ಹನೂರಿನಲ್ಲಿ ಹೆಚ್ಚು ಕಸ ಸಂಗ್ರಹವಾಗುತ್ತಿದ್ದ ಬಂಡಳ್ಳಿ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಬದಿ ಪಪಂ ಆಡಳಿತ ತುಳಸಿ ಗಿಡವನ್ನು ಇರಿಸಿ ಬಣ್ಣದಿಂದ ಸಿಂಗರಿಸಿರುವುದು.  
ಚಾಮರಾಜನಗರ

ಕಸ ಸುರಿಯುವ ಜಾಗದಲ್ಲಿ ತುಳಸಿ ಗಿಡಗಳನ್ನು ಇರಿಸಿದ ಪಪಂ

ಎಂ.ರವಿ
ಹನೂರು: ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮನ ದೇಗುಲದ ಮೂಲಕ ಬಂಡಳ್ಳಿ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಬದಿ ಪಟ್ಟಣ ಪಂಚಾಯಿತಿ ಆಡಳಿತ ತುಳಸಿ ಗಿಡವನ್ನು ಇರಿಸಿ ಬಣ್ಣದಿಂದ ಸಿಂಗರಿಸಿ ಆಕರ್ಷಿಸುವಂತೆ ಮಾಡುವುದರ ಮೂಲಕ ಸಾರ್ವಜನಿಕರು ಕಸ ಸುರಿಯದಂತೆ ವಿನೂತನ ಕಾರ್ಯ ಕೈಗೊಂಡಿದ್ದು, ಇದಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಪಟ್ಟಣದ ಬಡಾವಣೆಗಳಿಗೆ ಪಪಂನ ಕಸ ಸಂಗ್ರಹಿಸುವ ವಾಹನ ತೆರಳಿದರೂ ಕೆಲವರು ಕಸವನ್ನು ವಾಹನಕ್ಕೆ ನೀಡುತ್ತಿರಲಿಲ್ಲ. ಮುಸ್ಲಿಂ ಸ್ಮಶಾನದ ಬಳಿ ಸೇರಿದಂತೆ ಲೊಕ್ಕನಹಳ್ಳಿಗೆ ತೆರಳುವ ತಟ್ಟೆಹಳ್ಳದ ಬಳಿ, ದೇವಾಂಗ ಪೇಟೆ, ಆಂಜನೇಯ ಸ್ವಾಮಿ ದೇಗುಲದ ಹಳ್ಳದ ಬಳಿ, ಸೆಸ್ಕ್ ಇಲಾಖೆ ಸಮೀಪ, ಕ್ರಿಸ್ತರಾಜ ಶಾಲೆಯ ರಸ್ತೆ ಬದಿ ಹಾಗೂ ಇನ್ನಿತರ ಕಡೆಗಳಲ್ಲಿ ಕೆಲವರು ಹಿಂದಿನಿಂದಲೂ ಕಸವನ್ನು ಸುರಿಯುವುದನ್ನು ರೂಢಿಸಿಕೊಂಡು ಬಂದಿದ್ದಾರೆ. ಇದು ಅನೈರ್ಮಲ್ಯವನ್ನು ಉಂಟು ಮಾಡುವುದರ ಮೂಲಕ ರೋಗ-ರುಜಿನಗಳು ಹರಡುವುದಕ್ಕೆ ಕಾರಣವಾಗಿತ್ತು. ಇತ್ತ ಪಪಂ ಪೌರ ಕಾರ್ಮಿಕರು ಆಗ್ಗಾಗ್ಗೆ ರಾಶಿ ಬೀಳುತ್ತಿದ್ದ ಕಸವನ್ನು ವಿಲೇವಾರಿ ಮಾಡುವುದೇ ಒಂದು ಸವಾಲಾಗಿ ಪರಿಣಮಿಸುತ್ತಿತ್ತು. ಕೆಲ ಸಾರ್ವಜನಿಕರು ಪಪಂ ಆಡಳಿತ ಬಡಾವಣೆಗಲ್ಲಿ ಕಸವನ್ನು ಸಮರ್ಪಕವಾಗಿ ವಿಲೇವಾರಿಗೊಳಿಸುತ್ತಿಲ್ಲ ಎಂದು ದೂರುತ್ತಿದ್ದರು.
