ಬೂದುಬಾಳು ಗ್ರಾಮದ ಶ್ರೀ ಗುಡಿಹಟ್ಟಿ ವೆಂಕಟರಮಣಸ್ವಾಮಿ ಜಾತ್ರೆಯಲ್ಲಿ ಬಾಡೂಟದ ಪಂಕ್ತಿಸೇವೆ ಜರುಗಿತು.  
ಚಾಮರಾಜನಗರ

ಬೂದುಬಾಳು ಗ್ರಾಮದಲ್ಲಿ ಬಾಡೂಟದ ಪಂಕ್ತಿಸೇವೆ

ಪ್ರಮುಖ ಮುಖ್ಯಾಂಶಗಳು

  • ಶ್ರೀ ಗುಡಿಹಟ್ಟಿ ವೆಂಕಟರಮಣಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ರುಚಿ ಸವಿದ ಭಕ್ತರು
  • ಹೊರವಲಯದಲ್ಲಿ ಅಡುಗೆ ತಯಾರಿಸಿ ಎಡೆ ಹಾಕಿ ಪೂಜೆ
ಹನೂರು: ತಾಲೂಕಿನ ಬೂದುಬಾಳು ಗ್ರಾಮದ ಶ್ರೀ ಗುಡಿಹಟ್ಟಿ ವೆಂಕಟರಮಣಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಬುಧವಾರ ಬಾಡೂಟದ ಪಂಕ್ತಿಸೇವೆ ನಡೆಯಿತು.
ಜಾತ್ರೆಯ ಮೂರನೇ ದಿನವಾದ ಪ್ರಹ್ಲಾದೋತ್ಸವದಲ್ಲಿ ಭಕ್ತರು ಬಿಡಾರ ಹೂಡಿ ದೇವರಿಗೆ ಹರಕೆಯಾಗಿ ಬಿಟ್ಟಿದ್ದ ಕುರಿ, ಕೋಳಿಗಳನ್ನು ಬಲಿ ನೀಡಿ ಬಾಡೂಟದ ಪಂಕ್ತಿಸೇವೆ ನೆರವೇರಿಸುವುದು ವಾಡಿಕೆ. ಈ ಹಿನ್ನೆಲೆಯಲ್ಲಿ ಮೈಸೂರು, ಮಂಡ್ಯ, ಬೆಂಗಳೂರು, ಚಾಮರಾಜನಗರ ಸೇರಿದಂತೆ ಇನ್ನಿತರ ಜಿಲ್ಲೆ ಹಾಗೂ ತಾಲೂಕಿನ ವಿವಿಧ ಗ್ರಾಮಗಳಿಂದ ಕುಟುಂಬ ಸಮೇತ ಆಗಮಿಸಿದ್ದ ಭಕ್ತರು ಗ್ರಾಮದ ಸರ್ಕಾರಿ ಶಾಲೆಯ ಹಿಂಭಾಗದ ಆವರಣ, ಕೆರೆಏರಿ, ಅರಬಗೆರೆಗೆ ತೆರಳುವ ರಸ್ತೆ ಬದಿಯ ಹುಣಸೆಮರದ ತೋಪು, ತೋಟ ಹಾಗೂ ಇನ್ನಿತರ ಕಡೆಗಳಲ್ಲಿ ಅಲ್ಲಲ್ಲಿ ಬೀಡು ಬಿಟ್ಟಿದ್ದರು.
