ಚಾಮರಾಜನಗರದ ಮಲ್ಲಯ್ಯನಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಾಖಲಾತಿ ಆಂದೋಲನ ಮತ್ತು ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದ ಪ್ರಯುಕ್ತ ವಿದ್ಯಾರ್ಥಿಗಳಿಗ ಬ್ಯಾಗ್, ಪುಸ್ತಕ ವಿತರಣೆ ಮಾಡಲಾಯಿತು. ಸೋಮಣ್ಣೇಗೌಡ, ಕಲೆ ನಟರಾಜು, ಶಶಿಕಲಾ, ಧರ್ಮರಾಜು ಇತರರು ಇದ್ದರು. 
ಚಾಮರಾಜನಗರ

ಸರ್ಕಾರಿ ಶಾಲೆಗಳ ಉಳಿವಿಗಾಗಿ ಪಾಲಕರು ಸಹಕರಿಸಿ

ಪ್ರಮುಖ ಮುಖ್ಯಾಂಶಗಳು

  • ನಿವೃತ್ತಿ ಬಿಇಒ ಸೋಮಣ್ಣೇಗೌಡ ಮನವಿ
  • ಶಾಲಾ ದಾಖಲಾತಿ ಆಂದೋಲನ ಮತ್ತು ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ
ಚಾಮರಾಜನಗರ: ಸರ್ಕಾರಿ ಶಾಲೆಗಳ ಉಳಿವಿಗಾಗಿ ಶಿಕ್ಷಕರೊಂದಿಗೆ ಪಾಲಕರು ಸಹಕರಿಸಬೇಕು. ಮಕ್ಕಳ ದಾಖಲಾತಿ ಹೆಚ್ಚು ಮಾಡಲು ಗ್ರಾಮಸ್ಥರ ಸಹಕಾರ ತುಂಬ ಪ್ರಮುಖವಾಗಿದೆ ಎಂದು ನಿವೃತ್ತ ಬಿಇಒ ಸೋಮಣ್ಣೇ ಗೌಡ ತಿಳಿಸಿದರು.
ನಗರದ ಮಲ್ಲಯ್ಯನಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಶಾಲಾ ದಾಖಲಾತಿ ಆಂದೋಲನ ಮತ್ತು ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಪಠ್ಯ ಪುಸ್ತಕಗಳು, ಸಮವಸ್ತ್ರಗಳು, ಬಿಸಿಯೂ, ಹಾಲು, ಮೊಟ್ಟೆ, ಬಾಳೆಹಣ್ಣು, ಮತ್ತು ಕರ್ನಾಟಕ ದರ್ಶನದಂತಹ ಶೈಕ್ಷಣಿಕ ಪ್ರವಾಸ ಇವೆಲ್ಲವನ್ನೂ ಉಚಿತವಾಗಿ ನೀಡುತ್ತಿದ್ದರೂ ಪಾಲಕರು ಮಕ್ಕಳನ್ನು ಖಾಸಗಿ ಶಾಲೆಗಳಿಗೆ ದಾಖಲಿಸುತ್ತಿರುವುದು ವಿಷಾದವೆನಿಸುತ್ತಿದೆ ಎಂದರು.
ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶಿಕ್ಷಕರಷ್ಟೇ ಪಾಲಕರೂ ಶ್ರಮಿಸಿದಾಗ ಮಕ್ಕಳ ಭವಿಷ್ಯವನ್ನು ಉಜ್ವಲ ಗೊಳಿಸಲು ಸಾಧ್ಯವಾಗುತ್ತದೆ. ಆದುದರಿಂದ ಸರ್ಕಾರಿ ಶಾಲೆಗಳನ್ನು ಉಳಿಸಲು ಪಾಲಕರು ಮತ್ತು ಗ್ರಾಮಸ್ಥರು ಶಿಕ್ಷಕರು ಒಂದಾಗಿ ಕಾರ್ಯಪ್ರೌವೃತ್ತರಾಗಬೇಕು. ಓದಿನ ವಿದ್ಯಾರ್ಥಿಗಳು ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಆದರ್ಶವಾಗಿರಿಸಿಕೊಂಡು ಅವರ ಶೈಕ್ಷಣಿಕ ಪ್ರಗತಿಯನ್ನು