ಪಪಂ ಸಿಬ್ಬಂದಿ ಬಡಾವಣೆಯ ಸ್ಥಳೀಯ ನಿವಾಸಿಗಳಲ್ಲಿ ಕಸ ಸುರಿಯದಂತೆ ಅರಿವು ಮೂಡಿಸುತ್ತಿದ್ದರೂ ಜನರು ಪಾಲಿಸದೇ ರಸ್ತೆ ಬದಿಯೇ ಕಸವನ್ನು ಬಿಸಾಡುತ್ತಿದ್ದರು. ಪದೆ ಪದೇ ಸಂಗ್ರಹವಾಗುತ್ತಿದ್ದ ಕಸವನ್ನು ವಿಲೇವಾರಿಗೊಳಿಸುವುದೇ ಸಿಬ್ಬಂದಿಗೆ ಹೆಚ್ಚಿನ ಕಾರ್ಯಭಾರವಾಗಿತ್ತು. ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿತ್ತು. ಇದನ್ನು ಮನಗಂಡ ಮುಖ್ಯಾಧಿಕಾರಿ ರೇಖಾ ಅವರು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಹೆಚ್ಚು ಕಸ ಸಂಗ್ರಹವಾಗುತ್ತಿದ್ದ ಶ್ರೀ ಬೆಟ್ಟಳ್ಳಿ ಮಾರಮ್ಮನ ದೇಗುಲದ ಮೂಲಕ ಬಂಡಳ್ಳಿ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಬದಿಯಲ್ಲಿ ಸಿಬ್ಬಂದಿಯಿಂದ ಸಿಮೆಂಟ್ ತೊಟ್ಟಿಯಲ್ಲಿ ತುಳಸಿ ಗಿಡವನ್ನು ಇರಿಸಿ ಭಕ್ತಿ ಭಾವನೆಯನ್ನು ಮೂಡಿಸುವುದರ ಜತೆಗೆ ಇದರ ಆಸುಪಾಸು ಬಣ್ಣಗಳಿಂದ ಸಿಂಗರಿಸಿ ಆಕರ್ಷಿಸುವಂತೆ ಮಾಡಿದ್ದು, ಕಸ ಸುರಿಯುವುದಕ್ಕೆ ಕಡಿವಾಣ ಹಾಕಿದ್ದಾರೆ. ಇದು ಸ್ಥಳೀಯರಲ್ಲಿ ಧನಾತ್ಮಕತೆಯನ್ನು ಮೂಡಿಸಿದ್ದು, ಬಡಾವಣೆಗೆ ಆಗಮಿಸುವ ವಾಹನಕ್ಕೆ ಕಸ ನೀಡುತ್ತಿದ್ದಾರೆ.
ಈ ವಿನೂತನ ಪ್ರಯೋಗಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಹಾಗಾಗಿ ಪಟ್ಟಣದಲ್ಲಿ ಹೆಚ್ಚು ಕಸ ಸಂಗ್ರಹವಾಗುವ ಸ್ಥಳಗಳಲ್ಲೂ ಮುಂದಿನ ದಿನಗಳಲ್ಲಿ ಈ ರೀತಿಯ ವ್ಯವಸ್ಥೆಯನ್ನು ಕೈಗೊಳ್ಳಲು ಪಪಂ ಆಡಳಿತ ಮುಂದಾಗಿದೆ. ಈ ವಿನೂತನ ಪ್ರಯೋಗ ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡಲು ಸಹಕಾರಿಯಾಗಿದೆ.