ಚಾಮರಾಜನಗರ ತಾಲೂಕಿನ ಮಂಗಲ ಬಳಿಯ ಶಂಕರೇಶ್ವರ ಬೆಟ್ಟದಲ್ಲಿ ಚಾಮರಾಜನಗರ ಮತ್ತು ಯಳಂದೂರು ತಾಲೂಕು ಪಿಎಸಿಸಿ ನೌಕರರ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಂಡಿಸಿಸಿ ಬ್ಯಾಂಕ್ ನೂತನ ಉಪಾಧ್ಯಕ್ಷ ವೈ.ಎಂ.ಜಯರಾಮ್ ಅವರನ್ನು ಸನ್ಮಾಸಲಾಯಿತು. ಕೆಂಪನಪುರ ಮಹದೇವಪ್ಪ, ಮಹದೇವಯ್ಯ, ಜಯಶಂಕರ್,ಮಹೇಶ್, ಸತೀಶ್ ಜೋಷಿ ಇದ್ದರು.
- ಎಂಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವೈ.ಎಂ. ಜಯರಾಮ್ ಭರವಸೆ
- ಸೌಲಭ್ಯ ನೀಡಲು ಅಡಳಿತ ಮಂಡಲಿ ಸಭೆಯಲ್ಲಿ ಚರ್ಚಿಸಿ, ಕ್ರಮ
ಚಾಮರಾಜನಗರ: ಮೈಸೂರು ಮತ್ತು ಚಾಮರಾಜನಗರ ಕೇಂದ್ರ ಸಹಕಾರ ಬ್ಯಾಂಕ್ ವ್ಯಾಪ್ತಿಯಲ್ಲಿರುವ ಪಿಎಸಿಸಿ ನೌಕರರ ಸೇವಾ ಹಿರಿತನ ಆಧಾರದಲ್ಲಿ ಸವಲತ್ತು ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ವಹಿಸುವ ಜತೆಗೆ ನೌಕರರ ಹಿತರಕ್ಷಣೆಗೆ ಬದ್ಧನಾಗಿರುವುದಾಗಿ ಎಂಡಿಸಿಸಿ ಬ್ಯಾಂಕ್ ನೂತನ ಉಪಾಧ್ಯಕ್ಷ ವೈ.ಎಂ. ಜಯರಾಮ್ ಭರವಸೆ ನೀಡಿದರು.
ನಗರದ ಮಂಗಲ ಬಳಿ ಇರುವ ಶಂಕರದೇವರ ಬೆಟ್ಟದಲ್ಲಿ ಚಾಮರಾಜನಗರ ಮತ್ತು ಯಳಂದೂರು ತಾಲೂಕು ಪಿಎಸಿಸಿ ನೌಕರರ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ರೈತರು, ಬ್ಯಾಂಕ್ ಮತ್ತು ಸರ್ಕಾರಗಳ ಸೇತುವೆಯಾಗಿ ಪಿಎಸಿಸಿ ಬ್ಯಾಂಕ್ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಸೇವಾ ಹಿರಿತನ ಮತ್ತು ಸಂಘದ ಅರ್ಥಿಕ ವಹಿವಾಟು ಗಮನಿಸಿ, ನೌಕರರಿಗೆ ನಿವೃತ್ತಿಯ ನಂತರ ಗೌರವಧನ, ಅಕಾಲಿಕ ಮರಣ ಹಾಗೂ ಅಪಘಾತ ಪರಿಹಾರ ಸೇರಿದಂತೆ ಅನೇಕ ಸೌಲಭ್ಯ ನೀಡಲು ಅಡಳಿತ ಮಂಡಲಿ ಸಭೆಯಲ್ಲಿ ಚರ್ಚಿಸಿ, ಕ್ರಮ ವಹಿಸುವುದಾಗಿ ತಿಳಿಸಿದರು.
ರೈತರಿಗೆ ಸಕಾಲದಲ್ಲಿ ಸಾಲ ನೀಡುವ ಜತೆಗೆ ಮರು ಪಾವತಿಯನ್ನು ಸರಿಯಾಗಿ ಮಾಡಿಸಿದರೆ, ಬ್ಯಾಂಕ್ ಹಾಗೂ ಸಂಘಕ್ಕೆ ಲಾಭವಾಗುತ್ತದೆ. ಈ ನಿಟ್ಟಿನಲ್ಲಿ ನೌಕರರು ಹೆಚ್ಚಿನ ಶ್ರಮ ವಹಿಸಬೇಕು. ಈಗ ನೀಡಿರುವ ಹೆಚ್ಚುವರಿ ಹಣವನ್ನು ಶೇ.10ಕ್ಕೆ ಏರಿಕೆ ಮಾಡುವುದಾಗಿ ತಿಳಿಸಿದರು. ಇದಕ್ಕೂ ಮುನ್ನ ನೌಕರರ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿ, ಶಿವಮೊಗ್ಗ ಎಂಡಿಸಿಸಿ ಬ್ಯಾಂಕ್ ಮಾದರಿಯಲ್ಲಿ ಪಿಎಸಿಸಿ ನೌಕರರಿಗೆ ಗೌರವ ಧನ ನೀಡಬೇಕು. ಸೇವಾ ಭದ್ರತೆ ಹಾಗೂ ಇತರ ಸೌಲಭ್ಯ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ನೂತನ ಎಂಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವೈ.ಎಂ. ಜಯರಾಮ್ ಅವರನ್ನು ಸಂಘದಿಂದ ಮೈಸೂರು ಪೇಟಾ ತೊಡಿಸಿ, ಶಾಲು, ಹಾರ ಹಾಕಿ, ಫಲತಾಂಬೂಲು ನೀಡಿ ಅಭಿನಂದಿಸಿದರು. ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆಂಪನಪುರ ಮಹದೇವಪ್ಪ, ಉಪಾಧ್ಯಕ್ಷ ಮಹದೇವಯ್ಯ, ಕಾರ್ಯದರ್ಶಿ ಜಯಶಂಕರ್, ಖಜಾಂಚಿ ಮಹೇಶ್, ಸಂಚಾಲಕ ಸತೀಶ್ ಜೋಷಿ ಸೇರಿದಂತೆ ಸಂಘದ ಸದಸ್ಯರು ಇದ್ದರು.