ಬೆಳಗ್ಗೆ ದೇಗುಲದಿಂದ ತೀರ್ಥವನ್ನು ತಂದು ಗ್ರಾಮದ ಹೊರವಲಯದಲ್ಲಿ ಕುರಿ, ಕೋಳಿಗಳನ್ನು ಅರ್ಪಿಸಿ ಅಡುಗೆ ತಯಾರಿಸಿದರು. ನಾರಾಯಣಸ್ವಾಮಿ ಮೂರ್ತಿಯನ್ನು ಇರಿಸಿ ದೇವರ ಗುಡ್ಡರಿಂದ ಎಡೆ ಹಾಕಿ ಪೂಜೆ ಸಲ್ಲಿಸಿದ ಬಳಿಕ ಸಾಮೂಹಿಕವಾಗಿ ಪಂಕ್ತಿಸೇವೆ ನೆರವೇರಿಸಲಾಯಿತು. ಜನರು ಬಾಡೂಟದ ಸವಿಯನ್ನು ಸವಿದರು. ಮಧ್ಯಾಹ್ನ ಆರಂಭವಾದ ಪಂಕ್ತಿಸೇವೆ ತಡರಾತ್ರಿಯವರೆಗೂ ನಡೆಯಿತು. ಇದರಿಂದ ಜಾತ್ರಾ ಆವರಣ ಬಾಡೂಟದ ಘಮಲಿನಿಂದ ಆವರಿಸಿತ್ತು. ಆಗಮಿಸಿದ್ದ ಭಕ್ತರು ದೇಗುಲಕ್ಕೆ ತೆರಳಿ ದೇವರ ದರ್ಶನ ಪಡೆದು ಹಣ್ಣು ಕಾಯಿ ನೀಡಿ ಪೂಜೆ ಸಲ್ಲಿಸಿದರು.
ಹರಿದು ಬಂದ ಜನಸಾಗರ:
ಬಾಡೂಟದ ಪಂಕ್ತಿಸೇವೆಯ ಹಿನ್ನೆಲೆ ಮಧ್ಯಾಹ್ನದ ಬಳಿಕ ಜಾತ್ರೆಗೆ ಜನಸಾಗರವೇ ಹರಿದು ಬಂತು. ಇದರಿಂದ ಜಾತ್ರಾ ಆವರಣ ಕಳೆಗಟ್ಟಿತ್ತು. ಸಂಚಾರ ಸಿಕ್ಕು ಉಂಟಾಗದಂತೆ ಪೊಲೀಸರು ವೀರಾಂಜನೇಯ ಸ್ವಾಮಿ ದೇಗುಲದ ಸಮೀಪದಲ್ಲಿಯೇ ಬ್ಯಾರಿಕೇಡ್ ಅಳವಡಿಸಿ ಜಾತ್ರೆಯೊಳಗೆ ವಾಹನಗಳು ಪ್ರವೇಶಿಸದಂತೆ ಕ್ರಮವಹಿಸಿ ಸುಸೂತ್ರ ಜಾತ್ರೆಗೆ ಅನುಕೂಲ ಕಲ್ಪಿಸಿದ್ದರು.
ವ್ಯಾಪಾರ ಬಲುಜೋರು:
ಬಾಡೂಟದ ಹಿನ್ನೆಲೆಯಲ್ಲಿ ಬುಧವಾರ ಸಾವಿರಾರು ಭಕ್ತರು ಅದರಲ್ಲೂ ಮಹಿಳೆಯರು ಹಾಗೂ ಮಕ್ಕಳು ಹೆಚ್ಚಾಗಿ ಜಾತ್ರೆಗೆ ಆಗಮಿಸಿದ್ದರು. ಇದರಿಂದ ಗೃಹೋಪಯೋಗಿ ವಸ್ತುಗಳು, ಮಕ್ಕಳ ಆಟಿಕೆ ಸಾಮಾನು, ಮಿಠಾಯಿ ಅಂಗಡಿ ಹಾಗೂ ಜಾತ್ರೆಯಲ್ಲಿ ಇರಿಸಿದ್ದ ಇನ್ನಿತರ ಸ್ಟಾಲ್‌ಗಳಲ್ಲಿ ಜನರು ವಸ್ತುಗಳನ್ನು ಖರೀದಿಸುವಲ್ಲಿ ನಿರತರಾಗಿದ್ದರು. ಹಾಗಾಗಿ ಜಾತ್ರೆಯಲ್ಲಿ ವ್ಯಾಪಾರ ಬಲು ಜೋರಾಗಿಯೇ ನಡೆಯಿತು.