accident 
ಚಾಮರಾಜನಗರ

ಬೈಕ್ ಡಿಕ್ಕಿಯಾಗಿ ಪಾದಚಾರಿಗೆ ತೀವ್ರ ಗಾಯ

ಗುಂಡ್ಲುಪೇಟೆ: ಪಟ್ಟಣದ ಹೊರವಲಯದಲ್ಲಿ ಬೈಕ್ ಡಿಕ್ಕಿಯಾಗಿ ಪಾದಚಾರಿ ತೀವ್ರವಾಗಿ ಗಾಯಗೊಂಡಿದ್ದಾರೆ.
ತಾಲೂಕಿನ ಬನ್ನಿತಾಳಪುರ ಗ್ರಾಮದ ಚಿಕ್ಕಮಾದಶೆಟ್ಟಿ ಗಾಯಾಳು. ಇವರು ವೈಯಕ್ತಿಕ ಕೆಲಸ ಮುಗಿಸಿ ಗುಂಡ್ಲುಪೇಟೆಯಿಂದ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಊರ ಕಡೆಗೆ ನಡೆದು ಹೋಗುತ್ತಿದ್ದಾಗ ಬೈಕ್ ಡಿಕ್ಕಿಯಾಗಿದೆ. ಇದರಿಂದ ಕೆಳಗೆ ಬಿದ್ದ ಇವರ ತಲೆಗೆ ತೀವ್ರ ಪೆಟ್ಟಾಗಿದೆ. ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಹೊಯ್ಸಳ ವಾಹನದ ಎಎಸ್‌ಐ ಹೊರೆಯಾಲ ಮಹದೇವಸ್ವಾಮಿ ಮತ್ತು ಸಿಬ್ಬಂದಿ ಬಂದು ಗಾಯಾಳುವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದರು.
ಬೈಕ್ ಸವಾರ ಮತ್ತು ಹಿಂಬದಿ ಸವಾರನಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಅಪಘಾತಕ್ಕೆ ಕಾರಣವಾದ ಬೈಕ್ ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಗಾಯಾಳು ಚಿಕ್ಕಮಾದಶೆಟ್ಟಿ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.