನ್ನು ನಿರ್ಮಾಣ ಮಾಡಲು ಮುಂದಾಗಿಲ್ಲ. ಈ ತಂಗುದಾಣಗಳ ಮರು ನಿರ್ಮಾಣಕ್ಕೂ ಕೂಡ ನಗರಸಭೆ ಅಥವಾ ಜನಪ್ರತಿನಿಧಿಗಳು ಮುಂದಾಗಿಲ್ಲ. ಈ ನಿಟ್ಟಿನಲ್ಲಿ ಬಸ್ ತಂಗುದಾಣಗಳು ಇಲ್ಲದೇ ಸಾರ್ವಜನಿಕರು ಹಾಗೂ ಪ್ರಯಾಣಿಕರು ಸಮಸ್ಯೆ ಅನುಭವಿಸುವಂತಾಗಿದೆ. ಈಗಲಾದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡು ಬಸ್ ತಂಗುದಾಣಗಳನ್ನು ನಿರ್ಮಾಣ ಮಾಡಬೇಕು. ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಜಿಲ್ಲಾ ಕೇಂದ್ರವಾಗಿ ಇಷ್ಟು ವರ್ಷಗಳೂ ಕಳೆದಿದ್ದರೂ, ಯಾವುದೇ ಅಭಿವೃದ್ಧಿಯಾಗಿಲ್ಲ ಎಂಬುದಕ್ಕೆ ನಗರದಲ್ಲಿ ಸಮರ್ಪಕವಾದ ಬಸ್ ತಂಗುದಾಣಗಳು ಇಲ್ಲದಿರುವುದೇ ಉದಾಹರಣೆಯಾಗಿದೆ. ನಿತ್ಯವೂ ಸಾವಿರಾರು ಜನರು ರಸ್ತೆ ಬದಿಯಲ್ಲಿ ಬಿಸಿಲು-ಮಳೆ ಎನ್ನದೇ ಬಸ್‌ಗಳಿಗೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟವರು ಕೂಡಲೇ ನಗರದ ಪ್ರಮು ರಸ್ತೆಗಳಲ್ಲಿ ತಂಗುದಾಣಗಳನ್ನು ನಿರ್ಮಾಣ ಮಾಡಬೇಕು.
-ಮಹದೇವಸ್ವಾಮಿ, ಜಿಲ್ಲಾಧ್ಯಕ್ಷ, ಭ್ರಷ್ಟಚಾರ ನಿರ್ಮೂಲನೆ ಮತ್ತು ಮಾನವ ಹಕ್ಕುಗಳ ರಕ್ಷಣಾ ್ರಂಟ್, ಚಾಮರಾಜನಗರ