ನೆನೆದು ತಮ್ಮ ಪ್ರಗತಿಯನ್ನು ಸಾಧಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಕ್ಕಳಿಗೆ ನೋಟ್‌ಬುಕ್, ಪೆನ್ನು ,ಬ್ಯಾಗ್ ವಿತರಿಸಿದ ನಿವೃತ್ತ ವಿಜ್ಞಾನಿ ಧರ್ಮರಾಜು ಮಾತನಾಡಿ, ಪಾಲಕರು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕ ವಾತಾವರಣವನ್ನು ಒದಗಿಸುವ ಜತೆಗೆ ಮೌಲ್ಯಗಳನ್ನು ಕಲಿಸಬೇಕು. ನಮ್ಮೂರ ಶಾಲೆ ಎನ್ನುವ ಅಭಿಮಾನವನ್ನು ಹೊಂದಿ ಶಾಲೆಯನ್ನು ಸುಂದರಗೊಳಿಸಲು ಸಹಕರಿಸಬೇಕು. ಇಲ್ಲಿ ಕಲಿತ ಮಕ್ಕಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣನಾಗುವ ಮೂಲಕ ಬೇರೆ ಮಕ್ಕಳನ್ನು ಆಕರ್ಷಿಸುವಂತಾಗಬೇಕು, ಪಠ್ಯ ಪುಸ್ತಕದೊಂದಿಗೆ ಬುದ್ಧ, ಬಸವ, ಅಂಬೇಡ್ಕರ್ ಅವರನ್ನು ಓದಿಕೊಂಡಾಗ ಮಾತ್ರ ಆದರ್ಶಗಳನ್ನು ಮೈಗೂಡಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.
ರಂಗದೀವಿಗೆ ಸಂಸ್ಥೆ ಅಧ್ಯಕ್ಷ ಕಲೆ ನಟರಾಜ್ ಮಾತನಾಡಿ, ಖಾಸಗಿ ಶಾಲೆಗಳ ಶಿಕ್ಷಕರಿಗಿಂತ ಸರ್ಕಾರಿ ಶಾಲೆಗಳ ಶಿಕ್ಷಕರು ಯಾವುದರಲ್ಲೂ ಕಡಿಮೆ ಇಲ್ಲ. ಸರ್ಕಾರ ಕಡ್ಡಾಯ ಮತ್ತು ಉಚಿತ ಶಿಕ್ಷಣವನ್ನು ನೀಡುತ್ತಿದ್ದರೂ ಸಹ ಪಾಲಕರು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿರುವುದು ಬೇಸರದ ಸಂಗತಿ ಎಂದರು.
ಸರ್ಕಾರಗಳು ಶಾಲೆಗಳನ್ನು ಆಕರ್ಷಣೀಯವಾಗಿ ಮಾಡುವ ಜತೆಗೆ ಸರ್ಕಾರಿ ಶಾಲೆಗಳಲ್ಲಿ ಓದಿದವರಿಗೆ ಮಾತ್ರ ಸರ್ಕಾರಿ ಕೆಲಸ ಎಂದು ಕಾನೂನು ಮಾಡಬೇಕು. ವಿದ್ಯಾರ್ಥಿಗಳು ನಿರ್ದಿಷ್ಟ ಗುರಿಯನ್ನು ಇರಿಸಿಕೊಂಡು ಗುರುವಿನ ಮಾರ್ಗದರ್ಶನದೊಂದಿಗೆ ಗುರಿಯನ್ನು ಸಾಧಿಸಲು ಶ್ರಮಿಸಬೇಕು. ಆಗ ಮಾತ್ರ ಸಮರ್ಥ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಶಿಕ್ಷಕರು ಪಠ್ಯ ಪುಸ್ತಕದ ವಿಷಯದ ಜತೆಗೆ ಪಠ್ಯೇತರ ಚಟುವಟಿಕೆಗಳು ಮತ್ತು ಆದರ್ಶಗಳನ್ನು ಕಲಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಶಿಕಲಾ ಮಾತನಾಡಿದರು, ಎಸ್‌ಡಿಎಂಸಿ ಸದಸ್ಯ ದುಂಡೆಗೌಡ, ಶಿಕ್ಷಕಿ ಶಿಲ್ಪ ಇದ್ದರು.