ಬೂದುಬಾಳು ಶ್ರೀ ಗುಡಿಹಟ್ಟಿ ವೆಂಕಟರಮಣಸ್ವಾಮಿ ಜಾತ್ರೆಯ ವಸಂತೋತ್ಸವದಲ್ಲಿ ಯುವಕರು ಪರಸ್ಪರ ಓಕುಳಿ ಎರಚಾಡುತ್ತಾ ಸಂಭ್ರಮಿಸಿದರು.
- ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಹನೂರು: ತಾಲೂಕಿನ ಬೂದುಬಾಳು ಗ್ರಾಮದ ಶ್ರೀ ಗುಡಿಹಟ್ಟಿ ಜಾತ್ರಾ ಮಹೋತ್ಸವದಲ್ಲಿ ಬುಧವಾರ ರಾತ್ರಿ ಸ್ವಾಮಿಯ ಪಲ್ಲಕ್ಕಿ ಉತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಉತ್ಸವದ ಹಿನ್ನೆಲೆಯಲ್ಲಿ ರಾತ್ರಿ ದೇಗುಲದಲ್ಲಿ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ದೇಗುಲದ ಮುಂಭಾಗದಲ್ಲಿ ವಿವಿಧ ಪುಷ್ಪ, ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುವಂತೆ ಸಿಂಗರಿಸಲಾಗಿದ್ದ ಪಲ್ಲಕ್ಕಿಯಲ್ಲಿ ವೆಂಕರಮಣಸ್ವಾಮಿ ವಿಗ್ರಹಮೂರ್ತಿಯನ್ನು ಕೂರಿಸಲಾಯಿತು. ದೇಗುಲದ ಧರ್ಮಾಧಿಕಾರಿ, ಅರ್ಚಕರು, ಭಕ್ತರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ರಾತ್ರಿ 9ಗಂಟೆಗೆ ಉತ್ಸವಕ್ಕೆ ಚಾಲನೆ ನೀಡಲಾಯಿತು. ಪ್ರಮುಖ ರಸ್ತೆ, ಪ್ರಾಥಮಿಕ ಶಾಲೆ, ಕೆರೆ ಏರಿಯ ಮೂಲಕ ಗ್ರಾಮದ ಹೊರವಲಯದಲ್ಲಿರುವ ದೇವರಗುಡಿಯ ಮಂಟಪದವರೆಗೆ ಉತ್ಸವದ ಮೆರವಣಿಗೆ ನಡೆಸಲಾಯಿತು.
ಉತ್ಸವದಲ್ಲಿ ದಾರಿಯುದ್ದಕ್ಕೂ ಯುವಕರು ತಮಟೆಯ ತಾಳಕ್ಕೆ ಕುಣಿದು ಕುಪ್ಪಳಿಸಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ವೇಳೆ ಭಕ್ತರು ಗೋವಿಂದ ಗೋವಿಂದಾ, ಜಯಘೋಷಗಳನ್ನು ಮೊಳಗಿಸುವುದರ ಮೂಲಕ ಭಕ್ತಿ ಭಾವ ಮೆರೆದರು.