ಹನೂರು ತಾಲೂಕಿನ ಪಚ್ಚೆದೊಡ್ಡಿ ಗ್ರಾಮದ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಈ ಹಿಂದೆ ಸಾರಿಗೆ ಸೌಲಭ್ಯವಿಲ್ಲದ ಕಾರಣ ನಡೆದುಕೊಂಡು ಶಾಲೆಗೆ ಹೋಗುತ್ತಿರುವುದು. (ಸಂಗ್ರಹ ಚಿತ್ರ)
- ನಾಗಮಲೆಯಲ್ಲಿ ಚಿರತೆ ದಾಳಿಗೆ ಬಾಲಕ ಬಲಿ ಹಿನ್ನೆಲೆ
- ಸ್ಕೂಲ್ ಶುರುವಾದ ಮೇಲೆ ಕಾಡಿನೊಳಗೆ ಸಾಗುವ ಮಕ್ಕಳ ಸ್ಥಿತಿ ಆತಂಕಕಾರಿ
ಚಾಮರಾಜನಗರ: ಮಲೆಮಹದೇಶ್ವರ ಬೆಟ್ಟದ ನಾಗಮಲೆಗೆ ಪಾದಯಾತ್ರೆಗೆ ತೆರಳಿದ್ದ ಬಾಲಕನ ಸಾವು ಹಲವು ಪಾಲಕರ ಎದೆ ನಡುಗಿಸಿರುವಾಗ ಇನ್ನೇನು ಶುರುವಾಗಲಿರುವ ಶಾಲೆಗೆ ಕಾಡಿನ ದಾರಿಯಲ್ಲಿ ಕಾಲ್ನಡಿಗೆಯಲ್ಲೇ ತೆರಳುವ ಅರಣ್ಯದೊಳಗಿನ ಕುಗ್ರಾಮಗಳ ಮಕ್ಕಳ ಹೆತ್ತವರ ಭಯ ಎಷ್ಟಿರಬೇಡ?
ಭಾಗಶಃ ಅರಣ್ಯ ಪ್ರದೇಶದಿಂದ ಕೂಡಿರುವ ಚಾಮರಾಜನಗರ ಜಿಲ್ಲೆಯಲ್ಲಿ ಬಸ್ ಸಂಚಾರ ಮಾಡಲಾಗದ, ದುರ್ಗಮ ಹಾದಿಗಳಿಂದ ಕೂಡಿದ ಗ್ರಾಮ, ಹಾಡಿ, ಪೋಡುಗಳಿವೆ. ಇಲ್ಲಿನ ಮಕ್ಕಳು ದಟ್ಟ ಅರಣ್ಯದೊಳಗೆ ಶಾಲೆಗಳಿಗೆ ನಡೆದುಕೊಂಡೇ ಹೋಗುತ್ತವೆ. ಶಿಕ್ಷಣ ಪಡೆಯಲು ನಿತ್ಯವೂ ಪ್ರಾಣವನ್ನು ಪಣಕ್ಕಿಡುತ್ತವೆ. ಮೇ 10ರಂದು ಮಲೆ ಮಹದೇಶ್ವರ ಬೆಟ್ಟದ ನಾಗಮಲೆ ಕ್ಷೇತ್ರಕ್ಕೆ ಬೆಂಗಳೂರಿನ 10 ವರ್ಷದ ಬಾಲಕ ಹರ್ಷಿತ್ ತನ್ನ ಪಾಲಕರೊಂದಿಗೆ ಕಾಲ್ನಡಿಗೆಯಲ್ಲಿ ತೆರಳಿದ್ದ. ಈ ವೇಳೆ ಚಿರತೆ ದಾಳಿಗೆ ಬಲಿಯಾದ.
ಈ ದುರ್ಘಟನೆ ನಡೆದ ನಂತರ ಕಾಡಿನೊಳಗಿರುವ ಕುಗ್ರಾಮಗಳು ಮತ್ತು ನಾಗಮಲೆ ಸೇರಿದಂತೆ ಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ ಊರುಗಳ ಜನರಿಗೆ ತನ್ನ ಮಕ್ಕಳ ಜೀವದ ಮೇಲೆ ಭಯ ಶುರುವಾಗಿದೆ. ವಾಹನ ಸೌಲಭ್ಯವಿಲ್ಲದೆ ಕಾಡಿನೊಳಗೆ ಇನ್ನೇನು ಆರಂಭವಾಗಲಿರುವ ಶಾಲೆಗಳಿಗೆ ನಡೆದುಕೊಂಡು ಹೋಗುವ ಮಕ್ಕಳ ಮೇಲೆ ಚಿರತೆ ದಾಳಿ ಮಾಡಿಬಿಟ್ಟರೆ ಏನು ಗತಿ ಎನ್ನುವ ಚಿಂತೆ ಶುರುವಾಗಿದೆ. ಮುಂಜಾನೆ ಮತ್ತು ಸಂಜೆ ವೇಳೆಯೇ ವನ್ಯಜೀವಿಗಳು ದಾಳಿ ಮಾಡುವ ಸಂಭವ ಹೆಚ್ಚಾಗಿದೆ. ಬೆಳಗ್ಗೆ ಶಾಲೆಗೆ ಹೋಗಲು ಮತ್ತು ಸಂಜೆ ಶಾಲೆ ಬಿಟ್ಟ ಮೇಲೆ ಮನೆಗೆ ಬರುವ ಮಕ್ಕಳು ನಾಗಮಲೆ ಕ್ಷೇತ್ರಕ್ಕೆ ಕಾಲ್ನಡಿಗೆಯಲ್ಲಿ ತೆರಳಿದ್ದ ಬಾಲಕ ಹರ್ಷಿತ್ ರೀತಿ ವನ್ಯಜೀವಿ ಬೇಟೆಗೆ ಗುರಿಯಾಗಿಬಿಟ್ಟರೆ ಎನ್ನುವ ಆತಂಕ ಪಾಲಕರನ್ನು ಕಾಡದೆ ಇರದು.
ಶಾಲೆಗೆ ಹೋಗಲು ಬಸ್ ಸೌಲಭ್ಯವಿಲ್ಲ:
ಜಿಲ್ಲೆಯ ಅರಣ್ಯಪ್ರದೇಶದಲ್ಲಿ ದುರ್ಗಮ ಹಾದಿಯ ಹಲವು ಗ್ರಾಮಗಳಲ್ಲಿ ಬಸ್ ಸೌಲಭ್ಯವಿಲ್ಲ. ಈ ಕುರಿತು ಜಿಲ್ಲಾ ಶಿಕ್ಷಣ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಪ್ರಸ್ತುತ ಚಿರತೆ ಉಪಟಳವಿರುವ ಮಲೆ ಮಹದೇಶ್ವರ ವನ್ಯಜೀವಿಧಾಮದ ಹನೂರು ತಾಲೂಕಿನ ಪಚ್ಚೆದೊಡ್ಡಿ, ದೊಡ್ಡಾಣೆ, ಕೊಕ್ಕಬರೆ, ತೇಕಣೆ, ತೋಕೆರೆ, ಇಂಡಿಗನತ್ತ, ಪಡಸಲನತ್ತ, ನಲ್ಲಿಕತ್ರಿ, ಅರಬಗೆರೆ ಮತ್ತು ಚಾಮರಾಜನಗರ ತಾಲೂಕಿನ ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶ ವ್ಯಾಪ್ತಿಯ ಕಾಡಿಗೆರೆ ಸರ್ಕಾರಿ ಶಾಲೆಗಳು ಅರಣ್ಯದೊಳಗಿದ್ದು, ಬಸ್ ಸೌಲಭ್ಯವಿಲ್ಲ. ಗುಂಡ್ಲುಪೇಟೆ ತಾಲೂಕಿನ ಗುಡ್ಡೇಕೆರೆ, ಬೂರದಾರಹುಂಡಿ, ಆನಂಜಿಹುಂಡಿ, ಚಲುವರಾಯನಪುರ, ಕಣಿಯನಪುರ, ದೇಶಿಪುರ, ರಾಮಯ್ಯನಪುರ, ಹಾಡಿನ ಕಣಿವೆ, ಕಾರೆಮಾಳ, ಕಣಿಯನಪುರ ಕಾಲನಿ, ಚಿಕ್ಕಯಲಚಟ್ಟಿ, ಚನ್ನಿಕಟ್ಟೆ, ಕಾರಗಿಹುಂಡಿ, ಮೂರ‌್ಮನೆ, ಹಗ್ಗದಹಳ್ಳ ಇತರೆ ಕಡೆಗಳಿಗೆ ಬಸ್ ಇಲ್ಲ. ರಸ್ತೆ ಮಾರ್ಗವು ಉತ್ತಮವಾಗಿಲ್ಲದ ಕಾರಣ ಜೀಪ್‌ಗಳನ್ನು ಬಿಟ್ಟರೆ ಬೇರೆ ವಾಹನ ಚಲಿಸಲು ಸಾಧ್ಯವಿಲ್ಲ. ಕೆಲವು ಕಡೆಗಳಲ್ಲಿ ಜೀಪ್‌ಗಳೂ ಸಹ ಹೋಗಲು ಸಾಧ್ಯವಿಲ್ಲ. ಇಲ್ಲಿನ ಮಕ್ಕಳು ಶಾಲೆಗೆ ಹೋಗಲು ಕಾಲ್ನಡಿಗೆಯನ್ನೇ ಆಶ್ರಮಿಸಬೇಕಾಗಿದೆ.
ಜಿಲ್ಲೆಯಲ್ಲಿ ಅರಣ್ಯಪ್ರದೇಶದಲ್ಲಿ ಶಾಲೆಗಳಿಗೆ ನಡೆದುಕೊಂಡ ಹೋಗುವ ವಿದ್ಯಾರ್ಥಿಗಳಿಗೆ ರಸ್ತೆಗಳಿಗೆ ಅನುಗುಣವಾಗಿ ಸಾರಿಗೆ ಸೌಲಭ್ಯ ಒದಗಿಸಲು ಜಿಲ್ಲಾಧಿಕಾರಿ ಶ್ರೀರೂಪಾ ಗಮನದಲ್ಲಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಬಸ್ ಸೌಲಭ್ಯವಿಲ್ಲದ ಸಂದರ್ಭದಲ್ಲಿ ಸಾರಿಗೆ ಸೌಲಭ್ಯ ಕೊಡಿಸಿದ್ದರು. ಶಾಲೆಗಳು ಆರಂಭವಾದ ಬಳಿಕ ದುರ್ಗಮ ಹಾದಿಯಲ್ಲಿರುವ ಶಾಲೆಗಳಿಗೆ ಬರುವ ಮಕ್ಕಳಿಗೆ ಜೀಪ್ ವ್ಯವಸ್ಥೆ ಮಾಡಿದರೆ ಮಕ್ಕಳಿಗೂ ಅನುಕೂಲವಾಗಲಿದೆ.
ಸಿಎಂಗೆ ಪತ್ರ ಬರೆದಿದ್ದ ಮಕ್ಕಳು:
ಹನೂರು ತಾಲೂಕಿನ ಪಚ್ಚೆದೊಡ್ಡಿ ಗ್ರಾಮದ ಸರ್ಕಾರಿ ಶಾಲೆಗೆ ತೆರಳುವ ಮಕ್ಕಳು ಸಾರಿಗೆ ಸೌಲಭ್ಯ ಕೇಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ಕಾಡುಪ್ರಾಣಿಗಳ ಹಾವಳಿ ನಡುವೆ ಶಾಲಾ ವಾಹನ, ಬಸ್ ಸೌಲಭ್ಯವಿಲ್ಲದೆ ನಡೆದುಕೊಂಡು ಬರಬೇಕೆಂದು ಅಳಲು ತೋಡಿಕೊಂಡಿದ್ದರು. ಬಳಿಕ ವಿದ್ಯಾರ್ಥಿಗಳಿಗೆ ಸಾರಿಗೆ ಸೌಲಭ್ಯ ಒದಗಿಸಿಕೊಡಲಾಗಿತ್ತು. ಈ ರೀತಿ ಹಲವು ಗ್ರಾಮಗಳಲ್ಲಿ ಸಮಸ್ಯೆ ಇದೆ.
"
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಂದರ್ಭದಲ್ಲಿ ಅರಣ್ಯದೊಳಗಿರುವ ಗ್ರಾಮಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಡಿಸಿ ಶ್ರೀರೂಪಾ ಅವರು ಸಾರಿಗೆ ಸೌಲಭ್ಯ ಒದಗಿಸಿಕೊಟ್ಟಿದ್ದರು.
— ಚಂದ್ರ ಪಾಟೀಲ್, ಉಪ ನಿರ್ದೇಶಕ, ಶಾಲಾ ಶಿಕ್ಷಣ ಇಲಾಖೆ, ಚಾಮರಾಜನಗರ
ಅರಣ್ಯದೊಳಗಿರುವ ಗ್ರಾಮಗಳ ಮಕ್ಕಳು ಶಾಲೆಗೆ ಹೋಗಲು ಕಾಡಿನ ಮಧ್ಯೆ ನಡೆದುಕೊಂಡು ಹೋಗುವಾಗ ವನ್ಯಜೀವಿಗಳು ದಾಳಿ ಮಾಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಪ್ರಾಣ ರಕ್ಷಣೆ ದೃಷ್ಟಿಯಿಂದ ಅರಣ್ಯ ಇಲಾಖೆ ಸಹಕಾರ ಪಡೆದು ವಿದ್ಯಾರ್ಥಿಗಳಿಗೆ ಜೀಪ್ ವ್ಯವಸ್ಥೆಯನ್ನು ಮಾಡಿಕೊಡಬೇಕಾಗಿದೆ.
— ಸುಂದರಿ, ಮಹದೇಶ್ವರ ಬೆಟ್ಟ